×
Ad

ಕೆನಡಾದಲ್ಲಿ ನಿಗೂಢವಾಗಿ ಮೃತಪಟ್ಟ ಬಲೂಚ್ ಹೋರಾಟಗಾರ್ತಿ ಕರೀಮಾ ಸಾವಿನ ತನಿಖೆಗೆ ವ್ಯಾಪಕ ಆಗ್ರಹ

Update: 2020-12-26 22:29 IST

ಟೊರೊಂಟೊ,ಡಿ.26: ಬಲೂಚಿಸ್ತಾನದ ಉಚ್ಚಾಟಿತ ಹೋರಾಟಗಾರ್ತಿ ಕರೀಮಾ ಬಲೂಚ್ ಅವರು ಕೆನಡಾದ ಟೊರೊಂಟೊ ನಗರದಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಘಟನೆಯ ಬಗ್ಗೆ ವಿಶ್ವದಾದ್ಯಂತದ 50ಕ್ಕೂ ಅಧಿಕ ಸಾಮಾಜಿಕ ಹೋರಾಟಗಾರರು, ಪತ್ರಕರ್ತರು ಹಾಗೂ ಬುದ್ಧಿಜೀವಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ ಹಾಗೂ ಈ ವಿಷಯವಾಗಿ ಉನ್ನತಮಟ್ಟದ ಹಾಗೂ ಸಮಗ್ರ ತನಿಖೆಯಾಗಬೇಕೆಂದು ಅವರು ಆಗ್ರಹಿಸಿದ್ದಾರೆ.

 ಸಾಮಾಜಿಕ ಹೋರಾಟಗಾರರು, ಪತ್ರಕರ್ತರು,ಶಿಕ್ಷಣ ತಜ್ಞರು, ಚಿಂತಕರು ಹಾಗೂ ನೊಂದ ನಾಗರಿಕರ ಸಂಘಟನೆಯಾದ ‘ಕರೀಮಾ ಬಲೂಚ್’ ಕಲೆಕ್ಟೀವ್ ಶುಕ್ರವಾರ ಈ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದು, ಕರೀಮಾ ಬಲೂಚ್ ಅವರ ನಿಗೂಢ ಸಾವು ಆತಂಕಕಾರಿಯಾಗಿದೆ. ಯಾಕೆಂದರೆ ಈ ವರ್ಷದಲ್ಲಿ ಇಂತಹ ಘಟನೆ ನಡೆದಿರುವುದು ಇದೇ ಮೊದಲೇನಲ್ಲ ಎಂದಿರುವ ಸಂಘಟನೆಯು, ಬಲೂಚ್ ಹೋರಾಟಗಾರ ಸಾಜಿದ್ ಹುಸೇನ್ ಅವರ ನಿಗೂಢ ಸಾವಿನ ಪ್ರಕರಣವನ್ನು ನೆನಪಿಸಿಕೊಂಡಿದೆ.

ಸಾಜಿದ್ ಹುಸೇನ್ ಅವರು ಎರಡು ತಿಂಗಳ ಕಾಲ ನಿಗೂಢವಾಗಿ ಕಣ್ಮರೆಯಾಗಿದ್ದರು ಹಾಗೂ ಆನಂತರ ಸ್ವೀಡನ್‌ನ ನದಿಯೊಂದರಲ್ಲಿ ಅವರ ಶವ ಪತ್ತೆಯಾಗಿತ್ತು. ಪಾಕಿಸ್ತಾನದಲ್ಲಿ ತನ್ನ ಜೀವಕ್ಕೆ ಬೆದರಿಕೆಯಿರುವುದಾಗಿ ದೂರಿ, ಸಾಜಿದ್ ಹುಸೇನ್, ಸ್ವೀಡನ್‌ನಲ್ಲಿ ಆಶ್ರಯ ಕೋರಿದ್ದರು.

 ‘‘ದುರದೃಷ್ಟವಶಾತ್ ಈ ಎರಡೂ ಪ್ರಕರಣಗಳಲ್ಲಿ ಪೊಲೀಸರು ಯಾವುದೇ ವಿವರಣೆಗಳನ್ನು ನೀಡುತ್ತಿಲ್ಲ. ಈ ಎರಡೂ ಸಾವಿನ ಪ್ರಕರಣಗಳ ಬಗ್ಗೆ ಬೇರೆಯೇ ಆದ ದೃಷ್ಟಿಕೋನದಲ್ಲಿ ನೋಡಲು ಹಲವಾರು ಕಾರಣಗಳಿದ್ದರೂ, ಪೊಲೀಸರು ಅವುಗಳನ್ನು ಆಕಸ್ಮಿಕ ಸಾವು ಅಥವಾ ಆತ್ಮಹತ್ಯೆಯ ಪ್ರಕರಣಗಳೆಂದು ಕರೆದಿದ್ದಾರೆ’’ ಎಂದು ಹೇಳಿಕೆ ತಿಳಿಸಿದೆ.

ಪಾಕಿಸ್ತಾನದ ಮಾನವಹಕ್ಕುಗಳ ಆಯೋಗದ ಸದಸ್ಯ ಅಫ್ರಾ ಸಿಯಾಬ್ ಖಟ್ಟಕ್, ಬಲೂಚ್ ಪೀಪಲ್ಸ್ ಕಾಂಗ್ರೆಸ್‌ನ ನಯೇಲಾ ಖಾದ್ರಿ ಬಲೂಚ್ ಹಾಗೂ ನ್ಯೂಯಾರ್ಕ್ ಟೈಮ್ಸ್ ಅಫ್ಘಾನಿಸ್ತಾನದ ಫಾಹೆಮ್ ಅಬೆದ್, ಹೇಳಿಕೆಗೆ ಸಹಿಹಾಕಿದ ಗಣ್ಯರಲ್ಲಿ ಸೇರಿದ್ದಾರೆ.

 ಬಲೂಚಿಸ್ತಾನದ ಮಾನವಹಕ್ಕುಗಳ ಹಾಗೂ ರಾಜಕೀಯ ಹೋರಾಟಗಾರ್ತಿ ಕರೀಮಾ ಬಲೂಚ್ ಅವರ ಮೃತದೇಹವು ರವಿವಾರ ಟೊರೊಂಟೊದ ಒಂಟಾರಿಯೋ ಸರೋವರದಲ್ಲಿ ಪತ್ತೆಯಾಗಿತ್ತು. ಬಲೂಚಿಸ್ತಾನದಲ್ಲಿ ಆಕೆಗೆ ಗಂಭೀರವಾದ ಜೀವಬೆದರಿಕೆಗಳಿದ್ದ ಕಾರಣ ಆಕೆ 2015ರಲ್ಲಿ ಪಾಕ್‌ನಿಂದ ಕೆನಡಾಕ್ಕೆ ಪಲಾಯನಗೈದಿದ್ದರು.

ಕರೀಮಾ ಬಲೂಚ್ ಅವರು ಬಲೂಚ್ ವಿದ್ಯಾರ್ಥಿ ಸಂಘಟನೆ (ಬಿಎಸ್‌ಓ-ಆಝಾದ್)ಯ ಪ್ರಪ್ರಥಮ ಮಹಿಳಾ ಅಧ್ಯಕ್ಷೆಯಾಗಿದ್ದರು.ಪ್ರತ್ಯೇಕ ಬಲೂಚಿ ಸ್ತಾನ ರಾಷ್ಟ್ರಕ್ಕಾಗಿ ಹೋರಾಟ ನಡೆಸುತ್ತಿರುವ ಬಲೂಚ್ ನ್ಯಾಶನಲ್ ಮೂವ್‌ಮೆಂಟ್‌ನ ಸದಸ್ಯೆಯೂ ಆಗಿದ್ದ, ಅವರಿಗೆ ದಿಟ್ಟತನ ಹಾಗೂ ಶೌರ್ಯಕ್ಕಾಗಿ ಬ್ರಿಟನ್‌ನ ಬಿಬಿಸಿ ಸುದ್ದಿಸಂಸ್ಥೆಯು 2016ರಲ್ಲಿ ಜಗತ್ತಿನ 100 ಅತ್ಯಂತ ಪ್ರಭಾವಿ ಮಹಿಳೆಯರಲ್ಲಿ ಒಬ್ಬರೆಂದು ಹೆಸರಿಸಿತ್ತು.

ಕೆನಡದಲ್ಲಿ ಆಶ್ರಯ ಪಡೆದ ಬಳಿಕವೂ ಹೋರಾಟ ಮುಂದುವರಿಸಿದ್ದ ಕರೀಮಾ ಬಲೂಚ್ ಅವರು ಬಲೂಚಿಸ್ತಾನದಲ್ಲಿ ಪಾಕ್ ಆಡಳಿತವು ಜನರ ಕಣ್ಮರೆ, ಏಕಪಕ್ಷೀಯ ಬಂಧನ,ಚಿತ್ರಹಿಂಸೆ ಹಾಗೂ ಕಾನೂನುಬಾಹಿರ ಹತ್ಯೆಗಳು ಸೇರಿದಂತೆ ಮಾನವಹಕ್ಕುಗಳ ಉಲ್ಲಂಘನೆ ನಡೆಸುತ್ತಿರುವುದಾಗಿ ಆರೋಪಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News