×
Ad

ಅಧಿಕಾರಿಗಳ ಕಣ್ತಪ್ಪಿಸಿ ಆಂಧ್ರಕ್ಕೆ ಪ್ರಯಾಣಿಸಿದ್ದ ಬ್ರಿಟನ್ ನಿಂದ ಬಂದ ಕೊರೋನ ಸೋಂಕಿತ ಮಹಿಳೆ ವಶಕ್ಕೆ

Update: 2020-12-24 20:08 IST

ಅಮರಾವತಿ, ಡಿ.24: ಬ್ರಿಟನ್‌ನಿಂದ ದಿಲ್ಲಿಗೆ ಆಗಮಿಸಿದ ಕೊರೋನ ಸೋಂಕಿತ ಮಹಿಳೆಯೊಬ್ಬರು ಅಧಿಕಾರಿಗಳ ಕಣ್ಣುತಪ್ಪಿಸಿ ರೈಲಿನ ಮೂಲಕ ಆಂಧ್ರಪ್ರದೇಶದಲ್ಲಿರುವ ತನ್ನ ಮನೆಗೆ ತೆರಳಿದ ಘಟನೆ ವರದಿಯಾಗಿದೆ.

ಬಳಿಕ ಈ ಮಹಿಳೆಯನ್ನು ಪತ್ತೆಹಚ್ಚಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬ್ರಿಟನ್‌ನಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳೆಯೊಬ್ಬರು ಡಿಸೆಂಬರ್ 21ರಂದು ವಿಮಾನದ ಮೂಲಕ ದಿಲ್ಲಿ ವಿಮಾನನಿಲ್ದಾಣಕ್ಕೆ ಆಗಮಿಸಿದ್ದು ಆ ಸಂದರ್ಭ ನಡೆಸಲಾದ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಅವರನ್ನು ದಿಲ್ಲಿಯಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಆದರೆ ಅಲ್ಲಿಂದ ತಪ್ಪಿಸಿಕೊಂಡ ಮಹಿಳೆ, ತನ್ನನ್ನು ಕರೆದುಕೊಂಡು ಹೋಗಲು ಬಂದಿದ್ದ ಪುತ್ರನ ಜತೆ ರೈಲಿನ ಮೂಲಕ ಆಂಧ್ರಪ್ರದೇಶಕ್ಕೆ ಪ್ರಯಾಣಿಸಿದ್ದಾರೆ. ರೈಲು ನಿಲ್ದಾಣದಲ್ಲಿ ತಪಾಸಣೆ ಸಂದರ್ಭ, ತನಗೆ ಕೊರೋನ ಸೋಂಕಿನ ಲಕ್ಷಣ ಇರದ ಕಾರಣ ಮನೆಯಲ್ಲೇ ಕ್ವಾರಂಟೈನ್ ಆಗುವಂತೆ ವಿಮಾನ ನಿಲ್ದಾಣದ ಅಧಿಕಾರಿಗಳು ಶಿಫಾರಸು ಮಾಡಿದ್ದಾರೆ ಎಂದು ಹೇಳಿದ್ದಾರೆ.

ಈ ಮಧ್ಯೆ, ದಿಲ್ಲಿ ಪೊಲೀಸರು ನೀಡಿದ ಮಾಹಿತಿಯಂತೆ ರೈಲ್ವೇ ಪೊಲೀಸರು ತಪಾಸಣೆ ನಡೆಸಿದಾಗ ರೈಲಿನ ಪ್ರಥಮ ದರ್ಜೆ ಬೋಗಿಯಲ್ಲಿ ಪ್ರಯಾಣಿಸುತ್ತಿರುವುದು ತಿಳಿದುಬಂದಿದೆ. ಅದರಂತೆ ರಾಜಮಹೇಂದ್ರವರ್ಮ ರೈಲು ನಿಲ್ದಾಣದಲ್ಲಿ ಇವರಿಬ್ಬರು ಇಳಿಯುತ್ತಿದ್ದಂತೆ ಇಬ್ಬರನ್ನೂ ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆ ರೂಪಾಂತರಿತ ಕೊರೋನ ಸೋಂಕು ಪೀಡಿತರಾಗಿದ್ದಾರೆಯೇ ಎಂಬುದನ್ನು ದೃಢಪಡಿಸಲು ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News