ಕೊರೋನ ಸೋಂಕು: ಬ್ರಿಟನ್ ವಿಮಾನಯಾನ ನಿಷೇಧ ವಿಸ್ತರಣೆ ?

Update: 2020-12-29 14:33 GMT

ಹೊಸದಿಲ್ಲಿ, ಡಿ.29: ಬ್ರಿಟನ್‌ನಲ್ಲಿ ರೂಪಾಂತರಿತ ಕೊರೋನ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ, ಆ ದೇಶದಿಂದ ಬರುವ ಮತ್ತು ತೆರಳುವ ವಿಮಾನಗಳ ಸಂಚಾರ ನಿಷೇಧವನ್ನು ಡಿಸೆಂಬರ್ 31ರ ಬಳಿಕವೂ ವಿಸ್ತರಿಸುವ ಸಾಧ್ಯತೆಯಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಮಂಗಳವಾರ ಹೇಳಿದ್ದಾರೆ.

ಡಿಸೆಂಬರ್ 31ರವರೆಗೆ ಇರುವ ನಿಷೇಧವನ್ನು ವಿಸ್ತರಿಸುವುದೇ ಬೇಡವೇ ಎಂಬ ಬಗ್ಗೆ ಶೀಘ್ರ ನಿರ್ಧರಿಸಲಾಗುವುದು. ಆದರೆ ನನ್ನ ಪ್ರಕಾರ, ಅನಿರ್ಧಿಷ್ಟಾವಧಿಯವರೆಗೆ ಅಥವಾ ದೀರ್ಘಾವಧಿಗೆ ವಿಸ್ತರಿಸುವ ಅಗತ್ಯವಿಲ್ಲ. ತಾತ್ಕಾಲಿಕ ನಿಷೇಧವನ್ನು ಸ್ವಲ್ಪ ದಿನದವರೆಗೆ ವಿಸ್ತರಿಸುವುದು ಒಳಿತು ಎಂದವರು ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

ದೇಶದಲ್ಲಿ ರೂಪಾಂತರಿತ ಕೊರೋನ ಸೋಂಕಿನ 6 ಹೊಸ ಪ್ರಕರಣ ಪತ್ತೆಯಾಗಿರುವುದಾಗಿ ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ಬ್ರಿಟನ್‌ನಲ್ಲಿ ರೂಪಾಂತರಿತ ಕೊರೋನದ ಬಗ್ಗೆ ಅಲ್ಲಿನ ಆರೋಗ್ಯ ಸಚಿವರು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ, ಬ್ರಿಟನ್ ವಿಮಾನಗಳ ಪ್ರಯಾಣವನ್ನು ಡಿಸೆಂಬರ್ 31ರವರೆಗೆ ರದ್ದುಗೊಳಿಸಿರುವುದಾಗಿ ಕೇಂದ್ರ ನಾಗರಿಕ ವಿಮಾನಯಾನ ಇಲಾಖೆ ಡಿಸೆಂಬರ್ 21ರಂದು ಹೇಳಿಕೆ ನೀಡಿತ್ತು. 50ಕ್ಕೂ ಅಧಿಕ ರಾಷ್ಟ್ರಗಳು ಬ್ರಿಟನ್‌ಗೆ ಪ್ರಯಾಣ ನಿರ್ಬಂಧ ವಿಧಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News