ಪಶ್ಚಿಮ ಬಂಗಾಳ ರಾಜ್ಯಪಾಲರನ್ನು ಹುದ್ದೆಯಿಂದ ಕೆಳಗಿಳಿಸಿ:ರಾಷ್ಟ್ರಪತಿಗೆ ಟಿಎಂಸಿ ಸಂಸದರ ಮನವಿ
ಕೊಲ್ಕತ್ತಾ : ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನ್ಕರ್ ಅವರನ್ನು ಹುದ್ದೆಯಿಂದ ತಕ್ಷಣ ಕೆಳಗಿಳಿಸಬೇಕೆಂದು ಕೋರಿ ಐದು ಮಂದಿ ಟಿಎಂಸಿ ಸಂಸದರು ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಕಳೆದ ಒಂದು ವರ್ಷದಿಂದ ರಾಜ್ಯಪಾಲರು ಹಾಗೂ ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರಕಾರದ ನಡುವೆ ಹಲವು ವಿಚಾರಗಳ ಕುರಿತಂತೆ ಜಟಾಪಟಿ ನಡೆಯುತ್ತಲೇ ಇರುವುದನ್ನು ಇಲ್ಲಿ ಸ್ಮರಿಸಬಹುದು.
``ರಾಜ್ಯಪಾಲರು ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯಲು ವಿಫಲರಾಗಿದ್ದಾರೆ ಹಾಗೂ ಸುಪ್ರೀಂ ಕೋರ್ಟ್ ಆದೇಶಗಳನ್ನೂ ಸತತ ಉಲ್ಲಂಘಿಸಿದ್ದಾರೆ. ರಾಜ್ಯಪಾಲರಂತಹ ಉನ್ನತ ಹುದ್ದೆಯಲ್ಲಿರುವ ಅವರು ರಾಜ್ಯ ಮತ್ತು ಕೇಂದ್ರದಲ್ಲಿ ಪರಸ್ಪರ ವಿರೋಧಿ ಪಕ್ಷಗಳ ಸರಕಾರಗಳಿವೆ ಎಂಬ ಒಂದೇ ಕಾರಣಕ್ಕೆ ವಿಭಜನಾತ್ಮಕ ರಾಜಕೀಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ'' ಎಂದು ಮನವಿಯಲ್ಲಿ ಹೇಳಲಾಗಿದೆ.
ಟಿಎಂಸಿ ಸಂಸದರಾದ ಸುಖೇಂದು ಶೇಖರ್ ರೇ, ಸುದೀಪ್ ಬಂದೋಪಾಧ್ಯಾಯ, ಡೆರೆಕ್ ಒ'ಬ್ರಿಯನ್, ಕಲ್ಯಾಣ್ ಬ್ಯಾನರ್ಜಿ ಹಾಗೂ ಕಕೋಲಿ ಘೋಷ್ ದಸ್ತಿದಾರ್ ಈ ಮನವಿಗೆ ಸಹಿ ಹಾಕಿದ್ದಾರೆ.
ಮಮತಾ ಬ್ಯಾನರ್ಜಿ ಆಡಳಿತದಡಿಯಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ರಾಜ್ಯಪಾಲರ ಆರೋಪಗಳ ಕುರಿತಂತೆಯೂ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ``ಪಶ್ಚಿಮ ಬಂಗಾಳದಲ್ಲಿ 2001-2011ರ ನಡುವೆ 663 ರಾಜಕೀಯ ಹತ್ಯೆಗಳು ನಡೆದಿದ್ದರೆ ಮಮತಾ ಬ್ಯಾನರ್ಜಿ ನೇತೃತ್ವದ ಸರಕಾರದ ಅವಧಿಯಲ್ಲಿ 2011-2019ರ ನಡುವೆ ಈ ಸಂಖ್ಯೆ ಕಡಿಮೆಯಾಗಿದ್ದು 113 ರಾಜಕೀಯ ಹತ್ಯೆಗಳು ನಡೆದಿವೆ,'' ಎಂದು ಮನವಿಯಲ್ಲಿ ವಿವರಿಸಲಾಗಿದೆ.