ಇತರ ಪಕ್ಷಗಳ ಅಭ್ಯರ್ಥಿಗಳನ್ನು ಬಲವಂತದಿಂದ ಆಮಿಷವೊಡ್ಡಿ ಬಿಜೆಪಿಗೆ ಸೇರಿಸಲಾಗುತ್ತಿದೆ: ಉಮರ್ ಅಬ್ದುಲ್ಲಾ ಆರೋಪ

Update: 2020-12-26 11:12 GMT

ಶ್ರೀನಗರ,ಡಿ.26: ಜಮ್ಮುಕಾಶ್ಮೀರದ ಚುನಾವಣೆಯಲ್ಲಿ ಎಲ್ಲ ಜನರು ಉತ್ತಮವಾಗಿ ಪಾಲ್ಗೊಂಡಿದ್ದಾರೆ ಮತ್ತು ಶಾಂತಿಯುತವಾಗಿ ತಮ್ಮ ಮತ ಚಲಾಯಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ ಬೆನ್ನಲ್ಲೇ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಕೇಂದ್ರ ಸರಕಾರ ಮತ್ತು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಪಕ್ಷವು ಇತರ ಪಕ್ಷಗಳ ಅಭ್ಯರ್ಥಿಗಳನ್ನು ಬಲವಂತದಿಂದ ಆಮಿಷವೊಡ್ಡಿ ತನ್ನ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

“ಅಭ್ಯರ್ಥಿಗಳನ್ನು ಬಿಜೆಪಿ ಮತ್ತು ಅಪ್ನಾ ಪಾರ್ಟಿ ಪಕ್ಷಗಳಿಗೆ ಬಲವಂತವಾಗಿ ಪಕ್ಷಾಂತರ ಮಾಡಿಸಲಾಗುತ್ತಿದೆ. ನಮ್ಮ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಭ್ಯರ್ಥಿಯೋರ್ವರನ್ನೂ ಬಲವಂತವಾಗಿ ಬಿಜೆಪಿಗೆ ಸೇರ್ಪಡೆಗೊಳಿಸಲಾಗಿದೆ. ಮೊದಲು ಅಭ್ಯರ್ಥಿಯ ಸಂಬಂಧಿಕರೋರ್ವರನ್ನು ಬಂಧಿಸಲಾಯಿತು. ಬಳಿಕ ನಮ್ಮ ಅಭ್ಯರ್ಥಿಯನ್ನು ಬಿಜೆಪಿ ಪಕ್ಷಕ್ಕೆ ಬಲವಂತವಾಗಿ ಸೇರ್ಪಡೆಗೊಳಿಸಿದ ನಂತರವೇ ಅವರ ಸಂಬಂಧಿಕರನ್ನು ಬಿಡುಗಡೆ ಮಾಡಲಾಯಿತು” ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖಂಡ ಉಮರ್ ಅಬ್ದುಲ್ಲಾ ಆರೋಪಿಸಿದ್ದಾರೆ.

“ಬಿಜೆಪಿಯು ತನ್ನ ಬೇಳೆ ಬೇಯಿಸಲು ಸರಕಾರದ ಎಲ್ಲ ಅಂಗಗಳನ್ನು ಬಳಸಿಕೊಳ್ಳುತ್ತಿದೆ. ಈ ಮೂಲಕ ಪ್ರಜಾಪ್ರಭುತ್ವವನ್ನು ವಿರೂಪಗೊಳಿಸುತ್ತಿದೆ” ಎಂದು ಉಮರ್ ಅಬ್ದುಲ್ಲಾ ಆರೋಪಿಸಿದ್ದಾರೆ ಎಂದು indiatoday.in ವರದಿಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News