×
Ad

ನಿರ್ಬಂಧಗಳ ಮಧ್ಯೆಯೂ ವೇಗವಾಗಿ ಹರಡುತ್ತಿದೆ ರೂಪಾಂತರಿ ವೈರಸ್

Update: 2020-12-27 23:12 IST

ಲಂಡನ್, ಡಿ.27: ಬ್ರಿಟನ್‌ನಲ್ಲಿ ಮೊದಲ ಬಾರಿಗೆ ಪತ್ತೆಯಾದ ರೂಪಾಂತರಿ ಕೊರೋನ ವೈರಸ್ ಯುರೋಪ್‌ನ ಇತರ ರಾಷ್ಟ್ರಗಳಲ್ಲೂ ವ್ಯಾಪಕವಾಗಿ ಹರಡುತ್ತಿದೆ. ಈ ಭೀಕರ ಸೋಂಕನ್ನು ತಡೆಯಲು ವಿಮಾನ ಪ್ರಯಾಣಗಳನ್ನು ಸ್ಥಗಿತಗೊಳಿಸುವಂತಹ ಕ್ರಮಗಳನ್ನು ಕೈಗೊಂಡ ಹೊರತಾಗಿಯೂ ರೂಪಾಂತರಿ ವೈರಸ್ ಕೆನಡಾ, ಜಪಾನ್, ಆಸ್ಟ್ರೇಲಿಯ ಹಾಗೂ ಲೆಬನಾನ್ ದೇಶಗಳಲ್ಲಿಯೂ ಕಂಡುಬಂದಿರುವುದಾಗಿ ವರದಿಯಾಗಿದೆ.

ಫ್ರಾನ್ಸ್, ಡೆನ್ಮಾರ್ಕ್, ಸ್ಪೇನ್, ಸ್ವೀಡನ್, ನೆದರ್‌ಲ್ಯಾಂಡ್ಸ್, ಜರ್ಮನಿ ಹಾಗೂ ಇಟಲಿಗಳಲ್ಲಿಯೂ ಕೊರೋನ ವೈರಸ್ ಪತ್ತೆಯಾಗಿದೆ. ಕೆನಡದಲ್ಲಿ ರೂಪಾಂತರಿ ವೈರಸ್‌ನ ಎರಡು ಪ್ರಕರಣಗಳು ದೃಢಪಟ್ಟಿರುವುದಾಗಿ ಒಂಟಾರಿಯೊದ ಮುಖ್ಯ ವೈದ್ಯಾಧಿಕಾರಿ ಶನಿವಾರ ಪ್ರಕಟಿಸಿದೆ. ರೂಪಾಂತರಿ ವೈರಸ್ ಉತ್ತರ ಅಮೆರಿಕ ಖಂಡದಲ್ಲಿ ಪತ್ತೆಯಾದ ಮೊದಲ ಪ್ರಕರಣ ಇದಾಗಿದೆ. ಸೋಂಕಿಗೊಳಗಾದ ರೋಗಿಯು ಯಾವುದೇ ದೇಶಕ್ಕೆ ಪ್ರಯಾಣಿಸಿರಲಿಲ್ಲವಾದ್ದರಿಂದ ಇದೊಂದು ಸಮುದಾಯಿಕವಾಗಿ ಹರಡಿದ ಪ್ರಕರಣವಾಗಿರಬಹುದೆಂದು ವೈದ್ಯಾಧಿಕಾರಿಗಳು ಶಂಕಿಸಿದ್ದಾರೆ.

ಆದಾಗ್ಯೂಕೊರೋನ ಸೋಂಕಿನಿಂದ ಅತ್ಯಧಿಕವಾಗಿ ಬಾಧಿತವಾದ ಅಮೆರಿಕದಲ್ಲಿ ರೂಪಾಂತರಿ ವೈರಸ್‌ನ ಯಾವುದೇ ಪ್ರಕರಣ ಇದುವರೆಗೆ ದಾಖಲಾಗಿಲ್ಲ. ಈ ಮಧ್ಯೆ ಅಮೆರಕಕ್ಕೆ ಬ್ರಿಟನ್‌ನಿಂದ ಆಗಮಿಸುವ ಪ್ರಯಾಣಿಕರು ಸೋಮವಾರದಿಂದ ವಿಮಾನ ನಿರ್ಗಮನದ 72 ತಾಸುಗಳೊಳಗೆ ತಮಗೆ ಕೋವಿಡ್-19 ಸೋಂಕುರಹಿತರಾಗಿರುವುದನ್ನು ದೃಢಪಡಿಸುವ ಪುರಾವೆಯನ್ನು ಹಾಜರುಪಡಿಸಬೇಕೆಂದು ತಿಳಿಸಿದೆ.

ರೂಪಾಂತರಿ ವೈರಸ್‌ನ ಪ್ರಕರಣಗಳೂ ತನ್ನ ನೆಲದಲ್ಲೂ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜಪಾನ್ ದೇಶವು, ತನ್ನ ದೇಶದಲ್ಲಿ ನೆಲೆಸಿರುವವರನ್ನು ಹೊರತುಪಡಿಸಿ ಉಳಿದ ಎಲ್ಲಾ ವಿದೇಶಿ ಪ್ರಜೆಗಳಿಗೆ ಡಿಸೆಂಬರ್ 28ರಿಂದ ಜನವರಿ ತಿಂಗಳ ಅಂತ್ಯದವರೆಗೆ ತಾತ್ಕಾಲಿಕ ನಿಷೇಧ ವಿಧಿಸಿದೆ.

ಬ್ರಿಟನ್‌ನಲ್ಲಿ ರೂಪಾಂತರಿ ವೈರಸ್ ವ್ಯಾಪಕವಾಗಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಯುರೋಪ್ ಹಾಗೂ ಮತ್ತಿತರ ಖಂಡಗಳಲ್ಲಿನ ವಿವಿಧ ದೇಶಗಳು, ಬ್ರಿಟನ್‌ನಿಂದ ಆಗಮಿಸುವ ಪ್ರಯಾಣಿಕರಿಗೆ ನಿರ್ಬಂಧಗಳನ್ನು ಹೇರಿವೆ. ಫ್ರಾನ್ಸ್‌ದೇಶವು ನೆರೆಯ ರಾಷ್ಟ್ರವಾದ ಬ್ರಿಟನ್‌ನಿಂದ ಆಗಮಿಸುವ ಎಲ್ಲಾ ಪ್ರಯಾಣಿಕರಿಗೆ ಕಳೆದ ರವಿವಾರದಿಂದ ತನ್ನ ಗಡಿಯನ್ನು ಬಂದ್ ಮಾಡಿತ್ತು. ಆದರೆ ಬುಧವಾರದಿಂದ ಯುರೋಪ್ ಒಕ್ಕೂಟದ ನಾಗರಿಕರಿಗೆ ತನ್ನ ಗಡಿಯಲ್ಲಿ ಹಾದುಹೋಗಲು ಅನುಮತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News