ಶಬರಿಮಲೆ: ಭಕ್ತರ ಸಂಖ್ಯೆ ಹೆಚ್ಚಳಕ್ಕೆ ಹೈಕೋರ್ಟ್ ಆದೇಶ

Update: 2020-12-24 15:10 GMT

ಹೊಸದಿಲ್ಲಿ, ಡಿ. 24: ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ತೆರಳುವ ಭಕ್ತರ ಸಂಖ್ಯೆಯನ್ನು 5 ಸಾವಿರದವರೆಗೆ ಹೆಚ್ಚಿಸಿ ಹೈಕೋರ್ಟ್ ನೀಡಿದ ಆದೇಶ ಪ್ರಶ್ನಿಸಿ ಕೇರಳ ಸರಕಾರ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದೆ. ಡಿಸೆಂಬರ್ 20ರಿಂದ ಶಬರಿಮಲೆ ದೇವಾಲಯಕ್ಕೆ ತೆರಳುವ ಭಕ್ತರ ಸಂಖ್ಯೆಯನ್ನು 5 ಸಾವಿರದ ವರೆಗೆ ಹೆಚ್ಚಿಸಿ ಕೇರಳ ಹೈಕೋರ್ಟ್ ಇತ್ತೀಚೆಗೆ ಆದೇಶ ನೀಡಿತ್ತು. ಕೊರೋನ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಪ್ರತಿ ದಿನ 2,000 ಹಾಗೂ ವಾರಾಂತ್ಯದಲ್ಲಿ 3,000 ಭಕ್ತರಿಗೆ ದೇವಾಲಯಕ್ಕೆ ಭೇಟಿಗೆ ಅವಕಾಶ ನೀಡಲು ಕೇರಳ ಸರಕಾರ ಬಯಸಿತ್ತು.

ಆರೋಗ್ಯ ಸಚಿವಾಲಯದ ಸಲಹೆಯ ಆಧಾರದಲ್ಲಿ ಉನ್ನತ ಮಟ್ಟದ ಸಮಿತಿ ಶಬರಿಮಲೆಗೆ ತೆರಳುವ ಭಕ್ತರ ಸಂಖ್ಯೆಯ ಮಿತಿಯನ್ನು ನಿರ್ಧರಿಸಿತ್ತು ಎಂದು ಕೇರಳ ಸರಕಾರ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಮೇಲ್ಮನವಿಯಲ್ಲಿ ಹೇಳಿದೆ. ‘‘ಬ್ರಿಟನ್‌ನಲ್ಲಿ ಹೊಸ ರೂಪಾಂತರಿತ ಕೊರೋನ ವೈರಸ್ ಪತ್ತೆಯಾಗಿರುವುದರಿಂದ ಹಾಗೂ ಕೇಂದ್ರ ಸರಕಾರ ನಿರ್ಬಂಧ ವಿಧಿಸಿರುವುದರಿಂದ ಭಕ್ತರ ಸಂಖ್ಯೆಯನ್ನು ಹೆಚ್ಚಿಸುವುದು ಅಸಾಧ್ಯ. ರಾಜ್ಯ ಸಮಿತಿಯ ವರದಿ ಪರಿಗಣಿಸದೆ ಹೈಕೋರ್ಟ್ ದೇಗುಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯನ್ನು 5 ಸಾವಿರಕ್ಕೆ ಏರಿಕೆ ಮಾಡಿ ಆದೇಶ ನೀಡಿದೆ’’ ಎಂದು ಅದು ಹೇಳಿದೆ.

‘‘ದೇಗುಲದಲ್ಲಿ ಸರತಿ ಸಾಲನ್ನು ನಿಯಂತ್ರಿಸುವ ಪೊಲೀಸರು ಹಾಗೂ ಯಾತ್ರಾರ್ಥಿಗಳಲ್ಲಿ ಕೊರೋನ ಸೋಂಕು ಕಂಡು ಬಂದಿದೆ. ಭಕ್ತರ ಸಂಖ್ಯೆಯನ್ನು ಹೆಚ್ಚಿಸುವುದರಿಂದ ಪೊಲೀಸರು ಹಾಗೂ ಆರೋಗ್ಯ ಸಿಬ್ಬಂದಿ ಮೇಲೆ ಒತ್ತಡ ಬೀಳುತ್ತದೆ’’ ಎಂದು ರಾಜ್ಯ ಸರಕಾರ ಮೇಲ್ಮನವಿಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News