ಸಾಧಕರ ಹುಟ್ಟಿಗೆ ಸಾಹಿತ್ಯ ಸೇವೆ ನಿರಂತರವಾಗಿರಲಿ : ಪ್ರದೀಪ್ ಕುಮಾರ್ ಕಲ್ಕೂರ
ಪುತ್ತೂರು : ಸಾಹಿತ್ಯ ಲೋಕವು ನಿಂತ ನೀರಾಗದೆ ಹರಿಯುತ್ತಾ ಇರಬೇಕು. ಸಾಹಿತ್ಯ ಪ್ರೇರಕ ಕಾರ್ಯಕ್ರಮಗಳು ನಿರಂತರವಾಗಿ ನಡೆದಾಗ ಉತ್ತಮ ಸಾಹಿತ್ಯ ಸಾಧಕರು ಹುಟ್ಟಿ ಬರಲು ಸಾಧ್ಯವಾಗಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ಹೇಳಿದರು.
ಅವರು ಶುಕ್ರವಾರ ಸಂಜೆ ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ವತಿಯಿಂದ ಜ್ಞಾನಗಂಗಾ ಪುಸ್ತಕ ಮಳಿಗೆಯ ಆಶ್ರಯದಲ್ಲಿ ದ.25ರಿಂದ 29 ರ ತನಕ ನಡೆಯಲಿರುವ `ಸಾಹಿತ್ಯ ಸಿಂಚನ ಮತ್ತು ಪುಸ್ತಕ ಹಬ್ಬ' ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೊರೋನ ಸಾಕಷ್ಟು ವಿಕೃತದ ಕಂಡಿದೆಯಾದರೂ ಶೇ.90 ಜಾಗೃತ ವ್ಯವಸ್ಥೆಯನ್ನು ಜಗತ್ತಿನಲ್ಲಿ ಮೂಡಿಸಿದೆ. ಇವತ್ತು ಸೂರ್ಯ ರಶ್ಮಿಯ ಶಕ್ತಿಯನ್ನು ನಮ್ಮದಾಗಿಸಿಕೊಂಡು ನಾವು ಸೂರ್ಯನಂತೆ ಶಕ್ತಿವಂತರಾಗಬೇಕು. ದಾಸ ಸಂಕೀರ್ತನೆ, ಯಕ್ಷಗಾನ ಕಾರ್ಯಕ್ರಮ, ಪೌರಾಣಿಕ ನಾಟಕ, ಸಾಂಸ್ಕೃತಿಕ ಕಾರ್ಯಕ್ರಮ ಹಣೆಪಟ್ಟಿ, ಅದು ಯಾವುದು ಇವತ್ತಿನ ಮಾದ್ಯಮ ಲೋಕ, ಸಾಹಿತ್ಯ ಸಾರಸ್ವತ ಲೋಕದಲ್ಲಿ ಇಲ್ಲ. ಆದರೆ ಇದರ ಒಳ ಸತ್ವವವನ್ನು ಅರಿಯುವ ಕೆಲಸವನ್ನು ನಾವು ಮಾಡಿದಾಗ ಇವತ್ತಿನ ಸ್ಯಾನಿಟೈಸನ್, ಡಿಸ್ಟೆನ್ಸ್ ಪದಗಳು ಮುಂದೆ ಬರುತ್ತಿವೆ. ಹಾಗಾಗಿ ಪ್ರಕೃತಿ ಮತ್ತು ಪ್ರಗತಿಯನ್ನು ತುಲನೆ ಮಾಡಿದಾಗ ಇವತ್ತು ಪ್ರಕೃತಿ ಮಾತನಾಡುತ್ತಿದೆ. ಈ ನಿಟ್ಟಿನಲ್ಲಿ ನಾವು ಎಚ್ಚೆತ್ತುಕೊಳ್ಳಬೇಕಾದರೆ ಸಾಹಿತ್ಯ ಸಂಸ್ಕೃತಿಯ ನಿರಂತರ ಸೇವೆ ಅದು ನಡೆಯುತ್ತಾ ಇರಬೇಕು ಎಂದರು.
ಪುಸ್ತಕ ಹಬ್ಬವನ್ನು ದಾಸ ಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ ಉದ್ಘಾಟಿಸಿದರು. ಸಾಹಿತಿ ಪ್ರೊ. ವಿ.ಬಿ. ಅರ್ತಿಕಜೆ ಅವರ ಅನುವಾದಿತ ಸ್ತೋತ್ರ ಕೃತಿಯನ್ನು ವಿವೇಕಾನಂದ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಸಂಚಾಲಕ ಶ್ರೀದೇವಿ ಕಾನಾವು ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ಕೊಯ್ಯರು ಶಾಲಾ ಗ್ರಂಥಾಲಯಕ್ಕೆ ಉಚಿತ ಪುಸ್ತಕಗಳನ್ನು ಅಲ್ಲಿನ ಶಿಕ್ಷಕ ಬಾಲಕೃಷ್ಣ ಬೇರಿಕೆ ಅವರಿಗೆ ಹಸ್ತಾಂತರಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಐತ್ತಪ್ಪ ನಾಯ್ಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಗೌರವ ಕಾರ್ಯದರ್ಶಿ ಡಾ ಶ್ರೀಧರ್ ಹೆಚ್ ಜಿ, ಸ್ವಾಗತಿಸಿದರು. ಜ್ಞಾನಗಂಗಾ ಪುಸ್ತಕ ಮಳಿಗೆಯ ಪ್ರಕಾಶ್ ಕೊಡೆಂಕಿರಿ ವಂದಿಸಿದರು. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಗೌರವ ಕಾರ್ಯದರ್ಶಿ ಸರೋಜಿನಿ ಮೇನಾಲ ಕಾರ್ಯಕ್ರಮ ನಿರೂಪಿಸಿದರು.