ಗೋವುಗಳ ನಿಗೂಢ ಸಾವು; 8 ಮಂದಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲು

Update: 2020-12-24 16:32 GMT

ಲಲಿತ್‌ಪುರ(ಉತ್ತರಪ್ರದೇಶ) , ಡಿ. 23: ಉತ್ತರಪ್ರದೇಶದ ಲಲಿತ್‌ಪುರ ಜಿಲ್ಲೆಯಲ್ಲಿರುವ ಗೋಶಾಲೆಯಲ್ಲಿ 10 ಜಾನುವಾರುಗಳು ನಿಗೂಢವಾಗಿ ಸಾವನ್ನಪ್ಪಿದ ಘಟನೆ ಹಾಗೂ ಅವುಗಳ ಕಳೇಬರವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡದ ಹಿನ್ನೆಲೆಯಲ್ಲಿ 8 ಮಂದಿ ಅಧಿಕಾರಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮುಖ್ಯಪಶುವೈದ್ಯಾಧಿಕಾರಿ ಕೃಷ್ಣ ಶಾಕ್ಯ ಅವರು ನೀಡಿದ ದೂರಿನ ಆಧಾರದಲ್ಲಿ 8 ಮಂದಿ ಅಧಿಕಾರಿಗಳ ವಿರುದ್ಧ ಬುಧವಾರ ಪ್ರಕರಣ ದಾಖಲಿಸಲಾಗಿದೆ ಎಂದು ಮಹ್ರೋನಿ ಸರ್ಕಲ್ ಅಧಿಕಾರಿ ಫೂಲ್ ಚಂದ್ ಯಾದವ್ ಹೇಳಿದ್ದಾರೆ. ಜಿಲ್ಲಾ ಪಂಚಾಯತ್ ರಾಜ್ ಅಧಿಕಾರಿ ಅವದಧೇಶ್ ಸಿಂಗ್, ಬ್ಲಾಕ್ ಅಭಿವೃದ್ಧಿ ಅಧಿಕಾರಿ ಸುನೀಲ್ ಕುಮಾರ್ ಸಿಂಗ್, ಅರಣ್ಯಾಧಿಕಾರಿ ಅಬ್ದುಲ್ ಶಮೀರ್ ಅನ್ಸಾರಿ, ಪಶುಸಂಗೋಪನೆ ಅಧಿಕಾರಿ ರಂಜಿತ್ ಕುಮಾರ್ ಕುಶ್ವಾಹ್, ಕಂದಾಯ ಇನ್ಸ್‌ಪೆಕ್ಟರ್ ಮನೋಹರ್ ರಜಪೂತ್, ಲೇಖಪಾಲ ಘನಶ್ಯಾಮ್ ಸೇನ್, ಗ್ರಾಮಪಂಚಾಯತ್ ಅಧಿಕಾರಿ ಸೌರಭ್ ಯಾದವ್ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷ ಅಜವೀರ್ ವಿಕ್ರಮ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಯಾದವ್ ತಿಳಿಸಿದ್ದಾರೆ.

ಜಾನುವಾರುಗಳ ಸಾವು ಹಾಗೂ ಅವುಗಳ ಕಳೇಬರಗಳನ್ನು ಸೂಕ್ತವಾಗಿ ವಿಲೇವಾರಿ ಮಾಡುವಲ್ಲಿನ ವಿಫಲತೆ ಕುರಿತು ಜಿಲ್ಲಾ ದಂಡಾಧಿಕಾರಿ ದಿನೇಶ್ ಕುಮಾರ್ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. ಮಾದಾವರ ಉಪ ವಿಭಾಗೀಯ ದಂಡಾಧಿಕಾರಿ ಎಸ್.ಪಿ. ಸಿಂಗ್ ಅವರು ತನಿಖೆ ನಡೆಸುವಂತೆ ಸೂಚಿಸಲಾಗಿದೆ ಎಂದು ಕುಮಾರ್ ತಿಳಿಸಿದ್ದಾರೆ ಎಂದು ಮಹ್ರೋನಿಯ ಉಪ ವಿಭಾಗೀಯ ದಂಡಾಧಿಕಾರಿ (ಎಸ್‌ಡಿಎಂ) ಮುಹಮ್ಮದ್ ಕಮಾರ್ ಹೇಳಿದ್ದಾರೆ. ಘಟನೆಗೆ ಸಂಬಂಧಿಸಿ ಪಶು ಸಂಗೋಪನೆ ಅಧಿಕಾರಿ, ಗ್ರಾಮಪಂಚಾಯತ್ ಅಧಿಕಾರಿ ಹಾಗೂ ಲೇಖಪಾಲ (ಕಂದಾಯ ಅಧಿಕಾರಿ) ಅವರನ್ನು ಜಿಲ್ಲಾ ದಂಡಾಧಿಕಾರಿ ಅವರು ಈಗಾಗಲೇ ಅಮಾನತುಗೊಳಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಸೋಮವಾರ ತರಾಟೆಗೆ ತೆಗೆದುಕೊಂಡಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಆದಿತ್ಯನಾಥ್ ಅವರು ಗೋವುಗಳ ರಕ್ಷಣೆಯ ಹೆಸರಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. ಆದರೆ, ಅವರ ಸರಕಾರ ಗೋವುಗಳ ರಕ್ಷಣೆಯಲ್ಲಿ ವಿಫಲವಾಗಿದೆ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News