ಸಂಸತ್‌ನ ಸೆಂಟ್ರಲ್ ಹಾಲ್‌ನಲ್ಲಿ ಪ್ರಧಾನಿಯ ಮುಂದೆ ಕೃಷಿ ಕಾಯ್ದೆ ವಿರುದ್ಧ ಘೋಷಣೆ ಕೂಗಿದ ಆಪ್ ನಾಯಕರು
ಹೊಸದಿಲ್ಲಿ, ಡಿ. 25: ನೂತನ ಕೃಷಿ ಕಾಯ್ದೆಗಳ ವಿರುದ್ಧ ಆಮ್ ಆದ್ಮಿ ಪಕ್ಷ (ಆಪ್)ದ ಇಬ್ಬರು ಸಂಸದರು ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಘೋಷಣೆಗಳನ್ನು ಕೂಗಿದ ಘಟನೆ ಶುಕ್ರವಾರ ನಡೆದಿದೆ.
ಮಾಜಿ ಪ್ರಧಾನಿ ಅಟಲ್ ಬಿಹಾರ್ ವಾಜಪೇಯಿ ಅವರ 96ನೇ ಜನ್ಮ ದಿನಾಚರಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ಸಲ್ಲಿಸುವ ಸಂದರ್ಭ ಈ ಘಟನೆ ನಡೆಯಿತು.
ಸೆಂಟ್ರಲ್ ಹಾಲ್‌ನಲ್ಲಿ ತಾನು ಹಾಗೂ ಪಕ್ಷದ ತನ್ನ ಸಹೋದ್ಯೋಗಿ ಭಾಗ್ವತ್ ಮನ್ನಾ ಕೃಷಿ ಕಾಯ್ದೆಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವ ಹಾಗೂ ಪ್ರತಿಭಟನೆ ನಡೆಸುತ್ತಿರುವ ವೀಡಿಯೊವನ್ನು ಆಪ್‌ನ ಸಂಸದ ಸಂಜಯ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ರೈತ ವಿರೋಧಿಯಾಗಿರುವ ಕರಾಳ ಕಾನೂನನ್ನು ಹಿಂಪಡೆಯಿರಿ ಎಂದು ಅವರಲ್ಲಿ ಒಬ್ಬರು ಆಗ್ರಹಿಸುತ್ತಿರುವುದು ವೀಡಿಯೊದಲ್ಲಿ ಕೇಳಿ ಬಂದಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ವಾಜಪೇಯಿ ಅವರ ಭಾವಚಿತ್ರದ ಮುಂದೆ ನಿಂತು ಗೌರವ ಸಲ್ಲಿಕೆ ಪೂರ್ಣಗೊಳಿಸುತ್ತಿರುವ ಸಂದರ್ಭ ಇತರ ಹಲವು ಸಂಸದರು ನಿಂತಿರುವುದು ವೀಡಿಯೊದಲ್ಲಿ ಕಂಡು ಬಂದಿದೆ.
ಇತರ ಕೆಲವು ನಾಯಕರೊಂದಿಗೆ ಮಾತುಕತೆ ನಡೆಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಹೊರಗೆ ನಡೆದುಕೊಂಡು ಹೋಗುತ್ತಿರುವುದು, ಈ ನಡುವೆ ಆಪ್‌ನ ಇಬ್ಬರು ಸಂಸದರು ನಿರಂತರ ಘೋಷಣೆಗಳನ್ನು ಕೂಗುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ.
‘‘ಸಂಸತ್ತಿನ ಅಧಿವೇಶನ ಕರೆಯುತ್ತಿಲ್ಲ. ಪ್ರಧಾನಿ ಅವರೊಂದಿಗೆ ಮಾತನಾಡಲು ಅಥವಾ ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ನೀಡುತ್ತಿಲ್ಲ. ಸೆಂಟ್ರಲ್‌ನಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಆಪ್‌ನ ಸಂಸದ ಭಾಗ್ವತ್ ಮನ್ನಾ ಹಾಗೂ ನಾನು ಕರಾಳ ಕಾಯ್ದೆಗಳನ್ನು ಹಿಂದೆಗೆಯುವಂತೆ ಆಗ್ರಹಿಸಿದ್ದೇವೆ. ಈ ಕಾಯ್ದೆಗಳ ವಿರುದ್ಧ ಲಕ್ಷಾಂತರ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ನೂತನ ಕೃಷಿ ಕಾಯ್ದೆಗಳು ಕೈಗಾರಿಕೋದ್ಯಮಿಗಳ ಕೈಯಲಿವೆ. ಈ ಕಾಯ್ದೆಗಳು ರೈತರಿಗೆ ವಿರುದ್ಧವಾಗಿದೆ. ರೈತರ ಪ್ರತಿಭಟನೆಗೆ ನಾವು ಬೆಂಬಲ ನೀಡುತ್ತೇವೆ. ಮೂರು ಕರಾಳ ಕಾನೂನನ್ನು ಹಿಂದೆಗೆಯುವಂತೆ ನಾವು ಪ್ರಧಾನಿ ಅವರಲ್ಲಿ ಮನವಿ ಮಾಡಿದ್ದೇವೆ’’ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.
‘‘ಮೋದಿ ಸರಕಾರದ ಕಣ್ಣು ಹಾಗೂ ಕಿವಿಯನ್ನು ತೆರೆಯಲು ಸೆಂಟ್ರಲ್ ಹಾಲ್‌ನಲ್ಲಿ ರೈತ ಪರ ಘೋಷಣೆಗಳು ಪ್ರತಿಧ್ವನಿಸಿದವು’’ ಎಂದು ಪಂಜಾಬ್‌ನ ಸಂಗ್ರೂರ್‌ನ ಸಂಸದ ಭಾಗ್ವತ್ ಮನ್ನಾ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.