ಅಮೆರಿಕದಲ್ಲಿ ನಿರಾಯುಧನಾಗಿದ್ದ ಕರಿಯ ವ್ಯಕ್ತಿಯನ್ನು ಹತ್ಯೆಗೈದ ಪೊಲೀಸರು: ಮತ್ತೆ ಭುಗಿಲೆದ್ದ ಪ್ರತಿಭಟನೆ
ಕೊಲಂಬಸ್ (ಅಮೆರಿಕ), ಡಿ. 25: ಅಮೆರಿಕದ ಓಹಿಯೊ ರಾಜ್ಯದ ಕೊಲಂಬಸ್ ನಗರದಲ್ಲಿ ನಿರಾಯುಧ ಕರಿಯ ವ್ಯಕ್ತಿಯೋರ್ವರು ಪೊಲೀಸರ ಗುಂಡಿಗೆ ಬಲಿಯಾದ ಬಳಿಕ ಗುರುವಾರ ಪ್ರತಿಭಟನೆ ಭುಗಿಲೆದ್ದಿದೆ.
ದೇಶದಲ್ಲಿನ ಜನಾಂಗೀಯ ತಾರತಮ್ಯ ಮತ್ತು ಪೊಲೀಸ್ ಕ್ರೌರ್ಯದ ವಿರುದ್ಧ ಜನರು ಬೀದಿಗಿಳಿದು ಪ್ರತಿಭಟಿಸಿದ್ದಾರೆ. ಇದು ಕೊಲಂಬಸ್ ನಗರದಲ್ಲಿ ಈ ತಿಂಗಳು ಪೊಲೀಸರು ನಡೆಸಿದ ಎರಡನೇ ಕರಿಯ ವ್ಯಕ್ತಿಯ ಹತ್ಯೆಯಾಗಿದೆ.
47 ವರ್ಷದ ಆ್ಯಂಡ್ರಿ ವೌರಿಸ್ ಹಿಲ್ ಸೋಮವಾರ ರಾತ್ರಿ ಮನೆಯೊಂದರ ಗ್ಯಾರೇಜ್‌ನಲ್ಲಿ ಇದ್ದರು. ಆಗ ಅಲ್ಲಿಗೆ ಬಂದ ಪೊಲೀಸ್ ಅಧಿಕಾರಿಯೊಬ್ಬರು ವೌರಿಸ್ ಮೇಲೆ ಹಲವು ಸುತ್ತು ಗುಂಡು ಹಾರಿಸಿದರು. ಹಿಲ್ ಕೆಲವು ನಿಮಿಷಗಳ ಬಳಿಕ ಕೊನೆಯುಸಿರೆಳೆದರು. ಅವರು ಯಾವುದೇ ಆಯುಧವನ್ನು ಹೊಂದಿರಲಿಲ್ಲ ಎಂದು ತಿಳಿದು ಬಂಬಿದೆ.
ಗುಂಡು ಹಾರಾಟದ ಸೆಕೆಂಡ್‌ಗಳ ಮೊದಲು, ಹಿಲ್ ತನ್ನ ಎಡಗೈಯಲ್ಲಿ ಮೊಬೈಲ್ ಫೋನ್ ಹಿಡಿದುಕೊಂಡು ಪೊಲೀಸ್ ಅಧಿಕಾರಿಯತ್ತ ನಡೆಯುತ್ತಿರುವುದನ್ನು ಪೊಲೀಸ್ ಬಾಡಿಕ್ಯಾಮ್ (ಪೊಲೀಸರು ಧರಿಸಿರುವ ಕ್ಯಾಮರ) ತೋರಿಸಿದೆ. ಕ್ಯಾಮರದಲ್ಲಿ ಅವರ ಇನ್ನೊಂದು ಕೈ ಕಾಣುವುದಿಲ್ಲ.
‘ಗಂಭೀರ ದುರ್ವರ್ತನೆ’ಗಾಗಿ, ಗುಂಡು ಹಾರಿಸಿದ ಪೊಲೀಸ್ ಅಧಿಕಾರಿಯನ್ನು ವಜಾಗೊಳಿಸುವುದಾಗಿ ಕೊಲಂಬಸ್ ಪೊಲೀಸ್ ಮುಖ್ಯಸ್ಥ ಥಾಮಸ್ ಕ್ವಿನ್ಲನ್ ಗುರುವಾರ ಪ್ರಕಟಿಸಿದ್ದಾರೆ.
ಗುರುವಾರ ‘ಬ್ಲಾಕ್ ಲೈವ್ಸ್ ಮ್ಯಾಟರ್’ ಫಲಕಗಳನ್ನು ಹಿಡಿದುಕೊಂಡು ನೂರಾರು ಮಂದಿ ಪ್ರತಿಭಟಿಸಿದರು. ಪೊಲೀಸ್ ಗೋಲಿಬಾರ್ ಪ್ರಾಣ ಕಳೆದುಕೊಂಡಿರುವ ಜನರಿಗೆ ನ್ಯಾಯ ಸಿಗಬೇಕೆಂದು ಅವರು ಆಗ್ರಹಿಸಿದರು.