ಹರ್ಯಾಣ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ, ಜೆಜೆಪಿ ಮೈತ್ರಿಕೂಟಕ್ಕೆ ಹಿನ್ನಡೆ

Update: 2020-12-30 11:54 GMT

ಚಂಡೀಗಡ: ಕಳೆದ ಒಂದು ತಿಂಗಳಿನಿಂದ ದಿಲ್ಲಿ ಗಡಿಭಾಗಗಳಲ್ಲಿ ಸಾವಿರಾರು ರೈತರು ಕೃಷಿ ಕಾನೂನುಗಳನ್ನು ರದ್ದುಪಡಿಸಲು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾಗಲೇ ನಡೆದಿರುವ  ಹರ್ಯಾಣದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ-ಜೆಜೆಪಿ ಮೈತ್ರಿಕೂಟ ಹಿನ್ನಡೆ ಅನುಭವಿಸಿದೆ.

ರಾಜ್ಯ ಚುನಾವಣೆಯ ಬಳಿಕ ಪ್ರತಿಷ್ಠಿತ ಕಣವಾಗಿದ್ದ ಸೋನಿಪತ್ ಹಾಗೂ ಅಂಬಾಲ ಮೇಯರ್ ಚುನಾವಣೆಗಳಲ್ಲಿ ಆಡಳಿತಾರೂಢ ಮೈತ್ರಿಪಕ್ಷ ಸೋತಿದೆ. ಉಪ ಮುಖ್ಯಮಂತ್ರಿ ದುಷ್ಯಂತ್ ಸಿಂಗ್ ಚೌಟಾಲ ಅವರ ಜನನಾಯಕ್ ಜನತಾ ಪಕ್ಷವು ತವರು ಪಟ್ಟಣ ಹಿಸಾರ್ ನ ಉಕಲಾನ ಹಾಗೂ ರೇವಾರಿಯದ ಧರುಹೆರಾದಲ್ಲಿ ಸ್ಥಳೀಯ ಚುನಾವಣೆಗಳಲ್ಲಿ ಸೋತಿದೆ.

ಅಂಬಾಲ, ಪಂಚಕುಲ, ಸೋನಿಪತ್, ರೇವಾರಿಯದ ಧರುಹೆರಾ, ರೋಹ್ಟಕ್ ನ ಸಂಪ್ಲಾ ಹಾಗೂ ಹಿಸಾರ್ ನ ಉಕಲಾನದಲ್ಲಿ ರವಿವಾರ ಚುನಾವಣೆ ನಡೆದಿತ್ತು. ಇಂದು ಬೆಳಗ್ಗೆ 8ರಿಂದ ಮತ ಎಣಿಕೆ ಆರಂಭವಾಗಿತ್ತು.

ಕಾಂಗ್ರೆಸ್ ಪಕ್ಷ 14,000 ಮತಗಳಿಂದ ಸೋನಿಪತ್ ಮೇಯರ್ ಚುನಾವಣೆಯನ್ನು ಗೆದ್ದುಕೊಂಡಿದೆ.  ಕಾಂಗ್ರೆಸ್ ನ ನಿಖಿಲ್ ಮದನ್ ಸೋನಿಪತ್ ನ ಮೊದಲ ಮೇಯರ್ ಆಗಲಿದ್ದಾರೆ. ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರ ಆಕ್ರೋಶ ಬಿಜೆಪಿ ಸೋಲಿಗೆ ಕಾರಣ ಎಂದು ಕಾಂಗ್ರೆಸ್ ಹೇಳಿದೆ.

ಅಂಬಾಲದಲ್ಲಿ ಹರ್ಯಾಣ ಜನಚೇತನ ಪಕ್ಷದ ಶಕ್ತಿ ರಾಣಿ ಶರ್ಮಾ ನೂತನ ಮೇಯರ್ ಆಗಲು ಸಜ್ಜಾಗಿದ್ದಾರೆ. ಮಾಜಿ ಕಾಂಗ್ರೆಸ್ ನಾಯಕ ಎಚ್ ಜೆಪಿ ಮುಖ್ಯಸ್ಥ ವಿನೋದ್ ಶರ್ಮಾ ಪತ್ನಿಯಾಗಿರುವ ಶಕ್ತಿರಾಣಿ 8,000ಕ್ಕೂ ಅಧಿಕ ಮತಗಳಿಂದ ಜಯ ಸಾಧಿಸಿದರು.

ಪಂಚಕುಲದಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಬಿಜೆಪಿ ಮುನ್ನಡೆಯಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News