×
Ad

ಜ.1ರಿಂದ ಉಡುಪಿ ಜಿಲ್ಲೆಯಲ್ಲಿ ವಿದ್ಯಾಗಮ-2 ಪ್ರಾರಂಭ: ಡಿಸಿ ಜಗದೀಶ್

Update: 2020-12-29 21:11 IST

ಉಡುಪಿ, ಡಿ.29: ಉಡುಪಿ ಜಿಲ್ಲೆಯಲ್ಲಿ ಹೊಸ ವರ್ಷದ ಮೊದಲ ದಿನದಿಂದ ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿದಿನ ತರಗತಿ ಹಾಗೂ 6ರಿಂದ 9ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ‘ವಿದ್ಯಾಗಮ-2’ ಪ್ರಾರಂಭಿಸಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸಂಜೆ ಜಿಪಂ ಸಿಇಓ ಡಾ.ನವೀನ್ ಭಟ್, ಡಿಡಿಪಿಐ ಎನ್.ಎಚ್.ನಾಗೂರ ಉಪಸ್ಥಿತಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.

ಶಾಲಾ ಪ್ರಾರಂಭ ಹಾಗೂ ವಿದ್ಯಾಗಮ-2 ಪ್ರಾರಂಭಿಸುವ ಬಗ್ಗೆ ಜಿಲ್ಲೆಯ ಎಲ್ಲಾ ಐದು ವಲಯಗಳಲ್ಲಿ ಎಲ್ಲಾ ಶಾಲಾ ಮುಖ್ಯಸ್ಥರ ಸಭೆ ಕರೆದು ಶಾಲಾ ಪ್ರಾರಂಭದ ಬಗ್ಗೆ ಎಲ್ಲಾ ತಿಳುವಳಿಕೆಗಳನ್ನು ನೀಡಲಾಗಿದೆ. ಮಕ್ಕಳು ಶಾಲೆಗೆ ಬಂದ ನಂತರ ಕೈಗೊಳ್ಳಬೇಕಾದ ಕ್ರಮ, ಕೋವಿಡ್ ಕುರಿತಂತೆ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಎಲ್ಲರಿಗೂ ಮಾರ್ಗದರ್ಶನ ನೀಡಲಾಗಿದೆ ಎಂದರು.

ಶಾಲಾ ಆರಂಭಕ್ಕೂ ಮುನ್ನ ಶಾಲಾ ಆವರಣ ಹಾಗೂ ಶಾಲಾ ಆವರಣದಲ್ಲಿರುವ ಎಲ್ಲಾ ಕೊಠಡಿಗಳು, ಕಿಟಿಕಿ ಬಾಗಿಲುಗಳು, ಪೀಠೋಪಕರಣ ಗಳು ಹಾಗೂ ಶೌಚಾಲಯಗಳನ್ನು ಗ್ರಾಪಂ, ನಗರಸಭೆ, ಪುರಸಭೆಗಳ ಸಹಕಾರ ದೊಂದಿಗೆ ಸ್ವಚ್ಛಗೊಳಿಸಿ ಸ್ಯಾನಟೈಸ್ ಮಾಡಲು ಸೂಚನೆ ಗಳನ್ನು ನೀಡಲಾಗಿದೆ ಎಂದರು.

ಶಿಕ್ಷಕರಿಗೆ ಕೋವಿಡ್ ಪರೀಕ್ಷೆ: ಜಿಲ್ಲೆಯ ಎಲ್ಲಾ ಶಿಕ್ಷಕರು ಕರ್ತವ್ಯಕ್ಕೆ ಹಾಜರಾ ಗುವ ಮುನ್ನ ಕೋವಿಡ್ ಪರೀಕ್ಷೆಗೊಳಗಾಗುವುದನ್ನು ಕಡ್ಡಾಯ ಗೊಳಿಸಲಾಗಿದೆ. ಎಲ್ಲಾ ಶಿಕ್ಷಕರು ಶಾಲೆ ಪ್ರಾರಂಭಗೊಳ್ಳುವ 72 ಗಂಟೆ ಮುನ್ನ ಕೋವಿಡ್-19 ಪರೀಕ್ಷೆಗೊಳಗಾಗಬೇಕಿದ್ದು, ನೆಗೆಟಿವ್ ಬಂದವರು ಮಾತ್ರ ಶಾಲೆಗೆ ಹಾಜರಾ ಗುವಂತೆ ತಿಳಿಸಲಾಗಿದೆ. ಇದಕ್ಕಾಗಿ ಎಲ್ಲಾ ಬಿಇಓಗಳು ಈಗಾಗಲೇ ತಾಲೂಕು ಆರೋಗ್ಯಾಧಿಕಾರಿಗಳನ್ನು ಸಂಪರ್ಕಿ ಸಿದ್ದಾರೆ ಎಂದರು.

ಮಕ್ಕಳು ಪೋಷಕರಿಗೆ ಒಪ್ಪಿಗೆ ಪತ್ರವನ್ನು ತರಬೇಕಾಗಿದೆ. ವಿದ್ಯಾಗಮ-2 ಹಾಗೂ ತರಗತಿಗೆ ಬಾರದವರು ಆನ್‌ಲೈನ್ ತರಗತಿ ಹಾಗೂ ಟಿವಿಯಲ್ಲಿ ಬರುವ ಪಾಠಗಳಿಗೆ ಹಾಜರಾಗಬಹುದು ಎಂದು ಸಿಇಓ ಡಾ.ನವೀನ್ ಭಟ್ ತಿಳಿಸಿದರು. ಪ್ರತಿ ಶಾಲೆಯಲ್ಲಿ ಮಕ್ಕಳ ಪೋಷಕರ ಸಭೆ ಕರೆದು ಕೋವಿಡ್-19 ಕುರಿತಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ, ಮಕ್ಕಳ ಸುರಕ್ಷತೆಯ ಕುರಿತು, ಶಾಲೆಯ ವೇಳಾಪಟ್ಟಿಯ ಕುರಿತು, ಮಕ್ಕಳ ಆಹಾರ, ಕುಡಿಯುವ ನೀರಿನ ಕುರಿತೂ ಅರಿವು ಮೂಡಿಸಲಾಗಿದೆ.

ಗರಿಷ್ಠ 20 ಮಂದಿಗೆ ಕ್ಲಾಸ್: ವಿದ್ಯಾಗಮ-2 ಹಾಗೂ ಎಸೆಸೆಲ್ಸಿ, ಪಿಯುಸಿ ತರಗತಿಗೆ 15ರಿಂದ 20 ವಿದ್ಯಾರ್ಥಿಗಳ ತಂಡಕ್ಕೆ ಪಾಠ ಮಾಡಲಾಗು ತ್ತದೆ. ಪ್ರತಿ ತಂಡದಲ್ಲಿ 20ಕ್ಕಿಂತ ಹೆಚ್ಚು ಮಕ್ಕಳಿರುವುದಿಲ್ಲ. ಎಸೆಸೆಲ್ಸಿ ಹಾಗೂ ಪಿಯುಸಿ ತರಗತಿಗಳು ಕ್ಲಾಸ್‌ರೂಮಿನಲ್ಲಿ ನಡೆದರೆ, ವಿದ್ಯಾಗಮ-2 ಶಾಲಾ ಆವರಣದಲ್ಲಿ ನಡೆಸಲಾಗುತ್ತದೆ ಎಂದು ಜಗದೀಶ್ ತಿಳಿಸಿದರು.

6ಮತ್ತು 7ನೇ ತರಗತಿ ಮಕ್ಕಳಿಗೆ ವಿದ್ಯಾಗಮ ಕ್ಲಾಸ್‌ಗಳು ಬೆಳಗ್ಗೆ 10ರಿಂದ 1 ರವರೆಗೆ ನಡೆದರೆ, 8ಮತ್ತು 9ನೇ ತರಗತಿ ಮಕ್ಕಳಿಗೆ ಅಪರಾಹ್ನ 2 ರಿಂದ ಸಂಜೆ 4:30ರವರೆಗೆ ನಡೆಯಲಿದೆ. ಎಸೆಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ತರಗತಿಗಳು ಬೆಳಗ್ಗೆ 10ರಿಂದ ಅಪರಾಹ್ನ 1 ರವರೆಗೆ ನಡೆಯಲಿವೆ ಎಂದರು.

ಶಾಲೆಗಳು ಪ್ರಾರಂಭಗೊಂಡರೂ ಮಧ್ಯಾಹ್ನ ಬಿಸಿಯೂಟವನ್ನು ಈಗ ಪ್ರಾರಂಭಿಸುವುದಿಲ್ಲ. ಮಕ್ಕಳು ಮನೆಯಿಂದಲೇ ಆಹಾರ, ಕುಡಿಯುವ ನೀರನ್ನು ತರಬೇಕು. ಒಬ್ಪರ ಆಹಾರವನ್ನು ಇನ್ನೊಬ್ಬರು ಬಳಸುವಂತಿಲ್ಲ. ಎಲ್ಲರಿಗೂ ಮಾಸ್ಕ್ ಕಡ್ಡಾಯ. ಸುರಕ್ಷತಾ ಅಂತರ, ಸ್ಯಾನಟೈಸ್ ಬಳಕೆ ಎಲ್ಲವೂ ಕಡ್ಡಾಯವಾಗಿದೆ ಎಂದು ಜಗದೀಶ್ ತಿಳಿಸಿದರು.

ಜ.1ರಂದು ಶಾಲೆ ಪ್ರಾರಂಭದ ದಿನ ವಿದ್ಯಾರ್ಥಿಗಳನ್ನು ತಳಿರು-ತೋರಣ, ರಂಗೋಲಿ, ಸುಸ್ವಾಗತ ಫಲಕ ಹಾಗೂ ಮತ್ತಿತರ ಚಟುವಟಿಕೆ ಗಳಿಂದ ಸ್ವಾಗತಿಸಲು ಕ್ರಮಕೈಗೊಳ್ಳುವಂತೆ ತಿಳಿಸಲಾಗಿದೆ. ಪ್ರತಿ ಶಾಲೆಯಲ್ಲಿ ಓರ್ವ ಶಿಕ್ಷಕರನ್ನು ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಲು ಮೆಂಟರ್ ಆಗಿ ನೇಮಿಸಲಾಗಿದೆ. ಅದೇ ರೀತಿ ಶಾಲೆಯ ಒಂದು ಕೊಠಡಿಯನ್ನು ಐಸೋಲೇಷನ್ ಕೊಠಡಿಯಾಗಿ ಗುರುತಿಸ ಲಾಗಿದೆ.

50ವರ್ಷ ಮೇಲ್ಪಟ್ಟ ಶಿಕ್ಷಕರು ಕಡ್ಡಾಯವಾಗಿ ಮಾಸ್ಕ್‌ನೊಂದಿಗೆ ಫೇಸ್‌ಶೀಲ್ಡ್‌ನ್ನು ಧರಿಸಬೇಕಾಗಿದೆ. ಶಾಲೆಯಲ್ಲಿ ಥರ್ಮಲ್ ಸ್ಕಾನರ್‌ಗಳನ್ನು ಬಳಸಲು ವ್ಯವಸ್ಥೆ ಮಾಡಲಾಗಿದೆ ಎಂದವರು ಹೇಳಿದರು.

ಎಡಿಸಿ ಸದಾಶಿವ ಪ್ರಭು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News