ಬೋಟಿನಿಂದ ನೀರಿಗೆ ಬಿದ್ದು ಯುವಕ ನಾಪತ್ತೆ

Update: 2020-12-24 15:58 GMT

ಮಲ್ಪೆ, ಡಿ. 24: ಅಳಸಮುದ್ರ ಮೀನುಗಾರಿಕೆ ನಡೆಸುತಿದ್ದ ವೇಳೆ ಅಕಸ್ಮಿಕವಾಗಿ ನೀರಿಗೆ ಬಿದ್ದು ಮೀನುಗಾರರೊಬ್ಬರು ನಾಪತ್ತೆಯಾದ ಪ್ರಕರಣ ಮಲ್ಪೆಯ ಅರಬಿಸಮುದ್ರದಲ್ಲಿ ಡಿ.21ರಂದು ಘಟಿಸಿದೆ. ನಾಪತ್ತೆಯಾದ ಮೀನುಗಾರರನ್ನು ತಮಿಳುನಾಡಿನ ಜಯಪ್ರಕಾಶ್ (35) ಎಂದು ಗುರುತಿಸಲಾಗಿದೆ.

ಇವರು ಮಲ್ಪೆಯ ಸತೀಶ್ ಶೆಟ್ಟಿ ಎಂಬವರ ‘ಶ್ರೀದೇವಿ ಚಾಮುಂಡೇಶ್ವರಿ’ ಮೀನುಗಾರಿಕಾ ಬೋಟಿನಲ್ಲಿ ಕೇಶವ, ಉಮೇಶ, ರಾಜಕುಮಾರ ಹಾಗೂ ಸಿ.ಧನಶೇಖರ ಎಂಬವರೊಂದಿಗೆ ಡಿ.21ರ ಅಪರಾಹ್ನ 3:30ಕ್ಕೆ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆಂದು ತೆರಳಿದ್ದರು.

ಸಂಜೆ 7:30ರ ಸುಮಾರಿಗೆ 27ಮಾರು ದೂರದ ಆಳಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿರುವಾಗ ಸಮುದ್ರದಲ್ಲಿ ತುಫಾನ್ ಜಾಸ್ತಿಯಾಗಿದ್ದು, ಗಾಳಿ ರಭಸದಿಂದ ಬೀಸಿದಾಗ ಬೋಟು ವಾಲಿದಂತಾಗಿ ಬೋಟಿನೊಳಗಿದ್ದ ಜಯಪ್ರಕಾಶ್ ತಮಿಳುನಾಡು ಅಕಸ್ಮಿಕವಾಗಿ ಬೋಟಿನಿಂದ ಸಮುದ್ರದ ನೀರಿಗೆ ಬಿದ್ದಿದ್ದರು. ಅವರನ್ನು ರಕ್ಷಿಸಲು ಉಳಿದವರು ಪ್ರಯತ್ನಿಸುತಿದ್ದಂತೆಯೇ ನೀರಿನಲ್ಲಿ ನಾಪತ್ತೆಯಾಗಿದ್ದರು.

ಬಳಿಕ ಬೋಟಿನವರು ಇತರ ಬೋಟುಗಳೊಂದಿಗೆ ಸೇರಿ ಸಮುದ್ರದಲ್ಲಿ ಹುಡುಕಾಡಿದರೂ ಪತ್ತೆಯಾಗದೇ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News