×
Ad

ಬಾಕ್ಸಿಂಗ್ ಡೇ ಟೆಸ್ಟ್ ಗೆದ್ದು ಸರಣಿ ಸಮಬಲ ಸಾಧಿಸಿದ ಭಾರತ

Update: 2020-12-29 09:26 IST

ಮೆಲ್ಬೋರ್ನ್, ಡಿ.29: ಬಾಕ್ಸಿಂಗ್ ಡೇ ಟೆಸ್ಟ್‌ನ ನಾಲ್ಕನೇ ದಿನವೇ ಅತಿಥೇಯ ಆಸ್ಟ್ರೇಲಿಯಾ ತಂಡವನ್ನು 8 ವಿಕೆಟ್‌ಗಳಿಂದ ಬಗ್ಗುಬಡಿಯುವ ಮೂಲಕ ಭಾರತ ನಾಲ್ಕು ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.

ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿತ್ತು. 70 ರನ್‌ಗಳ ಸುಲಭ ಗುರಿ ಪಡೆದ ಭಾರತ ಮಯಾಂಕ್ ಅಗರ್‌ವಾಲ್ (5) ಮತ್ತು ಚೇತೇಶ್ವರ್ ಪೂಜಾರ (3) ಅವರನ್ನು ಬೇಗನೇ ಕಳೆದುಕೊಂಡರೂ, ಆರಂಭಿಕ ಆಟಗಾರ ಶುಭ್‌ಮನ್ ಗಿಲ್ ಮತ್ತು ಮೊದಲ ಇನಿಂಗ್ಸ್‌ನಲ್ಲಿ ಶತಕ ಗಳಿಸಿದ್ದ ನಾಯಕ ಅಜಿಂಕ್ಯ ರಹಾನೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 15.5 ಓವರ್‌ಗಳಲ್ಲಿ ಗೆಲುವಿನ ದಡ ಸೇರಿಸಿದರು.

ರಹಾನೆ 40 ಎಸೆತಗಳಲ್ಲಿ 27 ರನ್ ಗಳಿಸಿದರೆ ಶುಭ್‌ಮನ್ ಗಿಲ್ 36 ಎಸೆತಗಳಲ್ಲಿ 35 ರನ್ ಗಳಿಸಿದರು. ಇದಕ್ಕೂ ಮುನ್ನ ಮೂರನೇ ದಿನದಾಟದ ಅಂತ್ಯಕ್ಕೆ 131 ರನ್‌ಗಳ ಮೊದಲ ಇನಿಂಗ್ಸ್ ಹಿನ್ನಡೆಯ ಬಾಕಿ ತೀರಿಸಿ ಕೇವಲ 2 ರನ್‌ಗಳಿಂದ ಮುಂದಿದ್ದ ಆಸ್ಟ್ರೇಲಿಯಾ ಇಂದು 67 ರನ್ ಸೇರಿಸಿ ಉಳಿದ ನಾಲ್ಕು ವಿಕೆಟ್‌ಗಳನ್ನು ಒಪ್ಪಿಸಿತು.

ತಂಡದ ಸ್ಕೋರ್ 156 ಆಗಿದ್ದಾಗ ಜಸ್‌ಪ್ರೀತ್ ಬೂಮ್ರಾ ಬೌಲಿಂಗ್‌ನಲ್ಲಿ ಮಯಾಂಕ್ ಅಗರ್‌ವಾಲ್ ಹಿಡಿದ ಕ್ಯಾಚ್‌ಗೆ ಪ್ಯಾಟ್ ಕಮಿನ್ಸ್ (22) ಬಲಿಯಾದರು. ನ್ಯಾಥನ್ ಲಿಯಾನ್ (3) ಸಿರಾಜ್‌ಗೆ ವಿಕೆಟ್ ಒಪ್ಪಿಸಿದರೆ, 10 ರನ್ ಗಳಿಸಿದ ಹೇಸಲ್‌ವುಡ್ ವಿಕೆಟನ್ನು ರವಿಚಂದ್ರನ್ ಅಶ್ವಿನ್ ಪಡೆದರು. ಮಿಚೆಲ್ ಸ್ಟಾರ್ಕ್ 14 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು.

ಭಾರತದ ಪರ ಮುಹಮ್ಮದ್ ಸಿರಾಜ್ (37ಕ್ಕೆ 3) ಯಶಸ್ವಿ ಬೌಲರ್ ಎನಿಸಿದರು. ಬೂಮ್ರಾ (54ಕ್ಕೆ 2), ರವಿಚಂದ್ರನ್ ಅಶ್ವಿನ್ (71ಕ್ಕೆ 2) ಮತ್ತು ರವೀಂದ್ರ ಜಡೇಜಾ (28ಕ್ಕೆ 2) ಅವರ ಸಂಘಟಿತ ದಾಳಿಯಿಂದ ಆಸ್ಟ್ರೇಲಿಯಾ ಕುಸಿಯಿತು. ಉಮೇಶ್ ಯಾದವ್ 5 ರನ್‌ಗೆ 1 ವಿಕೆಟ್ ಗಳಿಸಿದರು.

ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್ ತಲಾ ಒಂದು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News