‘ಲವ್‌ಜಿಹಾದ್’ ತಡೆ ಸುಗ್ರೀವಾಜ್ಞೆಗೆ ಮಧ್ಯಪ್ರದೇಶ ಸಂಪುಟ ಅನುಮೋದನೆ

Update: 2020-12-29 14:29 GMT

ಭೋಪಾಲ, ಡಿ.29: ‘ಲವ್‌ಜಿಹಾದ್’ ತಡೆ ಕಾಯ್ದೆಯನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸುವ ಪ್ರಸ್ತಾವನೆಗೆ ಮಧ್ಯಪ್ರದೇಶ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ. ಇದರೊಂದಿಗೆ ಸುಗ್ರೀವಾಜ್ಞೆಯ ಮೂಲಕ ‘ಲವ್‌ಜಿಹಾದ್’ ವಿರೋಧಿ ಕಾಯ್ದೆಯನ್ನು ಜಾರಿಗೊಳಿಸಿದ ಬಿಜೆಪಿ ಆಡಳಿತವಿರುವ ಎರಡನೇ ರಾಜ್ಯವಾಗಿ ಮಧ್ಯಪ್ರದೇಶ ಗುರುತಿಸಿಕೊಂಡಿದೆ.

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅಧ್ಯಕ್ಷತೆಯಲ್ಲಿ ಮಂಗಳವಾರ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆದ ಸಚಿವ ಸಂಪುಟ ಸಭೆಯಲ್ಲಿ ‘ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ’, ಆಧ್ಯಾದೇಶಕ್ಕೆ ಅನುಮೋದನೆ ನೀಡಲಾಗಿದೆ. 1968ರ ಕಾನೂನಿನ ಬದಲಾಗಿ ಜಾರಿಗೆ ಬರಲಿರುವ ಹೊಸ ಕಾಯ್ದೆಯಡಿ, ಬಲವಂತದ, ವಂಚನೆಯ ಧಾರ್ಮಿಕ ಮತಾಂತರ ಮಾಡಿದರೆ 1ರಿಂದ 10 ವರ್ಷದವರೆಗೆ ಕಠಿಣ ಜೈಲುಶಿಕ್ಷೆ ಮತ್ತು 1 ಲಕ್ಷ ರೂ.ವರೆಗೆ ದಂಡ ವಿಧಿಸಲು ಅವಕಾಶವಿದೆ.

ಸೋಮವಾರ ವಿಧಾನಸಭೆಯ ಚಳಿಗಾಲದ ಅಧಿವೇಶನವನ್ನು ಮುಂದೂಡಿರುವುದರಿಂದ ಪೂರಕ ಬಜೆಟ್ ಸಹಿ ಬಾಕಿ ಉಳಿದ ಇತರ ಕೆಲವು ಸುಗ್ರೀವಾಜ್ಞೆಗಳಿಗೂ ಸಚಿವ ಸಂಪುಟ ಅನುಮೋದನೆ ನೀಡಿದೆ. ಇವನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗುವುದು ಎಂದು ಗೃಹ ಸಚಿವ ಡಾ ನರೋತ್ತಮ ಮಿಶ್ರಾ ಮಾಹಿತಿ ನೀಡಿದ್ದಾರೆ. ನಮ್ಮ ಹೆಣ್ಣುಮಕ್ಕಳನ್ನು ಆಮಿಷ, ಪ್ರಭಾವ, ಬೆದರಿಕೆ ಅಥವಾ ಬಲವಂತದ ಮೂಲಕ ಮತಾಂತರಿಸಿ ವಿವಾಹವಾಗುವ ಪ್ರಕರಣಗಳಿಗೆ ಸಂಬಂಧಿಸಿದ ಈ ಪ್ರಸ್ತಾವಿತ ಕಾಯ್ದೆಗೆ ಸರಕಾರದ ಅನುಮತಿ ಶೀಘ್ರ ದೊರಕುವ ನಿರೀಕ್ಷೆಯಿದೆ. ಪ್ರಸ್ತಾವಿತ ಕಾಯ್ದೆಯಡಿಯ ಅಪರಾಧವು ‘ಸಂಜ್ಞೇಯ ಅಪರಾಧ(ದಂಡಾಧಿಕಾರಿಯ ಅನುಮತಿಯಿಲ್ಲದೆ ಪೊಲೀಸರು ಬಂಧಿಸಬಹುದಾದ ಅಪರಾಧ) ಮತ್ತು ಜಾಮೀನು ರಹಿತ ಅಪರಾಧವಾಗಲಿದೆ . ಧಾರ್ಮಿಕ ಮತಾಂತರಕ್ಕೆ ಪ್ರಚೋದನೆ ಮತ್ತು ಪಿತೂರಿಯನ್ನೂ ನಿಷೇಧಿಸಲಾಗಿದೆ ಎಂದು ಮಿಶ್ರಾ ಹೇಳಿದ್ದಾರೆ.

ಮತಾಂತರಗೊಳ್ಳಲು ಬಯಸುವವರು 60 ದಿನ ಮುಂಚಿತವಾಗಿಯೇ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಬೇಕು. ಮತಾಂತರ ಪ್ರಕ್ರಿಯೆಗೆ ನೆರವಾಗುವ ಧಾರ್ಮಿಕ ಮುಖಂಡರ ಬಗ್ಗೆಯೂ 60 ದಿನದ ಮುಂಚಿತವಾಗಿ ಮಾಹಿತಿ ನೀಡಬೇಕು. ಇದನ್ನು ಉಲ್ಲಂಘಿಸಿದವರಿಗೆ 3ರಿಂದ 5 ವರ್ಷದವರೆಗೆ ಜೈಲುಶಿಕ್ಷೆ ಮತ್ತು 50,000 ರೂ.ದಂಡ ವಿಧಿಸಲಾಗುತ್ತದೆ. ಪರಿಶಿಷ್ಟ ಜಾತಿ, ಪಂಗಡ ಮತ್ತು ಅಲ್ಪಸಂಖ್ಯಾತ ವರ್ಗದ ಸಮುದಾಯದ ಸದಸ್ಯರ ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ, 2 ವರ್ಷದಿಂದ 10 ವರ್ಷದ ವರೆಗೆ ಜೈಲುಶಿಕ್ಷೆ ಮತ್ತು 50,000 ರೂ. ದಂಡ ವಿಧಿಸಲಾಗುತ್ತದೆ. ಧರ್ಮವನ್ನು ಮರೆಮಾಚುವುದು, ಸೋಗು ಹಾಕುವುದು ಮತ್ತು ಧರ್ಮದ ಬಗ್ಗೆ ತಪ್ಪಾಗಿ ನಿರೂಪಿಸುವ ಅಪರಾಧಕ್ಕೆ 3ರಿಂದ 10 ವರ್ಷದವರೆಗೆ ಜೈಲುಶಿಕ್ಷೆ ಮತ್ತು 50,000 ರೂ. ದಂಡ ವಿಧಿಸಲಾಗುವುದು. ಸಾಮೂಹಿಕ ಮತಾಂತರ ಪ್ರಕರಣಗಳಲ್ಲಿ 5ರಿಂದ 10 ವರ್ಷ ಜೈಲುಶಿಕ್ಷೆ, ಕನಿಷ್ಟ 1 ಲಕ್ಷ ರೂ. ದಂಡ ವಿಧಿಸಲು ಕಾಯ್ದೆಯಲ್ಲಿ ಅವಕಾಶವಿದೆ. ಇದೇ ರೀತಿಯ ಕಾನೂನನ್ನು ಜಾರಿಗೊಳಿಸುವ ಬಗ್ಗೆ ಕಳೆದ ತಿಂಗಳು ಉತ್ತರಪ್ರದೇಶ ಸರಕಾರ ಅಧಿಸೂಚನೆ ಹೊರಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News