ಉತ್ತರಾಖಂಡದ ಹಲ್ದವಾನಿಯಲ್ಲಿ ದೇಶದ ಮೊದಲ ಪರಾಗಸ್ಪರ್ಶಕ ಪಾರ್ಕ್
ಡೆಹ್ರಾಡೂನ್,ಡಿ.29: ನೈನಿತಾಲದ ಹಲ್ದವಾನಿಯಲ್ಲಿ ನಾಲ್ಕು ಎಕರೆಗೂ ಅಧಿಕ ವಿಸ್ತೀರ್ಣದ ಜಾಗದಲ್ಲಿ 40ಕ್ಕೂ ಅಧಿಕ ಜಾತಿಗಳ ಚಿಟ್ಟೆಗಳು, ಜೇನ್ನೊಣಗಳು, ಪಕ್ಷಿಗಳು ಮತ್ತು ಕೀಟಗಳಿಂದ ಕೂಡಿದ ದೇಶದ ಮೊದಲ ಪಾಲಿನೇಟರ್ ಅಥವಾ ಪರಾಗಸ್ಪರ್ಶಕ ಪಾರ್ಕ್ ತಲೆಯೆತ್ತಿದೆ.
ಉತ್ತರಾಖಂಡ್ ಅರಣ್ಯ ಇಲಾಖೆಯ ಸಂಶೋಧನಾ ಘಟಕವು ಅಭಿವೃದ್ಧಿಗೊಳಿಸಿರುವ ಈ ವರ್ಣರಂಜಿತ ಪಾರ್ಕ್‌ನ್ನು ಖ್ಯಾತ ಚಿಟ್ಟೆತಜ್ಞ ಪೀಟರ್ ಸ್ಮೆಟಾಸೆಕ್ ಅವರು ಮಂಗಳವಾರ ಉದ್ಘಾಟಿಸಿದರು.
ವಿವಿಧ ಜಾತಿಗಳ ಪರಾಗಸ್ಪರ್ಶಕ ಜೀವಿಗಳ ಸಂರಕ್ಷಣೆ,ಇವುಗಳ ಸಂರಕ್ಷಣೆಯ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವಿಕೆ, ಪರಾಗಸ್ಪರ್ಶಕಗಳ ಆವಾಸ ಸ್ಥಾನಗಳಿಗೆ ಬೆದರಿಕೆ ಮತ್ತು ಅವುಗಳ ಮೇಲೆ ವಾಯುಮಾಲಿನ್ಯದ ಪರಿಣಾಮ ಸೇರಿದಂತೆ ಪರಾಗಸ್ಪರ್ಶದ ವಿವಿಧ ಮಗ್ಗಲುಗಳ ಕುರಿತು ಇನ್ನಷ್ಟು ಸಂಶೋಧನೆಗಳನ್ನು ಉತ್ತೇಜಿಸುವುದು ಈ ಪಾರ್ಕ್‌ನ್ನು ಅಭಿವೃದ್ಧಿಗೊಳಿಸಿರುವ ಹಿಂದಿನ ಉದ್ದೇಶವಾಗಿದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಂಶೋಧನೆ) ಸಂಜೀವ ಚತುರ್ವೇದಿ ಅವರು ತಿಳಿಸಿದರು.
ಚೆಂಡುಹೂವು,ಗುಲಾಬಿ,ದಾಸವಾಳ ಹಾಗೂ ಮಲ್ಲಿಗೆಯಂತಹ ಮಕರಂದ ಮತ್ತು ಪರಾಗ ಉತ್ಪಾದಿಸುವ ಗಿಡಗಳನ್ನು ಪಾರ್ಕ್‌ನಲ್ಲಿ ಬೆಳೆಸುವ ಮೂಲಕ ವಿವಿಧ ಜಾತಿಗಳ ಚಿಟ್ಟೆಗಳು, ಜೇನ್ನೊಣಗಳು, ಪಕ್ಷಿಗಳು ಮತ್ತು ಕೀಟಗಳಿಗಾಗಿ ಸೂಕ್ತ ನೆಲೆಗಳನ್ನು ಸೃಷ್ಟಿಸಲಾಗಿದೆ. ಅಲ್ಲದೆ ಅವುಗಳ ಸಂತಾನಾಭಿವೃದ್ಧಿ ಮತ್ತು ಮೊಟ್ಟೆ,ಮರಿಗಳ ಆಶ್ರಯಕ್ಕಾಗಿ ಬೇವು,ಲಂಟಾನಾ,ದಾಲ್ಚಿನ್ನಿ ಮತ್ತು ಲಿಂಬೆ ವರ್ಗದ ಗಿಡಗಳನ್ನು ಬೆಳೆಸಲಾಗಿದೆ. ಪಕ್ಷಿಗಳು ಮತ್ತು ಚಿಟ್ಟೆಗಳನ್ನು ಆಕರ್ಷಿಸಲು ಆಹಾರ ಮತ್ತು ಗೂಡುಗಳನ್ನೂ ಒದಗಿಸಲಾಗಿದೆ.
ಪಾರ್ಕ್ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಕೀಟನಾಶಕಗಳು ಮತ್ತು ಕ್ರಿಮಿನಾಶಕಗಳು ಸೇರಿದಂತೆ ಎಲ್ಲ ಬಗೆಯ ರಾಸಾಯನಿಕಗಳ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಚತುರ್ವೇದಿ ತಿಳಿಸಿದರು.