'ಕಂಗನಾ ಮುಂಬೈಗೆ ಮರಳಿದ್ದಾರೆ, ಅವರಿಗೆ ಯಾವಾಗ ಸಮನ್ಸ್ ನೀಡುತ್ತೀರಿ?'

Update: 2020-12-30 10:33 GMT

ಮುಂಬೈ : ಬಾಲಿವುಡ್ ಹಾಗೂ ಡ್ರಗ್ಸ್ ನಂಟು ಕುರಿತಂತೆ ತಮಗೆ ಮಾಹಿತಿಯಿದೆ ಎಂದು ಹೇಳಿಕೊಂಡಿರುವ ನಟಿ ಕಂಗನಾ ರಣಾವತ್ ಅವರು  ಮುಂಬೈಗೆ ಮರಳಿರುವ ಕುರಿತಂತೆ ಮಹಾರಾಷ್ಟ್ರ ಕಾಂಗ್ರೆಸ್ ಇಂದು ಮಾದಕವಸ್ತು ನಿಯಂತ್ರಣ ಸಂಸ್ಥೆಗೆ(ಎನ್ ಸಿಬಿ) ನೆನಪಿಸಿದೆ. ನಟಿಯ ವಿಚಾರಣೆಗಾಗಿ ಸಂಸ್ಥೆ ಯಾವಾಗ ಆಕೆಗೆ ಸಮನ್ಸ್ ನೀಡಲಿದೆ ಎಂದೂ ಪಕ್ಷ ಪ್ರಶ್ನಿಸಿದೆ.

ತಾನು ಕೂಡ ಡ್ರಗ್ಸ್ ವ್ಯಸನಿಯಾಗಿದ್ದೆ ಎಂದು ಕಂಗನಾ ಹೇಳಿಕೊಳ್ಳುವ ಹಳೆಯ ವೀಡಿಯೊವನ್ನೂ ಕಾಂಗ್ರೆಸ್ ಟ್ವೀಟ್ ಮಾಡಿ ಹೀಗೆ ಬರೆದಿದೆ- ''ಪ್ರೀತಿಯ ಎನ್‍ಸಿಬಿ, ಆಕೆ ಮರಳಿ ಬಂದಿದ್ದಾರೆ! ಈ ವೀಡಿಯೊಗಾಗಿ ಆಕೆಯನ್ನು ಯಾವಾಗ ಕರೆಯುತ್ತೀರಿ? ಆಕೆ ಬಾಲಿವುಡ್ ಡ್ರಗ್ಸ್ ಜಾಲದ ಕುರಿತು ಮಾಹಿತಿ ನೀಡಲು ಇಚ್ಛಿಸಿದ್ದರಿಂದ ಮೋದಿ ಸರಕಾರ ಆಕೆಗೆ ವೈ ಕೆಟಗರಿ ಭದ್ರತೆ ಒದಗಿಸಿದೆ ( ಆಕೆ ಈಗಲೂ ಈ ಭದ್ರತೆಯನ್ನು  ಸರಕಾರಿ ವೆಚ್ಚದಲ್ಲಿ  ಪಡೆಯುತ್ತಿದ್ದಾರೆ). ಆಕೆ  ಅಪರಾಧದ ಬಗ್ಗೆ ಈಗಲೂ  ಮಾಹಿತಿ ಅಡಗಿಸಿಡುತ್ತಿದ್ದಾರೆ, ಇದು ತಪ್ಪು,'' ಎಂದು ಮಹಾರಾಷ್ಟ್ರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ  ಹಾಗೂ ವಕ್ತಾರ ಸಚಿನ್ ಸಾವಂತ್  ಟ್ವೀಟ್‍ನಲ್ಲಿ ಬರೆದಿದ್ದಾರೆ.

ಬಾಲಿವುಡ್ ಡ್ರಗ್ಸ್ ನಂಟು ಕುರಿತಂತೆ ಇತರ ನಟರು ಹಾಗೂ ಬಾಲಿವುಡ್‍ನ ಕೆಲ ಮಂದಿಗೆ ಸಮನ್ಸ್ ನೀಡಿ ಪ್ರಶ್ನಿಸಲಾಗಿದ್ದರೆ ಕಂಗನಾ ಅವರನ್ನು ಇನ್ನೂ ಏಕೆ ಪ್ರಶ್ನಿಸಿಲ್ಲ, ಎಂದು ಅವರು ಕೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News