‘21 ಗ್ರಾಮ್ಸ್’ ಚಿತ್ರ ತಂಡದ ಹೊಸ ಸಾಹಸ: ತುಳು ಭಾಷೆಯಿಂದ ಆರು ಭಾಷೆಗೆ ಡಬ್ ಆಗಲಿದೆ ಈ ಸಿನೆಮಾ
ಮಂಗಳೂರು, ಡಿ.26: ತುಳು ಭಾಷೆಯಲ್ಲಿ ನಿರ್ಮಾಣವಾಗಲಿರುವ 21 ಗ್ರಾಮ್ಸ್ ಹೆಸರಿನ ಸೈಕಾಲಜಿಕಲ್ ಥ್ರಿಲ್ಲರ್ ಸಿನೆಮಾ ತುಳು ಭಾಷೆಯಿಂದ ಆರು ಭಾಷೆಗೆ ಡಬ್ ಆಗಲಿದೆ.
ಇದೇ ಮೊದಲ ಬಾರಿಗೆ ತುಳು ಸಿನೆಮಾವೊಂದು ಏಕಕಾಲದಲ್ಲಿ ಆರು ಭಾಷೆಗೆ ಡಬ್ ಆಗಿ ಆಯಾ ರಾಜ್ಯಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾ ಗಲಿದೆ ಎಂದು ಸಿನೆಮಾ ನಿರ್ಮಾಣ ತಂಡ ತಿಳಿಸಿದೆ. ಚಿತ್ರವು ತುಳು ಭಾಷೆಯಲ್ಲಿ ನಿರ್ಮಾಣಗೊಂಡು ಕನ್ನಡ, ಹಿಂದಿ , ತಮಿಳು, ತೆಲುಗು, ಮರಾಠಿ, ಇಂಗ್ಲಿಷ್ ಭಾಷೆಗೆ ಡಬ್ ಆಗಲಿದೆ.ಸೋಚ್ ಸಿನೆಮಾ , ಎಲ್.ಎಸ್. ಮೀಡಿಯ, ಓಂ ಸ್ಟುಡಿಯೋ ಜಂಟಿಯಾಗಿ ಈ ಸಿನೆಮಾ ನಿರ್ಮಾಣ ಮಾಡುತ್ತಿದೆ.
ಅಬ್ಬಕ್ಕ ಕ್ವೀನ್ ಕ್ರೂಸ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಿನೆಮಾ ತಂಡದವರು ಈ ಮಾಹಿತಿ ಹಂಚಿಕೊಂಡಿದ್ದಾರೆ. ಸಿನೆಮಾದ ಹೀರೊ ಬಹುಭಾಷಾ ನಟ ಅಮಿತ್ ರಾವ್ ಮಾತನಾಡಿ, ಪೂರ್ತಿ ಸಿನೆಮಾವು ಆರಂಭದಿಂದ ಕೊನೆ ತನಕ ಸಸ್ಪೆನ್ಸ್ ಆಗಿ ಇರಲಿದೆ. ಹೀರೊ, ಹಿರೋಹಿನ್ ಕೇಂದ್ರಿತ ಮನೋವೈಜ್ಞಾನಿಕ ಭೂಮಿಕೆಯೇ ಈ ಸಿನೆಮಾದ ವಿಶೇಷವಾಗಿದೆ. ತಾನು ಈ ಸಿನೆಮಾಕ್ಕಾಗಿ ಹೇರ್ ಸ್ಟೈಲ್ ವಿಭಿನ್ನವಾಗಿ ಬದಲಾಯಿಸಿಕೊಳ್ಳಬೇಕಾಯಿತು ಎಂದು ಅಮಿತ್ ರಾವ್ ತಿಳಿಸಿದರು.
ಸಿನೆಮಾದ ನಿರ್ದೇಶಕ ಸ್ಟೀಪನ್ ಮಾತನಾಡಿ, ಕಳೆದ 15 ವರ್ಷಗಳಿಂದ ಕನ್ನಡ ಚಿತ್ರ ರಂಗದಲ್ಲಿ ಸಹ ನಿರ್ದೇಶಕನಾಗಿ ದುಡಿದ ಅನುಭವದ ಹಿನ್ನೆಲೆ ತುಳು ಭಾಷೆಯಲ್ಲಿ ಸಿನೆಮಾ ಮಾಡಲು ಮುಂದಾಗಿದ್ದೇನೆ. ನಿರ್ಮಾಣ ತಂಡದ ಪ್ರೋತ್ಸಾಹದ ಕಾರಣದಿಂದಾಗಿ ತುಳುವಿನಿಂದ 6 ಭಾಷೆಗೆ ಡಬ್ ಮಾಡಿ ಸಿನೆಮಾ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದೇವೆ ಎಂದು ತಿಳಿಸಿದರು.
ಸಿನೆಮಾ ಚಿತ್ರೀಕರಣವು ಮಂಗಳೂರು, ಕುಂದಾಪುರ , ಬೆಂಗಳೂರು ಹಾಗೂ ಕರ್ನಾಟಕದ ಇತರ ಭಾಗಗಳಲ್ಲಿ ನಡೆಯಲಿದೆ. ಜೊತೆಗೆ ಉತ್ತರ ಪ್ರದೇಶ ಹಾಗೂ ಜಾರ್ಖಂಡ್‌ನಲ್ಲಿ ಕೂಡ ಚಿತ್ರೀಕರಣ ನಡೆಯಲಿದೆ. ನಿರ್ಮಾಪಕರಾದ ಅವಿನಾಶ್ ಶೆಟ್ಟಿ, ಲಕ್ಷ್ಮಣ್ ಸುವರ್ಣ, ಚರಣ್ ಸುವರ್ಣ, ಬಹುಭಾಷಾ ನಟಿ ಸೋನಲ್ ಮೊಂತೆರೊ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ವಸ್ತ್ರ ವಿನ್ಯಾಸಕಿ ರಶ್ಮಿ ಅನೂಪ್ ರಾವ್, ಅನುಪಮಾ ಸುವರ್ಣ ಉಪಸ್ಥಿತರಿದ್ದರು.