ಜೈನ್ ಕಾಲೇಜಿನ ಆವರಣದಲ್ಲಿದ್ದ ಪ್ರತಿಮೆಯನ್ನು ತೆರವುಗೊಳಿಸುವಂತೆ ಎಬಿವಿಪಿ ಕಾರ್ಯಕರ್ತರಿಂದ ಬೆದರಿಕೆ

Update: 2020-12-24 15:06 GMT

ಲಕ್ನೊ, ಡಿ.24: ಉತ್ತರಪ್ರದೇಶದ ಭಾಗಪತ್ ಜಿಲ್ಲೆಯ ದಿಗಂಬರ ಜೈನ್ ಕಾಲೇಜಿನ ಆವರಣದಲ್ಲಿರುವ ಪ್ರತಿಮೆ ಮತ್ತು ಜೈನ ದೇವಸ್ಥಾನವನ್ನು ಧ್ವಂಸಗೊಳಿಸುವುದಾಗಿ ಎಬಿವಿಪಿ ಕಾರ್ಯಕರ್ತರು ಬೆದರಿಕೆ ಒಡ್ಡಿರುವುದಾಗಿ ಕಾಲೇಜಿನ ಆಡಳಿತ ಮಂಡಳಿ ಆರೋಪಿಸಿದೆ.

ಎಬಿವಿಪಿ ಎಂದು ಬರೆದಿರುವ ಕೇಸರಿ ಶಾಲು ಧರಿಸಿದ ವ್ಯಕ್ತಿಗಳ ತಂಡವೊಂದು ದೇವಸ್ಥಾನದ ಎದುರು ನಿಂತು ‘ವಿದ್ಯಾರ್ಥಿ ಪರಿಷದ್ ಜಿಂದಾಬಾದ್, ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗುತ್ತಿರುವ, ಅವರನ್ನು ಸಮಾಧಾನ ಪಡಿಸಲು ಪೊಲೀಸರು ಪ್ರಯತ್ನಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾಲೇಜಿನ ಆವರಣದಲ್ಲಿರುವ ಪ್ರತಿಮೆಯನ್ನು ತೆಗೆದು ಅಲ್ಲಿ ಸರಸ್ವತಿ ದೇವಿಯ ಪ್ರತಿಮೆ ಸ್ಥಾಪಿಸುವಂತೆ ಕಾರ್ಯಕರ್ತರು ಆಗ್ರಹಿಸಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ವೀರೇಂದ್ರ ಸಿಂಗ್ ದೂರು ನೀಡಿದ್ದಾರೆ. ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಮೂಲಗಳು ಹೇಳಿವೆ.

ಕಾಲೇಜಿನ ಸುಮಾರು 30 ವಿದ್ಯಾರ್ಥಿಗಳು ಹಾಗೂ ಹೊರಗಿನ ಕೆಲವರು ಪ್ರತಿಮೆಯನ್ನು ಧ್ವಂಸಗೊಳಿಸಲು ಪ್ರಯತ್ನಿಸಿದ್ದಾರೆ. ಈ ಪುಂಡ ವಿದ್ಯಾರ್ಥಿಗಳು ದೇವಸ್ಥಾನಕ್ಕೆ ಹಾನಿ ಎಸಗುತ್ತಾರೆ ಎಂದು ಭೀತರಾಗಿದ್ದೆವು. ಪ್ರತಿಮೆಯನ್ನು ಅಲ್ಲಿಂದ ತೆಗೆದು ಸರಸ್ವತಿ ದೇವಿಯ ಪ್ರತಿಮೆ ಸ್ಥಾಪಿಸುವಂತೆ ಅವರು ಎಚ್ಚರಿಕೆ ನೀಡಿದ್ದಾರೆ ಎಂದು ಪ್ರಾಂಶುಪಾಲರು ಹಾಗೂ ಕಾಲೇಜಿನ ಜಂಟಿ ಕಾರ್ಯದರ್ಶಿ ಡಿ.ಕೆ. ಜೈನ್ ದೂರು ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿ ಅಜಯ್ ಶರ್ಮ, ಕಾಲೇಜು ಆವರಣದಲ್ಲಿದ್ದ ಸರಸ್ವತಿ ದೇವಿಯ ಪ್ರತಿಮೆಯನ್ನು ಬದಲಾಯಿಸಿ ಅಲ್ಲಿ ಜೈನ ಧರ್ಮೀಯರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ ಎಂದು ಕೆಲವು ವಿದ್ಯಾರ್ಥಿಗಳು ತಪ್ಪು ತಿಳಿದಿದ್ದರು. ಈ ಗೊಂದಲವನ್ನು ಪರಿಹರಿಸಲಾಗಿದೆ. ಎರಡೂ ಕಡೆಯವರಿಗೆ ವಿಷಯವನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ. ದೂರಿನ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದವರು ಹೇಳಿದ್ದಾರೆ. ಇತ್ತೀಚೆಗೆ ಪ್ರತಿಮೆಯ ಜೀರ್ಣೋದ್ಧಾರ ಕಾರ್ಯ ನಡೆದಿದೆ. ಆ ಬಳಿಕ, ಸರಸ್ವತಿ ಪ್ರತಿಮೆಯನ್ನು ಜೈನ ತೀರ್ಥಂಕರರ ಪ್ರತಿಮೆಯ ಕೆಳಗಡೆ ಇರಿಸಲಾಗಿದೆ ಎಂದು ವದಂತಿ ಹಬ್ಬಿಸಲಾಗಿದೆ. ಇದನ್ನು ನಂಬಿದ ಕೆಲವರು ಚಪ್ಪಲಿ ಧರಿಸಿಕೊಂಡು ದೇವಸ್ಥಾನದೊಳಗೆ ಪ್ರವೇಶಿಸಿದ್ದಾರೆ. 7 ದಿನದೊಳಗೆ ಪ್ರತಿಮೆ ಸ್ಥಳಾಂತರಿಸದಿದ್ದರೆ ದೇವಸ್ಥಾನವನ್ನು ಧ್ವಂಸಗೊಳಿಸುವುದಾಗಿ ಎಚ್ಚರಿಸಿದ್ದಾರೆ ಎಂದು ಪ್ರಾಂಶುಪಾಲರು ಮಾಹಿತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News