ಮೋದಿ ಅಂಬಾನಿ ಮತ್ತು ಆದಾನಿಗೆ ಮಾತ್ರ ಪ್ರಧಾನಿಯಾಗಿದ್ದಾರೆ: ಡೆತ್ ನೋಟ್ ಬರೆದು ಆತ್ಮಹತ್ಯೆಗೈದ ವಕೀಲ

Update: 2020-12-27 13:01 GMT
twitter/pankhuri pathak

ಹೊಸದಿಲ್ಲಿ, ಡಿ.27: ದೆಹಲಿಯ ತಿಕ್ರಿ ಬಾರ್ಡರ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಬೆಂಬಲಿಸಿ ಪಂಜಾಬ್ ನ ವಕೀಲರೋರ್ವರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಮಾಡಿಕೊಂಡಿದ್ದಾರೆ. ಕೆಲದಿನಗಳ ಹಿಂದಷ್ಟೇ ಸಿಖ್ ಧಾರ್ಮಿಕ ಪಂಡಿತರೋರ್ವರು ಆತ್ಮಹತ್ಯೆ ಮಾಡಿಕೊಂಡಿದ್ದರು.

ಪಂಜಾಬ್ ನ ಫಝಿಲ್ಕಾ ಜಿಲ್ಲೆಯ ಜಲಾಲಾಬಾದ್ ನಿವಾಸಿಯಾಗಿರುವ ಅಮರ್ಜಿತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಎಂದು indiatoday.in ವರದಿ ಮಾಡಿದೆ.

ಆತ್ಮಹತ್ಯೆಗೂ ಮುಂಚೆ ‘ಸರ್ವಾಧಿಕಾರಿ ಮೋದಿಗೊಂದು ಪತ್ರ’  ಎಂಬ ಒಕ್ಕಣೆಯಲ್ಲಿ ಡೆತ್ ನೋಟ್ ಬರೆದಿಟ್ಟಿದ್ದು, “ಸಾಮಾನ್ಯ ಜನರ ಧ್ವನಿಯಾಗಬೇಕೆಂದು ನಿಮಗೆ ಜನರು ಬಹುಮತ, ಅಧಿಕಾರ ಮತ್ತು ನಂಬಿಕೆಯನ್ನು ನೀಡಿದರು. ಆದರೆ ಈಗ ತುಂಬಾ ನೋವಿನೊಂದಿಗೆ ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ. ನೀವು ಈಗ ಸಾಮಾನ್ಯರಿಗೆ ಪ್ರಧಾನಿಯಾಗಿಲ್ಲ. ಅಂಬಾನಿ, ಆದಾನಿಯಂತಹ ಬಂಡವಾಳ ಶಾಹಿಗಳಿಗೆ ಪ್ರಧಾನಿಯಾಗಿದ್ದೀರಿ”

“ರೈತರಂತ ಸಾಮಾನ್ಯ ಜನರು ನಿಮ್ಮ ಮೂರು ಕಾಯ್ದೆಗಳಿಂದಾಗಿ ತೊಂದರೆಗೀಡಾಗಿದ್ದಾರೆ. ಇಲ್ಲಿ ಜನರುನೆರೆದಿರುವುದು ಚುನಾವಣೆಗಾಗಿ ಅಲ್ಲ. ಅವರ ಹೊಟ್ಟೆಪಾಡಿಗಾಗಿ ಮಾತ್ರ. ಕೆಲವು ಬಂಡವಾಳಶಾಹಿಗಳಿಗೆ ತಿನ್ನಿಸಲಿಕ್ಕೋಸ್ಕರ ದೇಶದ ಬೆನ್ನೆಲುಬಾಗಿರುವ ರೈತರನ್ನು ನಾಶ ಮಾಡಬೇಡಿ. ಅವರ ಅನ್ನ, ರೊಟ್ಟಿಗಳನ್ನು ಕಸಿಯಬೇಡಿ.”

“ನೀವು ಈಗಾಗಲೇ ಬಂಡವಾಳಶಾಹಿಗಳೊಂದಿಗೆ ಸೇರಿಕೊಂಡು ಸಾಮಾನ್ಯ ಜನರಿಗೆ ದ್ರೋಹವೆಸಗಿದ್ದೀರಿ. ನಿಮ್ಮ ಜೊತೆಗಿದ್ದ ಪಕ್ಷಗಳಿಗೂದ್ರೋಹವೆಸಗಿದ್ದೀರಿ. ನಿಮ್ಮ ಜಾಣ ಕುರುಡುತನ ಮತ್ತು ಕಿವುಡುತನಕ್ಕಾಗಿ ನಾನು ನನ್ನ ಜೀವವನ್ನು ತ್ಯಾಗ ಮಾಡುತ್ತೇನೆ” ಎಂದು ಬರೆದಿದ್ದಾರೆ.

ವ್ಯಕ್ತಿಯು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಕುರಿತಾದಂತೆ ಅವರ ಕುಟುಂಬಸ್ಥರಿಗೆ ನಾವು ಮಾಹಿತಿ ನೀಡಿದ್ದೇವೆ. ಅವರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾಗಿ indiatoday.in ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News