ವಿಟ್ಲ: ಒಂಟಿ ಮಹಿಳೆಯ ಕಟ್ಟಿ ಹಾಕಿ, ಹಲ್ಲೆ ನಡೆಸಿ ದರೋಡೆ
Update: 2020-12-25 21:55 IST
ಬಂಟ್ವಾಳ : ಒಂಟಿ ಮಹಿಳೆ ಇರುವ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮಹಿಳೆಯನ್ನು ಕಟ್ಟಿ ಹಾಕಿ, ಹಲ್ಲೆ ನಡೆಸಿ ಚಿನ್ನಾಭರಣ ದರೋಡೆಗೈದ ಘಟನೆ ವಿಟ್ಲದ ಕಾನತ್ತಡ್ಕದಲ್ಲಿ ನಡೆದಿದೆ.
ಕಾನತ್ತಡ್ಕ ಜುಮಾ ಮಸೀದಿ ಮುಂಭಾಗದಲ್ಲಿರುವ ಬಾಡಿಗೆ ಮನೆಯಲ್ಲಿ ಆಟೋ ಚಾಲಕ ರಫೀಕ್ ವಾಸ ಮಾಡುತ್ತಿದ್ದು, ರಫೀಕ್ ಅವರು ಶುಕ್ರವಾರ ಮಸೀದಿಗೆ ತೆರಳಿದ್ದರು. ಅವರ ಜತೆ ಅವರ 10 ವರ್ಷದ ಮಗ ಕೂಡಾ ತೆರಳಿದ್ದರು. ಅವರ ಪತ್ನಿ ಒಬ್ಬರೇ ಮನೆಯಲ್ಲಿ ಇದ್ದರು. ಈ ಬಗ್ಗೆ ಮಾಹಿತಿ ಅರಿತ ವ್ಯಕ್ತಿ ಮಹಿಳೆಯ ಕಟ್ಟಿ ಹಾಕಿ, ಬಾಯಿಗೆ ಬಟ್ಟೆ ತುರುಕಿ ಹಲ್ಲೆ ನಡೆಸಿದ್ದಾನೆ ಎಂದು ದೂರಲಾಗಿದೆ. ಇವರ ಮನೆಯ ಸುತ್ತಲೂ ಮನೆಗಳಿದ್ದು, ಯಾರ ಗಮನಕ್ಕೆ ಬಂದಿಲ್ಲ. ಪತಿ ಮಸೀದಿಯಿಂದ ಮನೆಗೆ ಬಂದ ವೇಳೆ ಘಟನೆ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತಿದ್ದಾರೆ.