ಉಡುಪಿ : ರಾಜಕೀಯ ನಾಯಕರ ಹೆಸರು ಬಳಸಿ ನೀತಿ ಸಂಹಿತೆ ಉಲ್ಲಂಘನೆ; ಅಭ್ಯರ್ಥಿಗಳ ವಿರುದ್ಧ ಪ್ರಕರಣ ದಾಖಲು

Update: 2020-12-26 09:35 GMT

ಹಿರಿಯಡ್ಕ, ಡಿ. 26: ಗ್ರಾಪಂ ಚುನಾವಣೆಯಲ್ಲಿ ರಾಜಕೀಯ ಪಕ್ಷ ಹಾಗೂ ನಾಯಕರ ಹೆಸರು ಬಳಸಿ ಮತ ಯಾಚಿಸುವ ಮೂಲಕ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿರುವ ಆರೋಪದಲ್ಲಿ ಅಭ್ಯರ್ಥಿಗಳ ವಿರುದ್ಧ ನೋಡಲ್ ಅಧಿಕಾರಿ ಮೋಹನರಾಜ್ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಬಂಧ ಬೊಮ್ಮಾರಬೆಟ್ಟುವಿನ ಸತ್ಯಾನಂದ ನಾಯಕ್ ಎಂಬವರು ಡಿ.19ರಂದು ಮೋಹನ್‌ರಾಜ್ ಅವರಿಗೆ ದೂರು ಅರ್ಜಿಯನ್ನು ಸಲ್ಲಿಸಿದ್ದು, ಅದರಲ್ಲಿ ಗ್ರಾಮದ ಒಂದು ರಾಜಕೀಯ ಪಕ್ಷದ ಬೆಂಬಲಿಗರು ರಾಷ್ಟ್ರೀಯ ಪಕ್ಷದ ನಾಯಕರ ಹೆಸರನ್ನು ಬಳಸಿ ಕರಪತ್ರಗಳನ್ನು ಮುದ್ರಿಸಿ ಮತದಾರರನ್ನು ಮರಳು ಮಾಡುತ್ತಿದ್ದಾರೆ ಎಂದು ದೂರಲಾಗಿತ್ತು.

ಈ ಕರಪತ್ರದಲ್ಲಿ ಅನಿತಾ ಪೂಜಾರಿ, ಗುರುಪ್ರಸಾದ್, ರತ್ನಾಕರ ಶೆಟ್ಟಿ, ಶಾಂತಿ, ಪುಷ್ಪಲತಾ ಶೆಟ್ಟಿ, ಶಿಲ್ಪ ಪ್ರಸಾದ್, ನಿತ್ಯಾನಂದ ಪ್ರಭು, ಶಿಶಿರ, ಭಾರತಿ ನಾಯಕ್, ಗೀತಾ ದಯಾನಂದ, ನಾರಾಯಣ ಪೂಜಾರಿ, ಶಬರಿ, ಹರ್ಷಿಣಿ, ಸುನಿಲ್, ಜಯಂತಿ, ದಿನೇಶ್ ಮೆಂಡನ್, ರಾಘವೇಂದ್ರ ನಾಯಕ್, ಹರೀಶ ಸಾಲ್ಯಾನ್, ಸಂಗೀತಾ, ಉಮೇಶ ಶೆಟ್ಟಿ, ಅರುಣಾ ಎಂಬವರ ಭಾವಚಿತ್ರ ಹಾಕಿ, ರಾಜಕೀಯ ಪಕ್ಷದ ಬೆಂಬಲಿತ ಅಭ್ಯರ್ಥಿ ಎಂಬುದಾಗಿ ಮುದ್ರಿಸಲಾಗಿದೆ. ಕರಪತ್ರಗಳ ಕೊನೆಯಲ್ಲಿ ಪ್ರಕಟಣೆ ದಯಾನಂದ ಪೂಜಾರಿ, ಸಂದೀಪ ಹೆಗ್ಡೆ 500 ಪ್ರತಿಗಳನ್ನು ಎಂಎಸ್ ಪ್ರಿಂಟರ್ ಹಿರಿಯಡ್ಕ ಎಂಬಲ್ಲಿ ಮುದ್ರಿಸಿರುವುದು ಕಂಡು ಬಂದಿದೆ.

ಚುನಾವಣೆ ಆಯೋಗದ ನಿರ್ದೇಶನದ ಪ್ರಕಾರ ಗ್ರಾಪಂ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷ ಅಥವಾ ರಾಜಕೀಯ ನಾಯಕರ ಹೆಸರು ಬಳಸಿ ಮತ ಯಾಚಿಸುವಂತಿಲ್ಲ. ಆದ್ದರಿಂದ ಈ ಅಭ್ಯರ್ಥಿ ಗಳು ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿರುವುದು ಕಂಡು ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News