ಕೃಷಿ ಕಾಯ್ದೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ ಭಾರತೀಯ ಕಿಸಾನ್ ಒಕ್ಕೂಟ
ಹೊಸದಿಲ್ಲಿ, ಡಿ. 24: ಕೇಂದ್ರ ಸರಕಾರ ಜಾರಿಗೆ ತಂದ ನೂತನ ಮೂರು ಕೃಷಿ ಕಾಯ್ದೆಗಳನ್ನು ಪ್ರಶ್ನಿಸಿ ಭಾರತೀಯ ಕಿಸಾನ್ ಒಕ್ಕೂಟ (ಲೋಕಶಕ್ತಿ) ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದೆ.
ವಿಚಾರಣೆಗೆ ಬಾಕಿ ಇರುವ ಪ್ರಕರಣದಲ್ಲಿ ತನ್ನನ್ನೂ ಕಕ್ಷಿದಾರರನ್ನಾಗಿ ಸೇರಿಸುವಂತೆ ಮನವಿಯಲ್ಲಿ ಕೋರಿರುವ ಭಾರತೀಯ ಕಿಸಾನ್ ಒಕ್ಕೂಟ (ಲೋಕಶಕ್ತಿ), ನೂತನ ಕಾಯ್ದೆ ಕಾರ್ಪೋರೇಟ್ ಹಿತಾಸಕ್ತಿಯನ್ನು ಉತ್ತೇಜಿಸುತ್ತದೆ. ರೈತರ ಹಿತಾಸಕ್ತಿ ಬಗ್ಗೆ ಕಾಳಜಿ ಹೊಂದಿಲ್ಲ ಎಂದು ಹೇಳಿದೆ. ಈ ಕಾಯ್ದೆಗಳು ಅಸಾಂವಿಧಾನಿಕ ಹಾಗೂ ರೈತ ವಿರೋಧಿ ಆಗಿರುವುದರಿಂದ ಕೃಷ್ಯುತ್ಪನ್ನಗಳಿಗೆ ನ್ಯಾಯೋಚಿತ ಬೆಲೆ ನೀಡುವ ಉದ್ದೇಶ ಹೊಂದಿರುವ ಎಪಿಎಂಸಿ ವ್ಯವಸ್ಥೆಯನ್ನು ನಾಶಗೊಳಿಸುತ್ತದೆ ಎಂದು ನ್ಯಾಯವಾದಿ ಎ.ಪಿ. ಸಿಂಗ್ ಮೂಲಕ ಸಲ್ಲಿಸಲಾದ ಮನವಿಯಲ್ಲಿ ಭಾರತೀಯ ಕಿಸಾನ್ ಒಕ್ಕೂಟ (ಲೋಕಶಕ್ತಿ) ಹೇಳಿದೆ. ಪ್ರಸಕ್ತ ರೂಪದಲ್ಲಿ ಈ ಕಾಯ್ದೆಯ ಅನುಷ್ಠಾನ ಅನಿಯಂತ್ರಿತ ಪರ್ಯಾಯ ಮಾರುಕಟ್ಟೆ ತೆರೆಯುವ ಮೂಲಕ ರೈತ ಸಮುದಾಯಕ್ಕೆ ವಿನಾಶ ತಂದೊಡ್ಡುತ್ತದೆ. ಅಲ್ಲದೆ, ರೈತರ ಮೇಲೆ ದೌರ್ಜನ್ಯಕ್ಕೆ ಸಾಕಷ್ಟು ಅವಕಾಶ ಮಾಡಿಕೊಡುತ್ತದೆ ಎಂದು ಮನವಿ ಹೇಳಿದೆ.
ಈ ಕಾಯ್ದೆಯಿಂದ ಸಂಪೂರ್ಣ ಕೃಷಿ ಮಾರುಕಟ್ಟೆ ಕಾರ್ಪೊರೇಟೀಕರಣಗೊಳ್ಳುತ್ತದೆ ಹಾಗೂ ಕಾರ್ಪೋರೇಟ್‌ಗಳಿಂದ ಬೆಲೆ ಏರಿಕೆ, ಇಳಿಕೆಯಾಗುತ್ತದೆ ಎಂದು ರೈತರು ಆತಂಕಗೊಂಡಿದ್ದಾರೆ ಎಂದು ಪ್ರತಿಪಾದಿಸಿದೆ. ಸುಪ್ರೀಂ ಕೋರ್ಟ್‌ನಲ್ಲಿ ಈ ಕುರಿತು ವಿಚಾರಣೆಗೆ ಬಾಕಿ ಇರುವ ಪ್ರಕರಣದಲ್ಲಿ ತನ್ನನ್ನು ಕಕ್ಷಿಗಾರನನ್ನಾಗಿ ಸೇರಿಸುವಂತೆ ಭಾರತೀಯ ಕಿಸಾನ್ ಒಕ್ಕೂಟ (ಲೋಕಶಕ್ತಿ) ಸಹಿತ ಹಲವು ರೈತ ಸಂಘಟನೆಗಳು ಮನವಿ ಮಾಡಿವೆ.