ಶಾಹೀನ್ ಬಾಗ್ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ ಕಪಿಲ್ ಬಿಜೆಪಿಗೆ ಸೇರ್ಪಡೆ

Update: 2020-12-30 11:28 GMT

ಹೊಸದಿಲ್ಲಿ: ಈ ವರ್ಷದ ಫೆಬ್ರವರಿಯಲ್ಲಿ ಶಾಹೀನ್ ಬಾಗ್ ನಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಗುಂಡಿನ ದಾಳಿ ನಡೆಸಿ ಸುದ್ದಿಯಾಗಿದ್ದ 25ರ ವಯಸ್ಸಿನ ಕಪಿಲ್ ಗುಜ್ಜರ್ ಗಾಝಿಯಾಬಾದ್ ನಲ್ಲಿ ಬುಧವಾರ ಬಿಜೆಪಿಗೆ ಅಧಿಕೃತವಾಗಿ ಸೇರಿದ್ದಾನೆ.

ಗುಜ್ಜರ್ ದಿಲ್ಲಿಯ ಆಮ್ ಆದ್ಮಿ ಪಕ್ಷದ ಕಾರ್ಯಕರ್ತನಾಗಿದ್ದಾನೆ ಎಂದು ದಿಲ್ಲಿ ಪೊಲೀಸರು ಈ ಹಿಂದೆ ಹೇಳಿದ್ದರು.

ಈ ದೇಶದಲ್ಲಿ ಹಿಂದೂಗಳು ಮಾತ್ರ ಆಳುತ್ತಾರೆ ಎಂದು ಕೂಗಾಡಿದ್ದ ಗುಜ್ಜರ್ ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಹಲವು ಸುತ್ತಿನ ಬುಲೆಟ್ ಗಳನ್ನು ಹಾರಿಸಿದ್ದ.  ಈತನನ್ನು ದಿಲ್ಲಿ ಪೊಲೀಸರು ಫೆಬ್ರವರಿಯಲ್ಲಿ ಬಂಧಿಸಿದ್ದರು.

ಗುಜ್ಜರ್ ಫೋನ್ ಜಾಲಾಡಿದಾಗ ಆತನಿಗೆ ಆಪ್ ಪಕ್ಷ ಸಂಪರ್ಕವಿರುವುದು ಗೊತ್ತಾಗಿದೆ. ಗುಜ್ಜರ್ ಹಾಗೂ ಅವರ ತಂದೆ ಕಳೆದ ವರ್ಷ ಆಪ್ ಗೆ ಸೇರಿದ್ದರು ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅಪರಾಧ ಶಾಖೆಯ ಹಿರಿಯ ಅಧಿಕಾರಿ ರಾಜೇಶ್ ದೇವೊ ಹೇಳಿದ್ದರು. ಟ್ವಿಟ್ಟರ್ ನಲ್ಲಿ ವೈರಲ್ ಆಗಿದ್ದ ಫೋಟೊದಲ್ಲಿ ಗುಜ್ಜರ್ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಹಾಗೂ ಎಎಪಿ ಶಾಸಕಿ ಆತೀಷ್ ಮರ್ಲೆನಾ ಅವರೊಂದಿಗೆ ನಿಂತಿರುವುದು ಕಂಡುಬಂದಿತ್ತು.

ಆ ಸಂದರ್ಭದಲ್ಲಿ ಬಿಜೆಪಿ ಕೂಡ ಆಪ್ ವಿರುದ್ಧ ವಾಗ್ದಾಳಿ ನಡೆಸಿತ್ತು. ಆಪ್ ಭಯೋತ್ಪಾದಕರ ಮೇಲೆ ಕರುಣೆ ತೋರುತ್ತಿದೆ ಎಂದು ಆರೋಪಿಸಿತ್ತು.  ಶಾಹೀನ್ ಬಾಗ್ ಶೂಟರ್ ಗುಜ್ಜರ್ ಆಪ್ ಸದಸ್ಯನಾಗಿದ್ದು, ಆತ ತನ್ನ ತಂದೆಯೊಂದಿಗೆ ವರ್ಷದ ಹಿಂದೆ ಆಪ್ ಗೆ ಸೇರಿದ್ದ. ಆಪ್ ನಾಯಕ ಸಂಜಯ್ ಸಿಂಗ್ ಆತನನ್ನು ಸ್ವಾಗತಿಸಿದ್ದರು. ಫೋಟೊ ಇದಕ್ಕೆ ಸಾಕ್ಷಿಯಾಗಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News