ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಸಾಧ್ಯವಿಲ್ಲ:ಕೇಂದ್ರ
ಹೊಸದಿಲ್ಲಿ,ಡಿ.30: ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂದೆಗೆದುಕೊಳ್ಳದಿರುವ ತನ್ನ ನಿಲುವಿಗೆ ಗಟ್ಟಿಯಾಗಿ ಅಂಟಿಕೊಂಡಿರುವ ಕೇಂದ್ರವು ರೈತರ ಬೇಡಿಕೆಗಳನ್ನು ಪರಿಶೀಲಿಸಲು ವಿಶೇಷ ಸಮಿತಿಯೊಂದನ್ನು ರಚಿಸುವ ಕೊಡುಗೆಯನ್ನು ಪ್ರತಿಭಟನಾನಿರತ ರೈತ ಸಂಘಟನೆಗಳ ಮುಂದಿರಿಸಿದೆ ಎಂದು ಸರಕಾರದಲ್ಲಿನ ಮೂಲಗಳು ತಿಳಿಸಿವೆ.
ಬುಧವಾರ ಕೇಂದ್ರ ಮತ್ತು ರೈತ ಸಂಘಟನೆಗಳ ನಡುವೆ ನಡೆದ ಮಾತುಕತೆಗಳ ಸಂದರ್ಭ,ಕಾನೂನುಗಳನ್ನು ಹಿಂದೆಗೆದುಕೊಳ್ಳುವ ಪ್ರಕ್ರಿಯೆಯು ಅವುಗಳನ್ನು ರೂಪಿಸುವ ಪ್ರಕ್ರಿಯೆಯಷ್ಟೇ ದೀರ್ಘವಾಗಿದೆ ಎಂದೂ ಸರಕಾರವು ರೈತರಿಗೆ ವಿವರಿಸಿದೆ. ವಿದ್ಯುತ್ ತಿದ್ದುಪಡಿ ಮಸೂದೆ ಮತ್ತು ಕೃಷಿತ್ಯಾಜ್ಯಗಳ ದಹನಕ್ಕೆ ದಂಡದ ನಿಯಮಗಳಂತಹ ಇತರ ವಿಷಯಗಳಲ್ಲಿ ರಿಯಾಯಿತಿಗಳನ್ನು ನೀಡಲು ಅದು ಒಪ್ಪಿಕೊಂಡಿದೆ ಎಂದು ಈ ಮೂಲಗಳು ತಿಳಿಸಿದವು.
ಆಂತರಿಕ ಚರ್ಚೆಗಳ ಬಳಿಕ ಸರಕಾರದ ಪ್ರಸ್ತಾವಕ್ಕೆ ಪ್ರತಿಕ್ರಿಯಿಸುವುದಾಗಿ ಮಾತುಕತೆಗಳಲ್ಲಿ ಪಾಲ್ಗೊಂಡಿದ್ದ ರೈತ ನಾಯಕರು ತಿಳಿಸಿದರು.
ರೈತರು ನೂತನ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕೆಂಬ ತಮ್ಮ ನಿಲುವಿಗೆ ಅಂಟಿಕೊಂಡಿರುವುದರಿಂದ ಮಾತುಕತೆಗಳು ವಿಫಲಗೊಳ್ಳಲಿವೆ ಎಂದು ಈ ತಿಂಗಳ ಆರಂಭದಲ್ಲಿಯೇ ಕೇಂದ್ರಕ್ಕೆ ತಿಳಿಸಿದ್ದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ನೇತೃತ್ವದ ಸರ್ವೋಚ್ಚ ನ್ಯಾಯಾಲಯದ ಪೀಠವು,ರೈತ ಸಂಘಟನೆಗಳ ಪ್ರತಿನಿಧಿಗಳು ಮತ್ತು ಸರಕಾರದಿಂದ ನಾಮನಿರ್ದೇಶಕರನ್ನೊಳಗೊಂಡ ವಿಶೇಷ ಸಮಿತಿಯೊಂದನ್ನು ರಚಿಸುವಂತೆ ಆದೇಶಿಸಿತ್ತು.
ಮೂರು ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ಬೇಡಿಕೆಗಳು ಮತ್ತು ಸಮಸ್ಯೆಗಳನ್ನು ಚರ್ಚಿಸಲು ಸಮಿತಿಯೊಂದನ್ನು ರಚಿಸಬಹುದಾಗಿದೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್,ಪಿಯೂಷ್ ಗೋಯಲ್ ಮತ್ತು ಸೋಮಪ್ರಕಾಶ ಅವರನ್ನು ಉಲ್ಲೇಖಿಸಿ ಸರಕಾರಿ ಮೂಲಗಳು ತಿಳಿಸಿದವು. ಸರಕಾರವು ರೈತರಿಗೆ ಕಾನೂನುಗಳ ಬಗ್ಗೆ ವಿವರವಾದ ಮಾಹಿತಿಗಳನ್ನು ಒದಗಿಸಿದೆ ಮತ್ತು ಕಾನೂನುಗಳನ್ನು ಮಾಡುವುದು ಹಾಗೂ ಅವುಗಳನ್ನು ಹಿಂದೆಗೆದುಕೊಳ್ಳುವುದು ಸುದೀರ್ಘ ಪ್ರಕ್ರಿಯೆಯಾಗಿದೆ ಎಂದು ಅವರಿಗೆ ತಿಳಿಸಿದೆ ಎಂದೂ ಮೂಲಗಳು ಹೇಳಿದವು.
ಸರಕಾರ ಈಗಲೂ ಕೃಷಿ ಕಾನೂನುಗಳನ್ನು ರದ್ದುಗೊಳಿಸದಿರುವ ತನ್ನ ಹಟಮಾರಿತನವನ್ನು ಪ್ರದರ್ಶಿಸುತ್ತಿದೆ ಎಂದು ರೈತ ಸಂಘಟನೆಗಳ ನಾಯಕರು ತಿಳಿಸಿದರು. ಕೃಷಿ ಉತ್ಪನ್ನಗಳಿಗಾಗಿ ಕಾನೂನುಬದ್ಧವಾಗಿ ಜಾರಿಗೊಳಿಸಿದ ಬೆಂಬಲ ಬೆಲೆಗಳಿಗೂ ಅದು ಸಿದ್ಧವಿಲ್ಲ ಮತ್ತು ಸಮಿತಿಯು ಅದನ್ನು ಪರಿಶೀಲಿಸಬಹುದಾಗಿದೆ ಎಂದು ಹೇಳಿದೆ ಎಂದರು. ಆದರೆ ವಿದ್ಯುತ್ ತಿದ್ದುಪಡಿ ಮಸೂದೆಯನ್ನು ಮತ್ತು ವಾಯು ಗುಣಮಟ್ಟ ಆಯೋಗ ವಿಧೇಯಕದಲ್ಲಿನ ಕೃಷಿ ತ್ಯಾಜ್ಯಗಳ ದಹನಕ್ಕಾಗಿ ದಂಡನೆ ನಿಯಮಗಳನ್ನು ಹಿಂದೆಗೆದುಕೊಳ್ಳುವ ಪ್ರಸ್ತಾವವನ್ನು ಸರಕಾರವು ರೈತರ ಮುಂದಿರಿಸಿದೆ. ಇವು ಪ್ರತಿಭಟನಾನಿರತ ರೈತರ ಬೇಡಿಕೆಗಳಲ್ಲಿ ಸೇರಿವೆ.
ಮಧ್ಯಪ್ರದೇಶದಲ್ಲಿ ವ್ಯಾಪಾರಿಗಳು ಮಾಡುತ್ತಿರುವ ವಂಚನೆಗಳ ವಿಷಯವನ್ನು ಪ್ರಸ್ತಾಪಿಸುವ ಉದ್ದೇಶದೊಂದಿಗೆ ರೈತರು ಇಂದಿನ ಸಭೆಗೆ ತೆರಳಿದ್ದರು. ಮಧ್ಯಪ್ರದೇಶದ ಹರ್ದಾ ಜಿಲ್ಲೆಯಲ್ಲಿ ವ್ಯಾಪಾರಿಗಳು 22 ರೈತರಿಗೆ ನೀಡಿದ್ದ ಚೆಕ್‌ಗಳು ಬ್ಯಾಂಕ್‌ನಿಂದ ನಗದಾಗದೆ ವಾಪಸ್ ಬಂದಿವೆ ಎಂದು ರೈತರ ಪ್ರತಿನಿಧಿಯೋರ್ವರು ಉದಾಹರಣೆ ನೀಡಿದರು.
‘ಉತ್ತರ ಪ್ರದೇಶದಲ್ಲಿ ಕೃಷಿ ಕಾನೂನುಗಳು ಜಾರಿಗೊಂಡ ಬಳಿಕ ಕೃಷ್ಯುತ್ಪನ್ನಗಳ ಬೆಲೆಗಳು ಶೇ.50ರಷ್ಟು ಕುಸಿದಿವೆ. ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರಗಳಿಗೆ ಕೃಷಿ ಉತ್ಪನ್ನಗಳನ್ನು ಖರೀದಿಸಲಾಗುತ್ತಿದೆ. ಭತ್ತ ಕ್ವಿಂಟಲ್‌ಗೆ 800 ರೂ.ದರದಲ್ಲಿ ಮಾರಾಟವಾಗುತ್ತಿದೆ. ಈ ವಿಷಯಗಳನ್ನು ಸಭೆಯಲ್ಲಿ ನಾವು ಎತ್ತಲಿದ್ದೇವೆ ’ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಅವರು ಮಾತುಕತೆಗಳಿಗೆ ಮುನ್ನ ಸುದ್ದಿಗಾರರಿಗೆ ತಿಳಿಸಿದ್ದರು.
‘ನಮ್ಮ ಬೇಡಿಕೆಗಳು ಈಡೇರುವವರೆಗೆ ನಾವು ದಿಲ್ಲಿಯನ್ನು ತೊರೆಯುವುದಿಲ್ಲ. ನಮ್ಮ ಹೊಸವರ್ಷವನ್ನು ರಾಜಧಾನಿಯ ಗಡಿಗಳಲ್ಲೇ ಆಚರಿಸುತ್ತೇವೆ ’ಎಂದು ಅವರು ಹೇಳಿದ್ದರು.
ಆರು ತಿಂಗಳು ಅಥವಾ ಅದಕ್ಕೂ ಹೆಚ್ಚಿನ ಅವಧಿಗೆ ಮೊಕ್ಕಾಂ ಹೂಡಲು ಸಕಲ ಸಿದ್ಧತೆಗಳೊಂದಿಗೆ ತಾವು ಇಲ್ಲಿಗೆ ಬಂದಿದ್ದೇವೆ ಎಂದು ರೈತರು ತಿಳಿಸಿದ್ದಾರೆ.
ಇದೊಂದು ನಿರ್ಣಾಯಕ ಸಭೆಯಾಗಲಿದೆ ಎಂದು ಮಾತುಕತೆಗಳ ಮುನ್ನ ಆಶಯ ವ್ಯಕ್ತಪಡಿಸಿದ್ದ ಸೋಮಪ್ರಕಾಶ, ರೈತರು ತಮ್ಮ ಮನೆಗಳಲ್ಲಿ ಹೊಸ ವರ್ಷವನ್ನು ಆಚರಿಸಬೇಕು ಎಂದು ಸರಕಾರವು ಬಯಸಿದೆ ಎಂದು ಹೇಳಿದ್ದರು