ತಬ್ಲೀಗಿ ಜಮಾಅತ್: 18 ವಿದೇಶೀಯರ ವಿರುದ್ಧದ ಪ್ರಕರಣ ರದ್ದು
ಪಾಟ್ನಾ, ಡಿ.24: ತಬ್ಲೀಗಿ ಜಮಾಅತ್ ಸಮಾವೇಶಕ್ಕೆ ಸಂಬಂಧಿಸಿ 18 ವಿದೇಶಿ ಪ್ರಜೆಗಳ ವಿರುದ್ಧದ ಕಾನೂನು ಕ್ರಮ ಪ್ರಕ್ರಿಯೆಯನ್ನು ಪಾಟ್ನಾದ ಹೆಚ್ಚುವರಿ ನ್ಯಾಯಪೀಠ ರದ್ದುಗೊಳಿಸಿದೆ. ಈ ವ್ಯಕ್ತಿಗಳು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದನ್ನು ಮೇಲ್ನೋಟಕ್ಕೆ ಸಾಬೀತುಪಡಿಸುವ ಯಾವುದೇ ಪುರಾವೆಯಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಬಾಂಗ್ಲಾದೇಶದಿಂದ ಪ್ರವಾಸಿ ವೀಸಾದಡಿ ಪಶ್ಚಿಮಬಂಗಾಳಕ್ಕೆ ನಡೆದುಕೊಂಡು ಬಂದಿದ್ದ ತಾವು ದಿಲ್ಲಿಯ ನಿಝಾಮುದ್ದೀನ್ ಮಸೀದಿಗೆ , ತಬ್ಲೀಗಿ ಜಮಾಅತ್ ಸಮಾವೇಶ ನಡೆಯುವ ಮೊದಲೇ ಭೇಟಿ ನೀಡಿ ಮಾರ್ಚ್ 11ರಂದು ಬಿಹಾರದ ಅರಾರಿಯಾ ಪಟ್ಟಣ ತಲುಪಿದ್ದೆವು. ಇಲ್ಲಿಯ ರವಾಹಿ ಮಸೀದಿಯಲ್ಲಿ ತಂಗಿದ್ದ ಸಂದರ್ಭ, ಮಾರ್ಚ್ 24ರಿಂದ ದೇಶಾದ್ಯಂತ ಲಾಕ್‌ಡೌನ್ ಜಾರಿಯಾದ್ದರಿಂದ ಅಲ್ಲೇ ಇರುವಂತಾಯಿತು. ನಂತರ ಸ್ಥಳೀಯಾಡಳಿತ ತಮ್ಮನ್ನು ಕೊರೋನ ಸೋಂಕು ಪರೀಕ್ಷೆಗೆ ಒಳಪಡಿಸಿ ಕ್ವಾರಂಟೈನ್‌ನಲ್ಲಿರಿಸಿದೆ.
ಈ ಮಧ್ಯೆ, ಸ್ಥಳೀಯ ಪ್ರಾಧಿಕಾರಕ್ಕೆ ತಾವು ಉಳಿದುಕೊಂಡ ಸ್ಥಳದ ಬಗ್ಗೆ ಮಾಹಿತಿ ನೀಡದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅರ್ಜಿದಾರರು ನ್ಯಾಯಪೀಠದ ಗಮನಕ್ಕೆ ತಂದರು. ಕೆಲವು ಅಂತರ್ ರಾಷ್ಟ್ರೀಯ ಸ್ಥಳಗಳಿಂದ ಬಂದ ವಿದೇಶಿ ಪ್ರಜೆಗಳಿಗೆ ಭಾರತದಲ್ಲಿ ಮಸೀದಿಗಳಲ್ಲಿ ವಸತಿ ಕಲ್ಪಿಸಲಾಗುತ್ತಿದೆ ಎಂಬ ವಾಸ್ತವದ ಬಗ್ಗೆ ಭಾರತ ಸರಕಾರಕ್ಕೆ ಅರಿವಿದೆ ಎಂದು ಹೇಳಿದ ನ್ಯಾಯಮೂರ್ತಿ ರಂಜನ್ ಪ್ರಸಾದ್ ನೇತೃತ್ವದ ನ್ಯಾಯಪೀಠ, ಈ ಪ್ರಕರಣದಲ್ಲಿ ವಿದೇಶಿ ಪ್ರಜೆಗಳು ತಾವು ಉಳಿದುಕೊಂಡಿರುವ ಸ್ಥಳದ ಬಗ್ಗೆ ಮಾಹಿತಿ ನೀಡಿಲ್ಲ ಎಂಬ ಆರೋಪ ತಪ್ಪು ಗ್ರಹಿಕೆಯಿಂದ ಕೂಡಿದೆ. ಆದ್ದರಿಂದ ಅವರ ವಿರುದ್ಧ ಕಾನೂನು ಕ್ರಮದ ಪ್ರಕ್ರಿಯೆಯನ್ನು ಮುಂದುವರಿಸಲು ಯಾವುದೇ ಆಧಾರವಿಲ್ಲ ಎಂದು ತೀರ್ಪು ನೀಡಿದ್ದಾರೆ.