ಲಸಿಕೆ ವಿಫಲವಾಗುತ್ತದೆ ಎಂಬುದಕ್ಕೆ ಪುರಾವೆ ಇಲ್ಲ: ಹೊಸ ರೂಪಾಂತರಿತ ಕೊರೋನ ವೈರಸ್ ಬಗ್ಗೆ ಆರೋಗ್ಯ ಸಚಿವಾಲಯ
ಹೊಸದಿಲ್ಲಿ, ಡಿ. 29: ಇತ್ತೀಚೆಗೆ ಬ್ರಿಟನ್ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ರೂಪಾಂತರಿತ ಕೊರೋನ ವೈರಸ್ ವಿರುದ್ಧ ಈಗಿರುವ ಕೊರೋನ ವೈರಸ್ ಲಸಿಕೆ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತವೆ ಎಂದು ಆರೋಗ್ಯ ಸಚಿವಾಲಯ ಮಂಗಳವಾರ ಹೇಳಿದೆ.
ಭಾರತವೊಂದರಲ್ಲೇ 1.5 ಲಕ್ಷ ಜನರ ಸಾವಿಗೆ ಕಾರಣವಾದ ಹಾಗೂ 1 ಕೋಟಿಗೂ ಅಧಿಕ ಜನರು ಸೋಂಕಿಗೆ ಒಳಗಾದ ಕೊರೋನ ವೈರಸ್‌ನ ಆಕ್ರಮಣಕಾರಿ ರೂಪಾಂತರದ ವಿರುದ್ಧ ಮೊದಲ ಲಸಿಕೆ ಪರಿಣಾಮಕಾರಿಯಾಗಿರದು ಎಂಬ ಭೀತಿಯ ಹಿನ್ನೆಲೆಯಲ್ಲಿ ಸಚಿವಾಲಯ ಈ ಪ್ರತಿಕ್ರಿಯೆ ನೀಡಿದೆ.
ಬ್ರಿಟನ್ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಕಂಡು ಬಂದಿರುವ ರೂಪಾಂತರ ಕೊರೋನ ವೈರಸ್‌ನ ವಿರುದ್ಧ ರಕ್ಷಣೆ ನೀಡುವಲ್ಲಿ ಪ್ರಸ್ತುತ ಇರುವ ಲಸಿಕೆ ವಿಫಲವಾಗಬಹುದು ಎಂಬ ಬಗ್ಗೆ ಯಾವುದೇ ಪುರಾವೆ ಇಲ್ಲ ಎಂದು ಕೇಂದ್ರ ಸರಕಾರದ ಪ್ರಾಥಮಿಕ ವೈಜ್ಞಾನಿಕ ಸಲಹೆಗಾರ ಪ್ರೊ. ಕೆ. ವಿಜಯ ರಾಘವನ್ ಹೇಳಿದ್ದಾರೆ. ಲಸಿಕೆ ಪ್ರತಿಕಾಯಗಳನ್ನು ಉತ್ಪಾದಿಸುವ ಮೂಲಕ ನಮ್ಮ ರೋಗ ನಿರೋಧಕ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಕೊರೋನ ವೈರಸ್‌ನ ರೂಪಾಂತರ ಲಸಿಕೆಯನ್ನು ನಿಷ್ಪ್ರಯೋಜಕವಾಗಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.