×
Ad

ಮಂಗಳೂರು: ವಾಹನ ನಿಲುಗಡೆ ಆದೇಶ ಪರಿಷ್ಕರಣೆ

Update: 2020-12-25 20:54 IST

ಮಂಗಳೂರು, ಡಿ.25: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸೆ.30ರಂದು ನಗರದ 61 ಸ್ಥಳಗಳಲ್ಲಿ ವಾಹನ ನಿಲುಗಡೆ ನಿಷೇಧಿಸಿ ಹೊರಡಿಸಲಾಗಿದ್ದ ಆದೇಶವನ್ನು ಪರಿಷ್ಕರಿಸಿರುವ ಮಂಗಳೂರು ಪೊಲೀಸ್ ಆಯುಕ್ತ ವಿಕಾಸ್‌ಕುಮಾರ್ ಹೊಸ ಅಧಿಸೂಚನೆ ಹೊರಡಿಸಿದ್ದಾರೆ.

ನಗರದಲ್ಲಿ ವಾಣಿಜ್ಯ ಮಳಿಗೆಗಳಲ್ಲಿ ಅನಧಿಕೃತ ಪಾರ್ಕಿಂಗ್‌ಗೆ ನಿಗದಿ ಪಡಿಸಲಾದ ಸ್ಥಳಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ಅಕ್ರಮವಾಗಿ ನಿರ್ಮಿಸಿ ಕಾರ್ಯ ನಿರ್ವಹಿಸುವ ಸುಮಾರು 50 ಕಟ್ಟಡ ಗುರುತಿಸಲಾಗಿತ್ತು. ಇವುಗಳನ್ನು ತೆರವುಗೊಳಿಸಲು ಪಾಲಿಕೆಗೆ ಪತ್ರ ಬರೆಯಲಾಗಿತ್ತು. ಪಾಲಿಕೆಯಿಂದ ಕಾರ್ಯಾಚರಣೆ ನಡೆಸಿ ನಗರದ 14 ಕಟ್ಟಡ/ ಕಾಂಪ್ಲೆಕ್ಸ್‌ಗಳಲ್ಲಿ ಅಕ್ರಮವಾಗಿ ತೆರೆಯಲಾದ ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸಿದ್ದಾರೆ.

ನೂತನ ‘ನೋ-ಪಾರ್ಕಿಂಗ್ ಸ್ಥಳಗಳು: ಎ.ಬಿ. ಶೆಟ್ಟಿ ವೃತ್ತದಿಂದ ಅಗ್ನಿಶಾಮಕ ಠಾಣೆಗೆ ಹೋಗುವ ಓಲ್ಡ್ ಕೆಂಟ್ ರಸ್ತೆಯ ಎಡಬದಿಯಲ್ಲಿ ‘ನೋ-ಪಾರ್ಕಿಂಗ್’ ಎಂದು ಹೊಸದಾಗಿ ಸೇರ್ಪಡಿಸಲಾಗಿದೆ. ಕಂಕನಾಡಿಯ ಹೊಸ ಮಾರ್ಕೆಟ್ ಕಟ್ಟಡದ ಪಕ್ಕದ ಅಪಾರ್ಟ್‌ಮೆಂಟ್‌ಗಳಿಗೆ ಹಾದು ಹೋಗುವ ರಸ್ತೆಯಲ್ಲಿ ಯಾವುದೇ ವಾಹನ ನಿಲುಗಡೆ ಮಾಡದಂತೆ ಆದೇಶ ಹೊರಡಿಸಲಾಗಿದೆ.

ಬಂಟ್ಸ್ ಹಾಸ್ಟೆಲ್ ವೃತ್ತದಿಂದ ಪಿವಿಎಸ್ ಕಡೆಗೆ ಹೋಗುವ ಕುದ್ಮುಲ್ ರಂಗರಾವ್ ರಸ್ತೆಯ ಎಡಬದಿಯಲ್ಲಿ ಎರಡು ಸ್ಥಳಗಳಲ್ಲಿ ಮಾತ್ರ ನೋ-ಪಾರ್ಕಿಂಗ್ ಎಂದು ಗುರುತಿಸಲಾಗಿತ್ತು. ಇನ್ನು ಮುಂದೆ ಈ ರಸ್ತೆಯ ಎಡಬದಿಯಲ್ಲಿ ಬಂಟ್ಸ್‌ಹಾಸ್ಟೆಲ್ ಸರ್ಕಲ್‌ನಿಂದ ಪಿವಿಎಸ್ ರಸ್ತೆಯ ಎಡಬದಿ ಯಲ್ಲಿ ಎಲ್ಲ ತರಹದ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ಪಾರ್ಕಿಂಗ್ ಸ್ಥಳ ಪರಿಷ್ಕರಣೆ: ಬಲ್ಮಠ ರಸ್ತೆಯಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತಕ್ಕೆ ಹೊಂದಿಕೊಂಡಂತಿರುವ ಬಲ್ಮಠ ನ್ಯೂ ರಸ್ತೆ ಪ್ರವೇಶದ ಬಳಿ ದ್ವಿ-ಚಕ್ರ ವಾಹನಗಳಿಗೆ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಿ ನೋ-ಪಾರ್ಕಿಂಗ್ ಆದೇಶ ಕೈ ಬಿಡಲಾಗಿದೆ. ಸುರತ್ಕಲ್ ಜಂಕ್ಷನ್‌ನಿಂದ ಎಂಆರ್‌ಪಿಎಲ್ ಕಡೆಗೆ ಹೋಗುವ ರಸ್ತೆಯಲ್ಲಿ ಸುರತ್ಕಲ್ ಜಂಕ್ಷನ್‌ನಿಂದ ಪ್ರಾಥಮಿಕ ಆರೋಗ್ಯ ಕೇಂದ್ರದವರೆಗಿನ ರಸ್ತೆಯಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿ ನೋ-ಪಾರ್ಕಿಂಗ್ ಆದೇಶ ಕೈಬಿಡಲಾಗಿದೆ.

ಪದವಿನಂಗಡಿ ಜಂಕ್ಷನ್‌ನಲ್ಲಿ ವಾಹನ ದಟ್ಟಣೆ ಇದ್ದ ಕಾರಣ ಮೂರು ಸ್ಥಳಗಳಲ್ಲಿ ನೋ-ಪಾರ್ಕಿಂಗ್ ಎಂದು ಗುರುತಿಸಲಾಗಿತ್ತು. ಈ ಬಗ್ಗೆ ಪರಿಶೀಲನೆ ಮಾಡಿ ಪದವಿನಂಗಡಿಯ ಯೂತ್ ಕ್ಲಬ್‌ನಿಂದ ಮುಗ್ರೋಡಿ ಕ್ರಾಸ್‌ವರೆಗೆ ಸಂಚಾರಕ್ಕೆ ಅಡ್ಡಿಯಾಗದಂತೆ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿ ನೋ-ಪಾರ್ಕಿಂಗ್ ಎಂದು ಗುರುತಿಸಲಾದ ಸ್ಥಳವನ್ನು ಕೈಬಿಡಲಾಗಿದೆ.

ಕುದ್ಮುಲ್ ರಂಗರಾವ್ ರಸ್ತೆಯಿಂದ ಕೋರ್ಟ್ ರಸ್ತೆಗೆ ಹೋಗುವ ರಸ್ತೆಯ ಎಡಬದಿಯಲ್ಲಿ ನೋ-ಪಾರ್ಕಿಂಗ್ ಇದ್ದ ಆದೇಶವನ್ನು ಪರಿಷ್ಕರಿಸಿ, ರಸ್ತೆಯ ಎಡಬದಿಯಲ್ಲಿ 20 ಮೀಟರ್ ಹಾಗೂ ಬಲಬದಿಯಲ್ಲಿ 200 ಮೀಟರ್‌ವರೆಗೆ ನೋ-ಪಾರ್ಕಿಂಗ್ ಸ್ಥಳ ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News