ಉ.ಪ್ರದೇಶ: ಕಾರು ಮತ್ತು ಬೈಕ್‌ಗಳಲ್ಲಿ ಜಾತಿ ಸೂಚಿಸುವ ಸ್ಟಿಕರ್‌ಗಳಿಗೆ ನಿಷೇಧ

Update: 2020-12-27 14:41 GMT
ಫೋಟೊ ಕೃಪೆ: IANS

ಲಕ್ನೋ, ಡಿ.27: ಉತ್ತರ ಪ್ರದೇಶದಲ್ಲಿ ಕಾರುಗಳು ಮತ್ತು ದ್ವಿಚಕ್ರ ವಾಹನಗಳ ವಿಂಡ್‌ಶೀಲ್ಡ್‌ಗಳು ಮತ್ತು ನಂಬರ್ ಪ್ಲೇಟ್‌ಗಳ ಮೇಲೆ ಜಾತಿಯ ಗುರುತುಗಳನ್ನು ಪ್ರದರ್ಶಿಸುವ ಸ್ಟಿಕರ್‌ಗಳನ್ನು ಅಂಟಿಸುವುದನ್ನು ನಿಷೇಧಿಸಲಾಗಿದ್ದು, ಇನ್ನು ಮುಂದೆ ಅದು ದಂಡನೀಯ ಅಪರಾಧವಾಗಲಿದೆ.

ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ವಾಹನಗಳ ವಿಂಡ್‌ಶೀಲ್ಡ್‌ಗಳು ಮತ್ತು ನಂಬರ್‌ಪ್ಲೇಟ್‌ಗಳ ಮೇಲೆ ಯಾದವ, ಜಾಟ್, ಗುರ್ಜರ್, ಬ್ರಾಹ್ಮಣ, ಪಂಡಿತ, ಕ್ಷತ್ರಿಯ, ಲೋಧಿ ಮತ್ತು ಮೌರ್ಯದಂತಹ ಜಾತಿ ಹೆಸರುಗಳನ್ನು ಬರೆಸುವುದು ಫ್ಯಾಷನ್ ಆಗಿತ್ತು. ಇಂತಹ ವಾಹನಗಳನ್ನು ಜಪ್ತಿ ಮಾಡುವಂತೆ ಹೆಚ್ಚುವರಿ ಸಾರಿಗೆ ಆಯುಕ್ತ ಮುಕೇಶ ಚಂದ್ರ ಅವರು ರಾಜ್ಯದ ಎಲ್ಲ ಆರ್‌ಟಿಒ ಕಚೇರಿಗಳಿಗೆ ಆದೇಶಿಸಿದ್ದಾರೆ. ಅಧಿಕಾರದಲ್ಲಿರುವ ಪಕ್ಷವನ್ನು ಅವಲಂಬಿಸಿ ಜನರು ತಮ್ಮ ಜಾತಿಗಳನ್ನು ವಾಹನಗಳ ಮೇಲೆ ಪ್ರದರ್ಶಿಸುವುದು ರಾಜ್ಯದಲ್ಲಿ ಒಂದು ಶೋಕಿಯಾಗಿದೆ.

ಇಂತಹ ಸ್ಟಿಕರ್‌ಗಳು ಸಮಾಜದ ಸಾಮಾಜಿಕ ಸ್ವರೂಪಕ್ಕೆ ಬೆದರಿಕೆಯಾಗಿವೆ ಎಂದು ಕಳವಳ ವ್ಯಕ್ತಪಡಿಸಿ ಮಹಾರಾಷ್ಟ್ರದ ಶಿಕ್ಷಕ ಹರ್ಷಲ್ ಪ್ರಭು ಬರೆದಿದ್ದ ಪತ್ರವನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ ಕಚೇರಿಯಿಂದ ಸೂಚನೆಯ ಮೇರೆಗೆ ಸಾರಿಗೆ ಇಲಾಖೆಯು ಈ ಕ್ರಮಕ್ಕೆ ಮುಂದಾಗಿದೆ.

ಪ್ರತಿ 20 ಕಾರುಗಳ ಪೈಕಿ ಒಂದು ಇಂತಹ ಸ್ಟಿಕರ್ ಹೊಂದಿದ್ದು, ಇಂತಹ ವಾಹನಗಳ ಮಾಲಿಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಕಚೇರಿಯು ಆದೇಶಿಸಿದೆ ಎಂದು ಕಾನ್ಪುರದ ಉಪ ಸಾರಿಗೆ ಆಯುಕ್ತ ಡಿ.ಕೆ.ತ್ರಿಪಾಠಿ ತಿಳಿಸಿದರು.

ಸಮಾಜವಾದಿ ಪಕ್ಷದ ಆಡಳಿತವಿದ್ದಾಗ ವಾಹನಗಳ ಮೇಲೆ ‘ಯಾದವ ’ಎಂದು ಬರೆಸುವುದು ಅಂತಸ್ತಿನ ಚಿಹ್ನೆ ಎಂದು ಪರಿಗಣಿಸಲಾಗಿತ್ತು ಮತ್ತು ಅದು ಜನರಲ್ಲಿ ತಮ್ಮ ಜಾತಿಗಳನ್ನು ವಾಹನಗಳ ಮೇಲೆ ಬರೆಸುವ ಫ್ಯಾಷನ್ ಹುಟ್ಟಲು ಕಾರಣವಾಗಿತ್ತು. ಬಿಎಸ್‌ಪಿ ಆಡಳಿತದಲ್ಲಿ ‘ಜಾತವ್’ಸ್ಟಿಕರ್‌ಗಳು ಹೆಚ್ಚು ಸಾಮಾನ್ಯವಾಗಿದ್ದವು. ಈಗಲೂ ಕೆಲವು ಜಿಲ್ಲೆಗಳಲ್ಲಿ, ವಿಶೇಷವಾಗಿ ಪಶ್ಚಿಮ ಉತ್ತರ ಪ್ರದೇಶದಲ್ಲಿ ಈ ಸ್ಟಿಕರ್‌ಗಳು ವಾಹನಗಳ ಮೇಲೆ ಕಂಡುಬರುತ್ತಿವೆ.

ಈಗಿನ ಯೋಗಿ ಆದಿತ್ಯನಾಥ ಆಡಳಿತದಲ್ಲಿ ಒಂದೇ ಜಾತಿಗೆ ಸೇರಿದ ಕ್ಷತ್ರಿಯ,ಠಾಕೂರ್ ಅಥವಾ ರಜಪೂತ ಹೆಸರುಗಳು ವಾಹನಗಳ ಮೇಲೆ ಸಾಮಾನ್ಯವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News