ಪಾಕ್ ವಿರುದ್ಧ 2-0 ಗೆಲುವಿಗೆ ನ್ಯೂಝಿಲ್ಯಾಂಡ್ ಪ್ರಯತ್ನ: ವಿಲಿಯಮ್ಸನ್
ತೌರಂಗಾ: ಮುಂಬರುವ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನವನ್ನು ಸೋಲಿಸಲು ತಮ್ಮ ತಂಡ ಉತ್ತಮ ಪ್ರದರ್ಶನ ನೀಡಬೇಕು ಎಂದು ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಗುರುವಾರ ಹೇಳಿದ್ದಾರೆ.
ಡಿಸೆಂಬರ್ 26ರಿಂದ ಬೇ ಓವಲ್‌ನಲ್ಲಿ ಆರಂಭವಾಗಲಿರುವ ಎರಡು ಪಂದ್ಯಗಳ ಸರಣಿಯಲ್ಲಿ ನ್ಯೂಝಿಲ್ಯಾಂಡ್ ಮತ್ತು ಪಾಕಿಸ್ತಾನಗಳು ಮುಖಾಮುಖಿಯಾಗಲಿದೆ. ಕಿವೀಸ್ ಇದೀಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲುಟಿಸಿ ) ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ತಂಡವು ಸರಣಿಯನ್ನು 2-0 ಅಂತರದಲ್ಲಿ ಗೆಲುವು ದಾಖಲಿಸಿದರೆ ರ್ಯಾಂಕಿಂಗ್‌ನಲ್ಲಿ ಭಡ್ತಿ ಪಡೆಯಲು ಅವಕಾಶ ಇದೆ ಎಂದು ವಿಲಿಯಮ್ಸನ್ ಹೇಳಿದರು.
ಪಾಕಿಸ್ತಾನ ವಿರುದ್ಧ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯನ್ನು 2-1 ಅಂತರದಲ್ಲಿ ನ್ಯೂಝಿಲ್ಯಾಂಡ್ ಗೆದ್ದುಕೊಂಡಿದೆ. ಟೆಸ್ಟ್ ಸರಣಿಯಲ್ಲಿ ವಿಲಿಯಮ್ಸನ್ ಕಿವೀಸ್ ತಂಡವನ್ನು ಮುನ್ನಡೆಸಲಿದ್ದಾರೆ ಮತ್ತು ಮೊದಲ ಟೆಸ್ಟ್‌ನಲ್ಲಿ ಪಾಕಿಸ್ತಾನವನ್ನು ಹಂಗಾಮಿ ನಾಯಕರಾಗಿ ಮುಹಮ್ಮದ್ ರಿಝ್ವಾನ್ ಮುನ್ನಡೆಸಲಿದ್ದಾರೆ. ನಾಯಕ ಬಾಬರ್ ಅಝಮ್ ಗಾಯಗೊಂಡಿದ್ದಾರೆ.