​ಬಾಕ್ಸಿಂಗ್ ಡೇ ಟೆಸ್ಟ್: ಭಾರತಕ್ಕೆ 131 ರನ್ ಮುನ್ನಡೆ

Update: 2020-12-28 03:43 GMT

ಮೆಲ್ಬೋರ್ನ್ : ಅತಿಥೇಯ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡ 131 ರನ್‌ಗಳ ಮೊದಲ ಇನಿಂಗ್ಸ್ ಮುನ್ನಡೆ ಸಂಪಾದಿಸಿದೆ. ಆಸ್ಟ್ರೇಲಿಯಾದ 195 ರನ್‌ಗಳಿಗೆ ಉತ್ತರವಾಗಿ ಭಾರತ 326 ರನ್‌ಗಳಿಗೆ ಆಲೌಟ್ ಆಗಿದೆ.

ಮೂರನೇ ದಿನದ ಭೋಜನ ವಿರಾಮಕ್ಕೆ ಮುನ್ನ ಲಿಯಾನ್ ಅವರ ಬೌಲಿಂಗ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ (0) ಟ್ರಾವಿಸ್ ಹೆಡ್‌ಗೆ ಕ್ಯಾಚ್ ನೀಡುವ ಮೂಲಕ ಭಾರತದ ಇನಿಂಗ್ಸ್ ಮುಕ್ತಾಯವಾಯಿತು. ಭಾರತ ನಿನ್ನೆಯ ಮೊತ್ತಕ್ಕೆ ಇಂದು ಬೆಳಗ್ಗೆ 49 ರನ್ ಸೇರಿಸಿ ಐದು ವಿಕೆಟ್ ಕಳೆದುಕೊಂಡಿತು.

ಇದಕ್ಕೂ ಮುನ್ನ ರವಿಚಂದ್ರನ್ ಅಶ್ವಿನ್ (14) ಹೇಸಲ್‌ವುಡ್ ಎಸೆತದಲ್ಲಿ ಪಾಯಿಂಟ್‌ನಲ್ಲಿ ಲಿಯೋನ್‌ಗೆ ಕ್ಯಾಚ್ ನೀಡುವ ಮೂಲಕ ಒಂಬತ್ತನೇ ವಿಕೆಟ್ ಪತನವಾಗಿತ್ತು. ಆ ವೇಳೆ ಭಾರತ 130 ರನ್ ಮುನ್ನಡೆಯಲ್ಲಿತ್ತು.

ಉತ್ತಮವಾಗಿ ಆಡುತ್ತಿದ್ದ ರಹಾನೆ ರನ್ ಔಟ್ ಆಗುವ ಮೂಲಕ ಭಾರತದ ಪತನ ಆರಂಭವಾಯಿತು. ಅಜಿಂಕ್ಯ ರಹಾನೆ (112) ಮತ್ತು ರವೀಂದ್ರ ಜಡೇಜಾ (57) ಅವರ ವಿಕೆಟ್ ಕಳೆದುಕೊಂಡ ಬಳಿಕ ಯಾವ ಬ್ಯಾಟ್ಸ್‌ಮನ್‌ಗಳಿಂದಲೂ ಉತ್ತಮ ಪ್ರದರ್ಶನ ಕಂಡುಬರಲಿಲ್ಲ. ಉಮೇಶ್ ಯಾದವ್ (9) ಕೂಡ ಬೇಗನೆ ಔಟ್ ಆದರು. ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ (78ಕ್ಕೆ 3) ಮತ್ತು ಲಿಯಾನ್ (72ಕ್ಕೆ 3) ಯಶಸ್ವಿ ಬೌಲರ್‌ಗಳೆನಿಸಿದರು. ಕಮಿನ್ಸ್ 2 ಹಾಗೂ ಹೇಸಲ್‌ವುಡ್ 1 ವಿಕೆಟ್ ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News