ಜನಸೇವೆಯಿಂದ ವಾಜಪೇಯಿ ಜನ್ಮ ದಿನಾಚರಣೆ ಸಾರ್ಥಕ: ಶಾಸಕ ಕಾಮತ್
ಮಂಗಳೂರು, ಡಿ.25: ಭಾರತ ರತ್ನ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ದಿನಾಚರಣೆ ಸಾರ್ಥಕವಾಗಬೇಕಾದರೆ ಅದು ಜನಸೇವೆ ಮೂಲಕವೇ ಆಗಬೇಕು ಎಂದು ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ್ ಕಾಮತ್ ಅಭಿಪ್ರಾಯಿಸಿದ್ದಾರೆ.
ಕೊಡಿಯಾಲ್‌ಬೈಲ್‌ನ ಶಾಸಕರ ಖಾಸಗಿ ಕಚೇರಿ ಅಟಲ್ ಸೇವಾ ಕೇಂದ್ರದಲ್ಲಿ ಸರಕಾರದ ವಿವಿಧ ಸವಲತ್ತುಗಳ ಉಚಿತ ನೋಂದಣಿ ಹಾಗೂ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲೂಕು ಕಚೇರಿ ಹಾಗೂ ಇನ್ನಿತರ ಕಚೇರಿಗಳಲ್ಲಿ ವಿವಿಧ ಸವಲತ್ತುಗಳನ್ನು ಪಡೆಯಲು ಜನಸಾಮಾನ್ಯರಿಗೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಇದಕ್ಕಾಗಿ ಸುಲಭದಲ್ಲಿ ಎಲ್ಲ ಸೇವೆಗಳು ಒಂದೇ ಕಡೆ ಸಿಗುವಂತಾಗಲು ಈ ವ್ಯವಸ್ಥೆ ಮಾಡಿದ್ದೇವೆ. ಇಲ್ಲಿ ಆಧಾರ್ ನೋಂದಣಿ, ಆಯುಷ್ಮಾನ್ ನೋಂದಣಿ, ಎಪಿಎಲ್, ಬಿಪಿಎಲ್ ಕಾರ್ಡ್ ಮುಂತಾದ ಸೇವೆಗಳನ್ನು ಜನಸಾಮಾನ್ಯರಿಗೆ ಉಚಿತವಾಗಿ ಮಾಡಿಸಿಕೊಡಲಾಗುವುದು ಎಂದು ಅವರು ತಿಳಿಸಿದರು.
ಆಯುಷ್ಮಾನ್ ಯೋಜನೆಯಲ್ಲಿ ಲಾನುಭವಿಗಳು ಖಾಸಗಿ ಆಸ್ಪತ್ರೆಗೆ ದಾಖಲಾದ 24 ಗಂಟೆ ಒಳಗಡೆ ವೆನ್ಲಾಕ್ ಆಸ್ಪತ್ರೆಯಿಂದ ರೆರೆನ್ಸ್ ಪತ್ರ ಪಡೆದುಕೊಂಡು ಬರಬೇಕು. ಇಲ್ಲದಿದ್ದರೆ ಸರಕಾರಿ ಸೌಲಭ್ಯ ಪಡೆಯಲು ಸಮಸ್ಯೆಯಾಗುತ್ತದೆ ಎಂದು ಅವರು ಹೇಳಿದರು.
ಮಂಗಳೂರು ಮೇಯರ್ ದಿವಾಕರ್ ಪಾಂಡೇಶ್ವರ ವಿವಿಧ ಸವಲತ್ತುಗಳ ಉಚಿತ ನೋಂದಣಿ ಕಾರ್ಯಕ್ರಮ ಉದ್ಘಾಟಿಸಿದರು.
ಮನಪಾ ಸದಸ್ಯರಾದ ಲೀಲಾವತಿ ಪ್ರಕಾಶ್, ಜಯಲಕ್ಷ್ಮೀ ಶೆಟ್ಟಿ, ಗಣೇಶ್ ಕುಲಾಲ್, ಚಂದ್ರಾವತಿ ವಿಶ್ವನಾಥ್, ಜಯಶ್ರೀ ಕುಡ್ವ, ಮನೋಹರ ಕದ್ರಿ, ಕಿಶೋರ್ ಕೊಟ್ಟಾರಿ ಹಾಗೂ ಬಿಜೆಪಿ ಮುಖಂಡರಾದ ರಾಜೇಂದ್ರ, ಪಮ್ಮಿ ಕೊಡಿಯಾಲ್‌ಬೈಲ್ ಮುಂತಾದವರು ಉಪಸ್ಥಿತರಿದ್ದರು.