ಇಥಿಯೋಪಿಯಾ ಹತ್ಯಾಕಾಂಡದಲ್ಲಿ 270 ಮಂದಿ ಬಲಿ: ಇಎಚ್‌ಆರ್‌ಸಿ ಬಹಿರಂಗ

Update: 2020-12-26 17:42 GMT

ಆಡಿಸ್ ಅಬಾಬ,ಡಿ.26: ಪಶ್ಚಿಮ ಇಥಿಯೋಪಿಯಾದಲ್ಲಿ ಬಂದೂಕುಧಾರಿಗಳು ಬುಧವಾರ ನಡೆಸಿದ ಗುಂಡಿನ ದಾಳಿಯಲ್ಲಿ ಒಟ್ಟು 270 ಮಂದಿ ಮೃತಪಟ್ಟಿದ್ದಾರೆಂದು, ಆ ದೇಶದ ಮಾನವಹಕ್ಕುಗಳ ಆಯೋಗವು (ಇಎಚ್‌ಆರ್‌ಸಿ) ತಿಳಿಸಿದ್ದು, ಇದು ಈ ಹಿಂದೆ ಸರಕಾರ ಪ್ರಕಟಿಸಿದ ಅಂಕಿ ಅಂಶಗಳಿಗಿಂತ ಎರಡು ಪಟ್ಟು ಅಧಿಕವಾಗಿದೆ.

ಬೆನಿಶಾಂಗುಲ್-ಗುರ್ಮುಝ್ ಪ್ರಾಂತದ ಮೆಟೆಕೆಲ್ ಪ್ರದೇಶದಲ್ಲಿ ಬುಧವಾರ ಬಂದೂಕುಧಾರಿಗಳ ಗುಂಪೊಂದು ಮನೆಗಳಿಗೆ ನುಗ್ಗಿ ನಿದ್ರಿಸುತ್ತಿದ್ದವರನ್ನು ಗುಂಡಿಕ್ಕಿ ಕೊಂದಿತ್ತು ಹಾಗೂ ಅವರ ಬೆಳೆಗಳನ್ನು ಸುಟ್ಟುಹಾಕಿತು ಎಂದು ಸರಕಾರಿ ಸುದ್ದಿಸಂಸ್ಥೆಯೊಂದು ವರದಿ ಮಾಡಿತ್ತು.

ಆದರೆ ಶುಕ್ರವಾರ ತಡರಾತ್ರಿ ಇಎಚ್‌ಆರ್‌ಸಿ ಹೇಳಿಕೆಯೊಂದನ್ನು ನೀಡಿ, ಹತ್ಯಾಕಾಂಡದಲ್ಲಿ ಮೃತಪಟ್ಟವರಲ್ಲಿ 133 ಮಂದಿ ಪುರುಷರು ಹಾಗೂ 35 ಮಹಿಳೆಯರು. 17 ಮಂದಿ ಮಕ್ಕಳು ಕೂಡಾ ಸಾವನ್ನಪ್ಪಿದ್ದು, ಅವರಲ್ಲಿ ಆರು ತಿಂಗಳ ಶಿಶು ಕೂಡಾ ಸೇರಿದೆ. 20 ಮಂದಿ ವಯೋವೃದ್ಧರು ಕೂಡಾ ಹತ್ಯೆಯಾಗಿದ್ದಾರೆ ಎಂದು ಟ್ವಿಟ್ಟರ್ ಶುಕ್ರವಾರ ಹತತಡರಾತ್ರಿ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಹತ್ಯಾಕಾಂಡ ನಡೆದಿರುವ ಮೆಟೆಕೆಲ್ ಪ್ರದೇಶದಲ್ಲಿ ಶಿನಾಶಾ, ಒರೊಮೊ ಹಾಗೂ ಅಮಹರ ಬುಡಕಟ್ಟಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಗುರ್ಮುಝ್ ಜನಾಂಗೀಯ ತೀವ್ರವಾದಿಗಳು ಈ ನರಮೇಧವನ್ನು ನಡೆಸಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.

ಹತ್ಯಾಕಾಂಡದ ಘಟನೆಯ ಬಳಿಕ 10 ಸಾವಿರ ಮಂದಿ 25 ಕಿ.ಮೀ. ದೂರದ ಬುಲೆನ್ ನಗರದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಇಎಚ್‌ಆರ್‌ಸಿ ತಿಳಿಸಿದೆ. ಈ ಮೊದಲೇ ಈ ನಗರದಲ್ಲಿ ಸಾವಿರಾರು ನಿರಾಶ್ರಿತರು ನೆಲೆಸಿದ್ದಾರೆ. ನಗರವು ಇದೀಗ ನಿರಾಶ್ರಿತರು ಹಾಗೂ  ಅವರ ಜಾನುವಾರುಗಳಿಂದ ತುಂಬಿತುಳುಕುತ್ತಿದೆ ಎಂದು ಇಎಚ್‌ಆರ್‌ಸಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News