×
Ad

ಮುಂಬೈ ಟು ಭಟ್ಕಳ ಚಿತ್ರತಂಡದ ವಿರುದ್ಧ ಅಪಪ್ರಚಾರ ಪ್ರಕರಣ; ಕೋಮುಗಲಭೆ ಸೃಷ್ಟಿಸುವ ಹುನ್ನಾರ: ಆರೋಪ

Update: 2020-12-26 14:11 IST

ಮಂಗಳೂರು, ಡಿ.26: ಹೊಸಚಿತ್ರ ಕನ್ನಡ ಚಲನಚಿತ್ರ ಮುಂಬೈ ಟು ಭಟ್ಕಳ ಚಿತ್ರದ ನಿರ್ದೇಶಕ ಹಾಗೂ ನಟ, ನಟಿಯರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮಾಡಲಾಗಿರುವ ಅಪಪ್ರಚಾರ ಕೋಮುಗಲಭೆ ಸೃಷ್ಟಿಸುವ ಹುನ್ನಾರವಾಗಿದ್ದು, ಈ ಬಗ್ಗೆ ಕಾನೂನು ಹೋರಾಟ ನಡೆಸುವುದಾಗಿ ನಟ ಪ್ರಾಣ್ ಶೆಟ್ಟಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಲಾವಿದರ ವಿರುದ್ಧದ ಅಪಪ್ರಚಾರವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದರು.

ಕಳೆದ ಐದು ವರ್ಷಗಳಿಂದ ತಾನು ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ಜತೆ ಒಡನಾಟದಲ್ಲಿದ್ದು, ಅವರು ಏನೆಂಬುದು ಚೆನ್ನಾಗಿ ಗೊತ್ತಿದೆ. ನಾನೂ ಸಂಘಟನೆಯಲ್ಲಿ ಇದ್ದವ. ಹಾಗಿರುವಾಗ ನಾವು ಲವ್ ಜಿಹಾದ್‌ಗೆ ಪ್ರೋತ್ಸಾಹ ನೀಡುವಂತಹ ಕೃತ್ಯಕ್ಕೆ ಎಂದೂ ಮುಂದಾಗುವುದಿಲ್ಲ. ಚಿತ್ರ ಕಥೆಯನ್ನು ಅರಿಯದೇ ವ್ಯಕ್ತಿಯೊಬ್ಬ ತನ್ನ ಇತರ ಸಹಚರರ ಜತೆ ಸೇರಿ ಮಾಡಿರುವ ಕುತಂತ್ರ ಇದಾಗಿದ್ದು, ಈ ಬಗ್ಗೆ ಸೈಬರ್ ಕ್ರೈಂ ನಡಿ ದೂರು ನೀಡಲಾಗಿದೆ ಎಂದರು.

ಚಿತ್ರವು ಮುಸ್ಲಿಂ ಕುಟುಂಬವೊಂದರಲ್ಲಿ ನಡೆಯುವ ಸನ್ನಿವೇಶದೊಂದಿಗೆ ದೇಶಪ್ರೇಮದ ಕಥಾಹಂದರಿಂದ ಕೂಡಿದೆ. ಲವ್ ‌ಜಿಹಾದ್‌ಗೂ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನಟ ಪ್ರಜ್ಞೇಶ್ ಶೆಟ್ಟಿ ಹೇಳಿದರು.

ನನ್ನ ಪಾತ್ರದ ಕುರಿತಂತೆಯೂ ಅಪಪ್ರಚಾರ ಮಾಡಲಾಗಿದೆ. ಚಿತ್ರದ ಪೋಸ್ಟರ್‌ನಲ್ಲಿಯೇ ನಾನು ಯಾವ ಪಾತ್ರ ಮಾಡುತ್ತಿದ್ದೇನೆಂಬುದು ಸ್ಪಷ್ಟವಿದೆ. ಪೊಲೀಸ್ ಅಧಿಕಾರಿಯ ಪಾತ್ರವನ್ನು ಈ ಚಿತ್ರದಲ್ಲಿ ಮಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ನಾನು ಬುರ್ಕಾ ತೊಟ್ಟು ನಟಿಸಿರುವುದಾಗಿ ಹೇಳಲಾಗಿದೆ. ಇದು ಸತ್ಯಕ್ಕೆ ದೂರವಾದ ಮಾತು ಎಂದು ನಟಿ ಕಾವ್ಯ ಅಂಚನ್ ತಿಳಿಸಿದರು.

ಬೋಜರಾಜ್ ಎಂಬಿಬಿಎಸ್ ಚಿತ್ರದ ನಟಿ ಶೀತಲ್ ನಾಯಕ್ ಮಾತನಾಡಿ, ನಾನು ಇಸ್ಮಾಯಿಲ್ ಮೂಡುಶೆಡ್ಡೆಯವರ ಚಿತ್ರದಲ್ಲಿ ನಟಿಸಿದ್ದೇನೆ. ಆದರೆ ಅವರು ಎಂದೂ ನನ್ನ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಂಡಿಲ್ಲ ಎಂದು ಹೇಳಿದರು.

ಗೋಷ್ಠಿಯಲ್ಲಿ ಶರತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News