2 ಗಂಟೆಗಳಲ್ಲಿ ದ.ಕ. ಜಿಲ್ಲೆಯ 114 ಗ್ರಾ.ಪಂ.ಗಳಲ್ಲಿ 14.83 ಶೇ. ಮತದಾನ
ಮಂಗಳೂರು, ಡಿ.27: ದ.ಕ. ಜಿಲ್ಲೆಯ ನಾಲ್ಕು ತಾಲೂಕಿನ 114 ಗ್ರಾಪಂಗಳಿಗೆ ಮತದಾನ ಬೆಳಗ್ಗೆ 7 ಗಂಟೆಗೆ ಆರಂಭಗೊಂಡಿದ್ದರೂ ರವಿವಾರ ಆದ ಕಾರಣ ಬೆಳಗಿನ ಹೊತ್ತು ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆ ವಿರಳವಾಗಿದೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಒಟ್ಟು 14.83 ಶೇ. ಮತದಾನವಾಗಿದೆ.
9 ಗಂಟೆ ವೇಳೆ ಬೆಳ್ತಂಗಡಿ ತಾಲೂಕಿನಲ್ಲಿ 15.29 ಶೇ., ಪುತ್ತೂರು 15.51 ಶೇ., ಕಡಬ 14.03 ಶೇ. ಹಾಗೂ ಸುಳ್ಯದಲ್ಲಿ 13.81 ಶೇ. ಮತದಾನವಾಗಿರುವುದು ವರದಿಯಾಗಿದೆ. ಪುತ್ತೂರು ತಾಲೂಕಿನಲ್ಲಿ ಬಿರುಸಿನ ಮತದಾನವಾಗುತ್ತಿದ್ದು, 11 ಗಂಟಯ ವೇಳೆ 35 ಶೇ. ಹಕ್ಕು ಚಲಾವಣೆಯಾಗಿದೆ.
ಬೆಳಗ್ಗೆ 9 ಗಂಟೆಯ ಬಳಿಕ ಮತಗಟ್ಟೆಗಳಿಗೆ ಮತದಾರರು ಅಧಿಕ ಸಂಖ್ಯೆಯಲ್ಲಿ ಬರಲಾರಂಭಿಸಿದರು. 10:30ರ ವೇಳೆಗೆ ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾ.ಪಂ.ನ ಮತಗಟ್ಟೆಯಲ್ಕಿ ಮತದಾರರು ಮತ ಚಲಾವಣೆಗೆ ಉದ್ದದ ಸರತಿ ಸಾಲಿನಲ್ಲಿ ನಿಂತಿರುವುದು ಕಂಡುಬಂತು.
ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಹಿರೇಬಂಡಾಡಿ ಗ್ರಾಪಂನ ಸಮುದಾಯ ಭವನದಲ್ಲಿ ಮತ ಚಲಾಯಿಸಿದರು.
ಉಪ್ಪಿನಂಗಡಿ ಗ್ರಾಪಂನ ಆರನೇ ವಾರ್ಡ್‌ನಲ್ಲಿ 106 ವರ್ಷದ ಬೊಮ್ಮಿ ಕುಂಟಿನಿ ಅವರು ಮಠ - ಹಿರ್ತಡ್ಕದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿದ್ದ ಮತದಾನ ಕೇಂದ್ರಕ್ಕೆ ತನ್ನ ಮೊಮ್ಮಗನ ಸಹಾಯದಿಂದ ಆಗಮಿಸಿ, ಮತ ಚಲಾಯಿಸಿದರು.
ಡಿಯ ಸೋಣಂದೂರು ಸರಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆಗಳಲ್ಲಿ 10:30ರ ವೇಳೆಗೆ ಶೇ. 25 ಮತದಾನವಾಗಿತ್ತು.
ಎರಡನೇ ಹಂತದಲ್ಲಿ ಬೆಳ್ತಂಗಡಿಯ 46, ಪುತ್ತೂರಿನ 22, ಕಡಬದ 21, ಸುಳ್ಯದ 25 ಸಹಿತ 114 ಗ್ರಾಪಂಗಳ 1,541 ಸ್ಥಾನಗಳಿಗೆ ಚುನಾವಣೆ ನಡೆ ಯಬೇಕಿತ್ತು. ಆ ಪೈಕಿ 41 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದ ಕಾರಣ ಇಂದು 1,500 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಅಂತಿಮವಾಗಿ ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಅನುಸೂಚಿತ ಜಾತಿಯ 371, ಅನುಸೂಚಿತ ಪಂಗಡದ 272, ಹಿಂದುಳಿದ ಅ ವರ್ಗದ 699, ಹಿಂದುಳಿದ ಬಿ ವರ್ಗದ 138, ಸಾಮಾನ್ಯ 1,921 ಅಭ್ಯರ್ಥಿಗಳು ಸೇರಿದ್ದಾರೆ.
ವಿಕಲಚೇತನರು, ಅನಾರೋಗ್ಯ ಪೀಡಿತ ಮತದಾರರನ್ನು ಮತಗಟ್ಟೆಯ ಸಮೀಪದವರೆಗೆ ವಾಹನಗಳಲ್ಲಿ ಕರೆಯಲಾಗುತ್ತಿದೆ. ಮತಗಟ್ಟೆಗಳಲ್ಲಿ ಆಶಾಕಾರ್ಯಕರ್ತರು ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಮತದಾರರಲ್ಲಿ ಮನವಿ ಮಾಡಿಕೊಳ್ಳುವ ಜತೆಗೆ ಸ್ಯಾನಿಟೈಸರ್ ನೀಡಿ ಥರ್ಮಾಮೀಟರ್ ನಲ್ಲಿ ಮತದಾರನ್ನು ಪರೀಕ್ಷೆ ಗೊಳಪಡಿಸುತ್ತಿದ್ದಾರೆ.