ಕೇಂದ್ರ ಸರಕಾರದ ರೈತ ವಿರೋಧಿ ಧೋರಣೆ ಖಂಡಿಸಿ ಪಂಜಾಬ್ ಬಿಜೆಪಿ ಮಾಜಿ ಸಂಸದ ರಾಜೀನಾಮೆ
Update: 2020-12-26 18:40 IST
ಚಂಡೀಗಡ: ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರು, ಅವರ ಪತ್ನಿಯಂದಿರು, ಮಕ್ಕಳು ಅನುಭವಿಸುತ್ತಿರುವ ದುಃಖ-ದುಮ್ಮಾನಗಳ ಬಗ್ಗೆ ಪಕ್ಷದ ಮುಖಂಡರು ಹಾಗೂ ಸರಕಾರದ ನಿರ್ಲಕ್ಷ್ಯ ಧೋರಣೆಯನ್ನು ವಿರೋಧಿಸಿ ಲೋಕಸಭೆಯ ಮಾಜಿ ಸಂಸದ ಹರಿಂದರ್ ಸಿಂಗ್ ಖಲ್ಸಾ ಅವರು ರಾಜೀನಾಮೆ ನೀಡಿದ್ದಾರೆ ಎಂದು ಸುದ್ದಿಸಂಸ್ಥೆ ಎಎನ್ ಐ ಶನಿವಾರ ವರದಿ ಮಾಡಿದೆ.
ಕೇಂದ್ರ ಸರಕಾರ ಜಾರಿಗೆ ತಂದಿರುವ ಮೂರು ನೂತನ ಕೃಷಿ ಕಾಯ್ದೆಗಳ ಕುರಿತು ಪಂಜಾಬ್ ನಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ಎದುರಿಸುತ್ತಿದ್ದಾರೆ. ಕೃಷಿ ಕಾನೂನುಗಳಿಂದಾಗಿ ಕೇಂದ್ರ ಸರಕಾರ ಇನ್ನು ಮುಂದೆ ಗೋಧಿ ಹಾಗೂ ಅಕ್ಕಿಯನ್ನು ಖಾತರಿಪಡಿಸಿದ ಬೆಲೆಗಳಲ್ಲಿ ಖರೀದಿಸುವುದಿಲ್ಲ ಎಂಬ ಭಯ ಪಂಜಾಬ್ ಹಾಗೂ ಹರ್ಯಾಣ ರೈತರನ್ನು ಕಾಡುತ್ತಿದೆ. ಕೃಷಿ ಕಾನೂನುಗಳನ್ನು ರದ್ದುಪಡಿಸಲು ಆಗ್ರಹಿಸಿ ಸಾವಿರಾರು ರೈತರು ಕಳೆದೊಂದು ತಿಂಗಳಿನಿಂದ ದಿಲ್ಲಿ ಗಡಿಭಾಗಗಳಲ್ಲಿ ವಿಪರೀತ ಚಳಿಯನ್ನು ಲೆಕ್ಕಿಸದೇ ಪ್ರತಿಭಟನೆ ನಡೆಸುತ್ತಿದ್ದಾರೆ.