×
Ad

ಮದುವೆ ಪ್ರಪೋಸ್, ಉದ್ಯೋಗ ಕೊಡಿಸುವುದಾಗಿ ವಂಚಿಸುತ್ತಿದ್ದ ಆರೋಪಿ ಸೆರೆ

Update: 2020-12-24 22:04 IST

ಮಂಗಳೂರು, ಡಿ.24: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸುವುದಲ್ಲದೆ, ಮದುವೆ ಪ್ರಸ್ತಾಪ, ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಿತ್ರದುರ್ಗದ ಹೊಸದುರ್ಗ ತಾಲೂಕಿನ ಕುರುಬನಹಳ್ಳಿ ನಿವಾಸಿ ಪರಮೇಶ್ವರಪ್ಪ ರಂಗಪ್ಪ (23) ಬಂಧಿತ ಆರೋಪಿ.

ಪ್ರಕರಣ ವಿವರ: ಮ್ಯಾಟ್ರೊಮೊನಿಯಲ್‌ನಲ್ಲಿ ಆರೋಪಿಯು ತಾನು ಅಂಚೆ ಇಲಾಖೆಯ ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ಎಂಬುದಾಗಿ ಬಿಂಬಿಸಿದ್ದ. ಬಳಿಕ ಗೋವಾದ ನಿವಾಸಿ ಹನುಮಪ್ಪ ಬಿಸಳ್ಳಿ ಎಂಬವರ ಪುತ್ರಿಗೆ ವಾಟ್ಸ್‌ಆ್ಯಪ್‌ನಲ್ಲಿ ಅಂಚೆ ಇಲಾಖೆಗೆ ಸಂಬಂಧಿಸಿದಂತೆ ತನಗೆ ರಾಜ್ಯೋತ್ಸವ ಮತ್ತು ಮೇಘದೂತ ಪ್ರಶಸ್ತಿ ಬಂದಿರುವ ದೃಶ್ಯಾವಳಿಗಳನ್ನು ಕಳುಹಿಸಿದ್ದ. ತನ್ನ ಮಗಳಿಗೆ ನೆಂಟಸ್ಥಿಕೆ ಬಂದ ಹಿನ್ನೆಲೆಯಲ್ಲಿ ವ್ಯಕ್ತಿಯ ಬಗ್ಗೆ ಹನುಮಪ್ಪ ಮಂಗಳೂರಿನ ಅಂಚೆ ಇಲಾಖೆಯಲ್ಲಿ ವಿಚಾರಿಸಿದಾಗ ಆತ ವಂಚಿಸುತ್ತಿರುವ ಸಂಗತಿ ಬೆಳಕಿಗೆ ಬಂದಿತ್ತು. ಬಳಿಕ ಅಂಚೆ ಇಲಾಖೆಯ ಹಿರಿಯ ಅಧಿಕಾರಿ ಡಿ.2ರಂದು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು.

ಡಿ.20ರಂದು ಆರೋಪಿಯು ಮಂಗಳೂರು ನಗರದ ಸಶಸ್ತ್ರ ಮೀಸಲು ಪಡೆಯ ಇಬ್ಬರು ಸಿಬ್ಬಂದಿಗೆ ಅಂಚೆ ಇಲಾಖೆಯಲ್ಲಿನ ಗ್ರೇಡ್-1, ಗ್ರೇಡ್-2 ಹುದ್ದೆ ಖಾಲಿ ಇರುವುದಾಗಿ ತಿಳಿಸಿದ್ದನು. ಈ ಸಿಬ್ಬಂದಿಗೆ ಈತ ಮಹಿಳೆಯ ಹೆಸರಲ್ಲಿನ ನಕಲಿ ಖಾತೆಯ ಮೂಲಕ ಪರಿಚಯವಾಗಿದ್ದ. ಬಳಿಕ ಮೆಸೆಂಜರ್, ವಾಟ್ಸ್‌ಆ್ಯಪ್‌ನಲ್ಲಿ ಚಾಟ್ ಮಾಡಿ ಇಬ್ಬರಿಂದಲೂ ಆರು ಲಕ್ಷ ರೂ. ನಗದು ಪಡೆದು ವಂಚಿಸಿದ್ದ ಎಂದು ದೂರಲಾಗಿದೆ.

ಎರಡೂ ಪ್ರಕರಣಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ ಸೈಬರ್ ಕ್ರೈಂ ಪೊಲೀಸರು, ತನಿಖೆ ನಡೆಸಿ ಆರೋಪಿಯನ್ನು ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

20 ನಕಲಿ ಖಾತೆ ಸೃಷ್ಟಿಸಿದ್ದ : ವಿವಿಧ ನಮೂನೆಯ ವಂಚನೆ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಆರೋಪಿಯನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಇಲ್ಲಿಯವರೆಗೆ ಫೇಸ್‌ಬುಕ್‌ನಲ್ಲಿ ಸುಮಾರು 20 ನಕಲಿ ಖಾತೆಗಳನ್ನು ಸೃಷ್ಟಿಸಿದ್ದಾನೆ. ಬೇರೆ ಬೇರೆ ಹೆಸರಿನಿಂದ ಖಾತೆ ತೆರೆದಿದ್ದು, ಅಂಚೆ, ಪೊಲೀಸ್, ಅರಣ್ಯ, ಕೆಪಿಟಿಸಿಎಲ್, ಶಿಕ್ಷಣ ಇಲಾಖೆ ಸಹಿತ ಇತರ ಸರಕಾರಿ ಇಲಾಖೆಗಳ ಉತ್ತಮ ದರ್ಜೆಯ ಅಧಿಕಾರಿ ಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸ್ನೇಹ ಬೆಳೆಸಿದ್ದ. ಅಧಿಕಾರಿಗಳ ಜೊತೆಗಿನ ‘ಫೇಸ್‌ಬುಕ್ ಸ್ನೇಹ’ವನ್ನು ಪ್ರಭಾವದಂತೆ ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯು ಇಲ್ಲಿಯವರೆಗೆ 13 ಮಂದಿಯನ್ನು ವಂಚಿಸಿದ್ದಾನೆ. ಸುಮಾರು 15ರಿಂದ 20 ಲಕ್ಷ ರೂ. ವಂಚಿಸಿ, ಸರಕಾರಿ ಅಧಿಕಾರಿಗಳನ್ನೂ ವಂಚಿಸಿರುವುದಾಗಿ ತಿಳಿದುಬಂದಿದೆ. ಸದ್ಯ ಈತ ಸುಮಾರು 75 ಜನರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸಂಪರ್ಕದಲ್ಲಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂಧಿತ ಆರೋಪಿಯಿಂದ ಲ್ಯಾಪ್‌ಟಾಪ್, ಐದು ಮೊಬೈಲ್‌ಗಳು, ಅಂಚೆ ಇಲಾಖೆಯ ನಕಲಿ ಗುರುತಿನ ಚೀಟಿ, ಐಸಿಐಸಿಐ ಬ್ಯಾಂಕ್‌ನ ಡೆಬಿಟ್ ಕಾರ್ಡ್‌ವೊಂದನ್ನು ವಶಕ್ಕೆ ಪಡೆಯಲಾಗಿದೆ. ಸ್ವಾಧೀನಪಡಿಸಿಕೊಳ್ಳಲಾದ ವಸ್ತುಗಳ ಸೊತ್ತಿನ ಮೌಲ್ಯ 1.35 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಆರೋಪಿಯನ್ನು ನಗರದ 2ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕೋವಿಡ್ ಪರೀಕ್ಷೆಯ ಫಲಿತಾಂಶ ಬಾರದ ಹಿನ್ನೆಲೆ ಯಲ್ಲಿ ಈತ ಪೊಲೀಸರ ವಶದಲ್ಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News