ಉಡುಪಿ : ಕೊರೋನ ಭೀತಿ ನಡುವೆಯೂ ಸರಳ ಕ್ರಿಸ್ಮಸ್ ಆಚರಣೆ
ಉಡುಪಿ, ಡಿ. 24: ಕೊರೋನ ಭೀತಿಯ ನಡುವೆಯೂ ಏಸುಕ್ರಿಸ್ತರ ಜನ್ಮದಿನವಾದ ಕ್ರಿಸ್ಮಸ್ ಹಬ್ಬವನ್ನು ಉಡುಪಿ ಜಿಲ್ಲೆಯಾದ್ಯಂತ ಗುರುವಾರ ರಾತ್ರಿ ಶ್ರದ್ಧೆ ಮತ್ತು ಭಕ್ತಿಯಿಂದ ಸರಳವಾಗಿ ಆಚರಿಸಿದರು.
ಗುರುವಾರ ರಾತ್ರಿ ಜಿಲ್ಲೆಯ ಎಲ್ಲಾ ಚರ್ಚ್‌ಗಳಲ್ಲಿ ರಾಜ್ಯ ಸರಕಾರದ ಕೋವಿಡ್ ನಿಯಮಾನುಸಾರ ವಿಶೇಷ ಪ್ರಾರ್ಥನೆ, ಕ್ರಿಸ್ಮಸ್ ಗೀತೆಗಳ ಗಾಯನ ಜರಗಿದವು.
ಹಬ್ಬದ ವಿಶೇಷ ಬಲಿಪೂಜೆಯನ್ನು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ರಾದ ಅ.ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ತಮ್ಮ ಅಧಿಕೃತ ಚರ್ಚ್ ಆದ ಕಲ್ಯಾಣಪುರದ ಮಿಲಾಗ್ರಿಸ್ ಕೆಥೆಡ್ರಲ್‌ನಲ್ಲಿ ಬಲಿಪೂಜೆ ಅರ್ಪಿಸಿ ಹಬ್ಬದ ಸಂದೇಶ ನೀಡಿದರು. ಈ ವೇಳೆ ಚರ್ಚಿನ ಪ್ರಧಾನ ಧರ್ಮ ಗುರು ವಂ. ವಲೇರಿಯನ್ ಮೆಂಡೋನ್ಸಾ, ಸಹಾಯಕ ಧರ್ಮಗುರು ವಂ.ಕೆನ್ಯೂಟ್ ನೊರೊನ್ಹಾ ಹಾಗೂ ಅತಿಥಿ ಧರ್ಮಗುರುಗಳು ಉಪಸ್ಥಿತರಿದ್ದರು.
ಬಲಿಪೂಜೆಗೂ ಮುನ್ನ ಯೇಸುವಿನ ಜನನ ವೃತ್ತಾಂತ ನೆನಪಿಸುವ ಕ್ರಿಸ್ಮಸ್ ಕ್ಯಾರಲ್ ಗೀತೆಗಳನ್ನು ನಟನೆಯ ಮೂಲಕ ಆಡಿ ತೋರಿಸಲಾಯಿತು. ಕ್ರಿಸ್ಮಸ್ ಹಬ್ಬದ ಸಂದೇಶ ನೀಡಿ ಮಾತನಾಡಿದ ಬಿಷಪ್ ಅ.ವಂ.ಡಾ. ಲೋಬೊ, ಮನುಜಕುಲಕ್ಕೆ ದೇವರ ಪ್ರೀತಿಯ ಅಗಾಧತೆಯನ್ನು ತಿಳಿಸುವ, ಶಾಂತಿ ಸಂದೇಶವನ್ನು ಸಾರುವ ಹಬ್ಬ ಕ್ರಿಸ್‌ಮಸ್. ಕ್ರಿಸ್ತಜಯಂತಿ ಹಬ್ಬದ ಆಚರಣೆಯಲ್ಲಿ ಜಗತ್ತಿನಾದ್ಯಂತ ವೈವಿಧ್ಯ ತೆಯಿದ್ದರೂ, ಯೇಸುಕ್ರಿಸ್ತರ ಜನನದ ಸಂದೇಶದಲ್ಲಿ ಏಕತೆಯಿದೆ. ಆತನು ಶಾಂತಿ,ಪ್ರೀತಿ, ಸಹಕಾರ, ಸೌಹಾರ್ದತೆಗಳ ಸಾಕಾರ ಮೂತಿ ಎಂಬುದನ್ನು ಕ್ರಿಸ್ಮಸ್ ಸಾರುತ್ತದೆ ಎಂದರು.
ಜಗತ್ತು ಇಂದು ಕೋವಿಡ್-19 ರೋಗದ ಭೀತಿ, ಶೋಷಣೆ, ಭಯ, ಕಳವಳ, ಹಿಂಸೆ, ಗಲಭೆ, ಅಸಮಾನತೆಯ ವಾತಾವರಣದಲ್ಲಿ ಜೀವಿಸು ತ್ತಿರಲು ಯೇಸುಕ್ರಿಸ್ತನ ಶಾಂತಿ-ಸಂದೇಶ ಸಾರುವ ಕ್ರಿಸ್ಮಸ್ ಹಬ್ಬವು ಮುಂಜಾನೆಯ ಸೂರ್ಯರಶ್ಮಿಯಂತೆ ಆಹ್ಲಾದಕರವಾಗಿದೆ ಕಳೆದೊಂದು ವರ್ಷದಿಂದ ಎಲ್ಲಾ ಮನುಷ್ಯರನ್ನು ಕಾಡುತ್ತಿರುವ ಕೋವಿಡ್-19 ಸೋಂಕು ಈ ಜಗತ್ತಿಗೆ ಅತ್ಯಂತ ಅಮೂಲ್ಯವಾದ ಕೆಲವು ಪಾಠಗಳನ್ನು ಕಲಿ ಸಿದೆ. ಮಾನವರೆಲ್ಲರೂ ಒಂದೇ ಕುಟುಂಬ. ಎಲ್ಲರೂ ಪರಸ್ಪರ ಸಂಬಂಧಿತರು, ಸಹೋದರ ಸಹೋದರಿಯರು. ಕೋವಿಡ್ ಸೋಂಕಿನಿಂದ ಮುಕ್ತ ರಾಗಲು ಎಲ್ಲರೂ ಜೊತೆಗೂಡಿ ಸಹಕರಿಸುವ ಅಗತ್ಯವಿದೆ ಎಂಬುದನ್ನು ನಮಗೆ ಕಲಿಸಿದೆ ಎಂದು ಧರ್ಮಾಧ್ಯಕ್ಷರು ತಮ್ಮ ಸಂದೇಶದಲ್ಲಿ ತಿಳಿಸಿದರು.
ಜಗಮಗಿಸಿದ ಚರ್ಚ್‌ಗಳು: ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಇಡೀ ಜಿಲ್ಲೆಯ ಚರ್ಚ್‌ಗಳು ವರ್ಣಮಯ ವಿದ್ಯುತ್ ಅಲಂಕಾರ ಹಾಗೂ ಬಗೆಬಗೆಯ ಚಿತ್ತಾಕರ್ಷಕ ನಕ್ಷತ್ರಗಳಿಂದ ಕಂಗೊಳಿಸುತಿದ್ದವು.ಕೋವಿಡ್ ನಿಯಮಾವಳಿಯ ಹಿನ್ನೆಲೆಯಲ್ಲಿ ಜಿಲ್ಲೆಯ ಚರ್ಚುಗಳಲ್ಲಿ ಸೀಮಿತ ಸಂಖ್ಯೆಯ ಭಕ್ತಾದಿಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು, ಹೆಚ್ಚಿನ ಚರ್ಚುಗಳಲ್ಲಿ ಬಲಿಪೂಜೆಯನ್ನು ನೇರ ಪ್ರಸಾರದ ಮೂಲ ವೀಕ್ಷಿಸಲು ಅವಕಾಶ ನೀಡಲಾಗಿತ್ತು.
ಗುರುವಾರ ರಾತ್ರಿ ಪೂಜೆಯ ವೇಳೆ ಸಿಂಗರಿಸಿಟ್ಟ ಗೋದಲಿಯಲ್ಲಿ ಬಾಲಯೇಸು ಮೂರ್ತಿಯನ್ನು ಇಟ್ಟು ದೇವರ ಸ್ತುತಿ, ಜೋಗುಳದ ಮೂಲಕ ಭಕ್ತರು ಆರಾಧಿಸಿದರು. ಮೇಣದಬತ್ತಿಗಳನ್ನು ಬೆಳಗಿಸಿ ಹೂವು ಸುಗಂಧಗಳನ್ನು ಅರ್ಪಿಸುವ ಮೂಲಕ ಯೇಸುಸ್ವಾಮಿಯ ಜನನವನ್ನು ಸ್ವಾಗತಿಸಲಾಯಿತು.
ಜಿಲ್ಲೆಯ ಪ್ರಮುಖ ಚರ್ಚುಗಳಾದ ಶಿರ್ವ ಆರೋಗ್ಯಮಾತೆಯ ದೇವಾಲಯ ದಲ್ಲಿ ಧರ್ಮಗುರು ವಂ. ಡೆನಿಸ್ ಡೇಸಾ, ಉಡುಪಿ ಶೋಕಮಾತಾ ಇಗರ್ಜಿಯಲ್ಲಿ ಧರ್ಮಗುರು ವಂ.ಚಾರ್ಲ್ಸ್ ಮಿನೇಜಸ್, ಕುಂದಾಪುರ ಹೋಲಿ ರೋಸರಿ ಚರ್ಚ್‌ನಲ್ಲಿ ವಂ.ಸ್ಟಾನ್ಲಿ ತಾವ್ರೊ, ಕಾರ್ಕಳದ ಅತ್ತೂರು ಸಂತ ಲಾರೆನ್ಸ್ ಬಾಸಿಲಿಕಾದಲ್ಲಿ ವಂ. ಜೋರ್ಜ್ ಡಿಸೋಜ ಅವರ ನೇತೃತ್ವದಲ್ಲಿ ಕ್ರಿಸ್ಮಸ್ ಆಚರಣೆಯ ಬಲಿಪೂಜೆಗಳು ನೆರವೇರಿದವು.
ಸರಕಾರದ ಕೋವಿಡ್ ನಿಯಮಾವಳಿಯಂತೆ ಎಲ್ಲಾ ಚರ್ಚುಗಳಲ್ಲಿ ಸುರಕ್ಷತಾ ಅಂತರವನ್ನು ಕಾಯ್ದುಕೊಂಡು, ಮಾಸ್ಕ್ ಧರಿಸಿ, ಥರ್ಮಲ್ ಸ್ಕೃಿನೀಂಗ್ ಮತ್ತು ಸ್ಯಾನಟೈಜರ್ ವ್ಯವಸ್ಥೆ ಮಾಡಲಾಗಿತ್ತು.
ರಾಜ್ಯ ಸರಕಾರದ ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಚರ್ಚುಗಳಲ್ಲಿ 10 ಗಂಟೆಗೆ ಮೊದಲೇ ರಾತ್ರಿ ಪೂಜೆಗಳನ್ನು ಕೊನೆಗೊಳಿಸಲಾಗಿತ್ತು. ಅಲ್ಲದೇ ಸಾಂಸ್ಕೃತಿಕ ಕಾರ್ಯಕ್ರಮ, ಸಾಂತಾಕ್ಲಾಸ್ ವೇಷ ಇವುಗಳನ್ನು ರದ್ದುಗೊಳಿಸಲಾಗಿತ್ತು. ಹಸ್ತಲಾಘವದ ಮೂಲಕ ಕ್ರಿಸ್ಮಸ್ ಹಬ್ಬದ ಶುಭಾಶಯಗಳ ವಿನಿಮಯಕ್ಕೆ ಕೂಡಾ ಬ್ರೇಕ್ ಹಾಕಲಾಗಿತ್ತು.