ಬಿಜೆಪಿಯ ವಿರೋಧ ಪಕ್ಷಗಳೆಲ್ಲವೂ ಯುಪಿಎ ಅಡಿಯಲ್ಲಿ ಒಂದಾಗಬೇಕು: ಶಿವಸೇನೆ
ಮುಂಬೈ,ಡಿ.26: ಕಾಂಗ್ರೆಸ್ ಪಕ್ಷ ದುರ್ಬಲವಾಗಿರುವುದರಿಂದ ಶಿವಸೇನೆ ಸಹಿತ ಎಲ್ಲಾ ಬಿಜೆಪಿ ವಿರೋಧಿ ಪಕ್ಷಗಳು ಯುಪಿಎ ಅಡಿ ಒಂದಾಗಿ ಬಿಜೆಪಿಗೆ ಪ್ರಬಲ ಪರ್ಯಾಯವಾಗಿ ಹೊರಹೊಮ್ಮಬೇಕು ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಹೇಳಿದೆ.
ಕೇಂದ್ರ ಸರಕಾರ ರೈತರ ಪ್ರತಿಭಟನೆ ಕುರಿತು ಅಸಡ್ಡೆಯ ಧೋರಣೆ ತಳೆದಿದೆ ಹಾಗೂ 'ಪರಿಣಾಮಕಾರಿಯಲ್ಲದ' ವಿಪಕ್ಷದಿಂದಾಗಿ ಸರಕಾರ ಈ ರೀತಿಯ ಧೋರಣೆ ಹೊಂದಿದೆ ಎಂದು ಶಿವಸೇನೆ ಅಭಿಪ್ರಾಯ ಪಟ್ಟಿದೆ. ಕೇಂದ್ರ ಸರಕಾರವನ್ನು ದೂರುವ ಬದಲು ವಿಪಕ್ಷಗಳು ನಾಯಕತ್ವದ ಕುರಿತು ಯೋಚಿಸಬೇಕು, ವಿಪಕ್ಷಗಳ ನಾಯಕರಾಗಿ ಹೊರಹೊಮ್ಮುವವರು ಜನಮನ್ನಣೆ ಹೊಂದಿದವರಾಗಬೇಕು, ಆದರೆ ಈ ವಿಚಾರದಲ್ಲಿ ಆ ಪಕ್ಷ ಅಂಚಿನಲ್ಲಿ ನಿಂತು ಬಿಟ್ಟಿದೆ," ಎಂದು ಕಾಂಗ್ರೆಸ್ ಕುರಿತು ಶಿವಸೇನೆ ಹೇಳಿದೆ.
"ರಾಹುಲ್ ಗಾಂಧಿ ವೈಯಕ್ತಿಕವಾಗಿ ಪ್ರಬಲ ಹೋರಾಟ ನಡೆಸುತ್ತಿದ್ದರೂ ಕೊರತೆಯೊಂದು ಕಾಡುತ್ತಿದೆ. ಎನ್‍ಸಿಪಿ ಅಧ್ಯಕ್ಷ ಶರದ್ ಪವಾರ್ ರಾಷ್ಟ್ರಮಟ್ಟದಲ್ಲಿ ಒಬ್ಬ ಸ್ವತಂತ್ರ ವ್ಯಕ್ತಿತ್ವ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರು ಏಕಾಂಗಿಯಾಗಿ ಹೋರಾಡುತ್ತಿದ್ದಾರೆ. ದೇಶದ ವಿಪಕ್ಷಗಳು ಈ ಸಮಯ ಅವರ ಜತೆ ನಿಲ್ಲಬೇಕು. ಮಮತಾ ಬ್ಯಾನರ್ಜಿ ಪವಾರ್ ಅವರನ್ನು ಸಂಪರ್ಕಿಸಿದ್ದಾರೆ ಹಾಗೂ ಅವರು ಬಂಗಾಳಕ್ಕೆ ಹೋಗುತ್ತಿದ್ದಾರೆ. ಈ ಕೆಲಸವು ಕಾಂಗ್ರೆಸ್ ನಾಯಕತ್ವದಡಿ ಆಗಬೇಕಿತ್ತು," ಎಂದು ಶಿವಸೇನೆ ಹೇಳಿದೆ.