×
Ad

ಬೆಳ್ತಂಗಡಿ : ಎಸ್.ಡಿ ಪಿಐ ಸಂಭ್ರಮಾಚರಣೆ ವೇಳೆ ಪಾಕ್ ಪರ ಘೋಷಣೆ ಆರೋಪ; ಪ್ರಕರಣ ದಾಖಲು

Update: 2020-12-30 21:08 IST

ಬೆಳ್ತಂಗಡಿ : ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ಮತ ಎಣಿಕೆಯ ವೇಳೆ ಮತ ಎಣಿಕೆ ಕೇಂಂದ್ರದ ಹೊರಗಡೆ ಎಸ್ ಡಿಪಿಐ ಕಾರ್ಯಕರ್ತರು ಬುಧವಾರ ಮಧ್ಯಾಹ್ನ ವಿಜಯೋತ್ಸವ ಆಚರಿಸುತ್ತಿದ್ದ ಸಂದರ್ಭದಲ್ಲಿ ಪಾಕಿಸ್ಥಾನ ಪರ ಘೋಷಣೆಗಳನ್ನು ಕೂಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 

ಮತ ಏಣಿಕೆ ಕೇಂದ್ರದ ಹೊರಗೆ ರಾಜಕೀಯ ಪಕ್ಷಗಳ ಸಾವಿರಾರು ಕಾರ್ಯಕರ್ತರು ಸೇರಿದ್ದರು. ಒಂದೊಂದೇ ಕ್ಷೇತ್ರದ ಫಲಿತಾಂಶ ಹೊರ ಬೀಳುತ್ತಿದ್ದಂತೆ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಿದ್ದರು.  ಬಿಜೆಪಿ ಕಾರ್ಯಕರ್ತರು ತಮ್ಮ ಬೆಂಬಲಿತ ಅಭ್ಯರ್ಥಿಗಳು ವಿಜಯಿಯಾದಾಗ ಪಕ್ಷದ ಘೋಷಣೆ ಕೂಗೂತ್ತಾ, ಬಾವುಟ ಹಾರಸಿ ವಿಜಯೋತ್ಸವದಲ್ಲಿ ತೊಡಗಿದ್ದರು. 

ಈ ವೇಳೆ ಎಸ್ ಡಿಪಿಐ ಕಾರ್ಯಕರ್ತರು  ಹಾಗೂ ಬಿಜೆಪಿ ಕಾರ್ಯಕರ್ತರು  ತಮ್ಮ ಪಕ್ಷದ ಪರವಾಗಿ  ಘೋಷಣೆಗಳನ್ನು ಕೂಗೂತ್ತಿದ್ದರು. ಇದರ ನಡುವೆ  ಎಸ್ ಡಿಪಿಐ ಕಡೆಯಿಂದ ಎಸ್ ಡಿ ಪಿಐ ಪರ ಘೋಷಣೆಯ ನಡುವೆ  “ಪಾಕಿಸ್ತಾನ ಝಿಂದಾಬಾದ್” ಘೋಷಣೆಯೂ ಒಂದು ಬಾರಿ ಕೇಳಿಸಿದೆ ಎಂದು ಹೇಳಲಾಗಿದೆ.

ಈ ವೇಳೆಗೆ ಅಲ್ಲಿ ಉಧ್ವಿಗ್ನ ವಾತಾವರಣ ನಿರ್ಮಾಣವಾಯಿತು. ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದ ಜನರು ಪರ ವಿರೋಧವಾಗಿ ಘೋಷಣೆ ಗಳನ್ನು ಕೂಗುತ್ತಿದ್ದರು. ವಿಷಯ ತಿಳಿದು ತಕ್ಷಣವೇ ಸ್ಥಳಕ್ಕಾಗಮಿಸಿದ ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿಜಿ ಹಾಗೂ ಪೊಲೀಸರು ಸೇರಿದ್ದ ಗುಂಪನ್ನು ಚದುರಿಸಿದರು. ಮತ ಎಣಿಕೆ ಕೇಂದ್ರದ ಮುಂದೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಯಿತು. ಮೀಸಲು ಪಡೆಯ ತುಕುಡಿಯನ್ನು ಸ್ಥಳದಲ್ಲಿ ನಿಯೋಜಿಸಲಾಯಿತು. ಮತ ಎಣಿಕೆ ಕೇಂದ್ರದ ಬಳಿ ವಿಜಯೋತ್ಸವ ಆಚರಿಸದಂತೆ ಸೂಚನೆ ನೀಡಿದರು.

ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪಾಕಿಸ್ತಾನದ ಪರವಾಗಿ ಘೋಷಣೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ವೀಡಿಯೊ ವೈರಲ್

ಘಟನೆ ನಡೆದ ಬೆನ್ನಲ್ಲಿಯೇ ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ರಾಜ್ಯಾದ್ಯಂತ ಭಾರೀ ಸುದ್ದಿ ಮಾಡಿತ್ತು. 

ಪ್ರಕರಣ ದಾಖಲು:  ಘಟನೆಯ ವೀಡಿಯೊ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಪಾಕ್ ಪರ ಘೋಷಣೆ ಕೂಗಿದ್ದಾರೆ ಎನ್ನಲಾದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡರು.

ಎಸ್ ಡಿ ಪಿಐ ಕಾರ್ಯಕರ್ತರ ವಿಜಯೋತ್ಸವದ ವೇಳೆ ಹತ್ತು ಹದಿನೈದು ಮಂದಿ ಕಾರ್ಯಕರ್ತರು ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿ ದ್ದಾಗಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘೋಷಣೆ ಕೂಗಿದವರ ವಿರುದ್ಧ  ಪ್ರಕರಣ ದಾಖಲಿಸಿಕೊಂಡಿರು ವುದಾಗಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಪೊಲೀಸರು ವೀಡಿಯೊವನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದು, ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ್ದರೆ ಅವರು ಯಾರು ಎಂಬುದನ್ನು ಗುರುತಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದ ಪ್ರದೇಶದಲ್ಲಿ ಎಸ್ ಡಿಪಿಐ ಕಾರ್ಯಕರ್ತರು ಘೋಷಣೆ ಕೂಗುತ್ತಿರುವುದರ ನಡುವೆ ಹೆಚ್ಚಿನವರು ಎಸ್ ಡಿಪಿಐ ಝಿಂದಾಬಾದ್ ಎಂಬ ಘೋಷಣೆ ಕೇಳುವುದರೊಂದಿಗೆ ಪಾಕಿಸ್ತಾನದ ಪರವಾದ ಘೋಷಣೆಯೂ ಕೇಳಿದೆ ಎಂದು ಆರೋಪವಿದೆ. ಇದನ್ನು ಯಾರು ಹಾಕಿದ್ದಾರೆ ಎಂದು ಗುರುತಿಸುವ ಪ್ರಯತ್ನಕ್ಕಾಗಿ ಸಾರ್ವಜನಿಕರ ಬಳಿ ಇರುವ ಹೆಚ್ಚಿನ ವೀಡಿಯೊಗಳನ್ನು ಸಂಗ್ರಹಿಸುವ ಕಾರ್ಯವನ್ನು ಪೊಲೀಸರು ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

''ಇದು ತಪ್ಪು ಮಾಹಿತಿ, ಅಂತಹ ಯಾವುದೇ ಘಟನೆ ಅಲ್ಲಿ ನಡೆದಿಲ್ಲ. ಅಲ್ಲಿ ನಮ್ಮ ಅಭ್ಯರ್ಥಿಗಳ ವಿಜಯೋತ್ಸವವನ್ನು ಆಚರಿಸುತ್ತಿದ್ದ ವೇಳೆ ನಮ್ಮ ಕಾರ್ಯಕರ್ತರು ಎಸ್ ಡಿ ಪಿ ಐ ಝಿಂದಾಬಾದ್ ಎಂದು ಸ್ಪಷ್ಟವಾಗಿ ಕೂಗಿದ್ದಾರೆ. ನಮ್ಮ ಕಾರ್ಯಕರ್ತರಿಗೆ ದೇಶದ್ರೋಹದ ಕೆಲಸವನ್ನು ನಾವು ಯಾವತ್ತೂ ಕಲಿಸುತ್ತಿಲ್ಲ. ನಾವು ದೇಶವನ್ನು ಪ್ರೀತಿಸುವವರು ಹೊರತು ದ್ವೇಷಿಸುವವರಲ್ಲ. ಇಂದು ಖಂಡಿತವಾಗಿಯೂ ಸುಳ್ಳು ಸುದ್ದಿಯಾಗಿದ್ದು, ಪೊಲೀಸ್ ಅಧಿಕಾರಿಗಳು ಇದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕಾಗಿ ನಾವು ಒತ್ತಾಯಿಸುತ್ತಿದ್ದೇವೆ ಮತ್ತು ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಈ ಬಗ್ಗೆ ಸುಳ್ಳು ಆರೋಪ ಮಾಡಿದ ಮಾಧ್ಯಮಗಳ ವಿರುದ್ಧ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಲಾಗಿದೆ. 

-ಹೈದರ್ ನೀರ್ಸಾಲ್, 
ಎಸ್ ಡಿ ಪಿ ಐ ಬೆಳ್ತಂಗಡಿ ತಾಲೂಕು ಅಧ್ಯಕ್ಷರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News