×
Ad

ದ.ಕ. ಜಿಲ್ಲೆ : ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಮೇಲುಗೈ

Update: 2020-12-31 00:04 IST

ಮಂಗಳೂರು, ಡಿ.30: ದ.ಕ.ಜಿಲ್ಲೆಯ 220 ಗ್ರಾಪಂಗಳ 3,131 ಸ್ಥಾನಗಳಿಗೆ ಎರಡು ಹಂತದಲ್ಲಿ ಜರಗಿದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 7,275 ಅಭ್ಯರ್ಥಿಗಳ ಪೈಕಿ ಬುಧವಾರ ಜಿಲ್ಲೆಯ 7 ಕೇಂದ್ರಗಳಲ್ಲಿ ನಡೆದ ಮತ ಎಣಿಕೆಯಲ್ಲಿ ನಿರೀಕ್ಷೆಯಂತೆ ಆಡಳಿತಾರೂಢ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ.

ಈ ಹಿಂದೆ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಮಧ್ಯೆ ಹಣಾಹಣಿ ನಡೆಯುತ್ತಿದ್ದರೆ, ಈ ಬಾರಿ ಜಿಲ್ಲೆಯ ಹಲವು ಕಡೆ ಅದರಲ್ಲೂ ಮಂಗಳೂರು ವಿಧಾನಸಭಾ ಕ್ಷೇತ್ರ, ಮಂಗಳೂರು ಉತ್ತರ ಮತ್ತು ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿಗಳು ಅನಿರೀಕ್ಷಿತ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಕಳೆದ ಬಾರಿಯಂತೆ ಈ ಬಾರಿಯೂ ಎರಡನೇ ಸ್ಥಾನದಲ್ಲಿ ತೃಪ್ತಿ ಪಟ್ಟುಕೊಂಡಿದ್ದಾರೆ.

ನಗರದ ಬೋಂದೆಲ್ ಸರಕಾರಿ ಕಾಲೇಜಿನಲ್ಲಿ ನಡೆದ ಮಂಗಳೂರು ತಾಲೂಕಿನ ಮತ ಎಣಿಕೆಯು ರಾತ್ರಿ 9:30ರವರೆಗೆ ಮತ್ತು ಬಂಟ್ವಾಳ ತಾಲೂಕಿನ ಮತ ಎಣಿಕೆಯು ರಾತ್ರಿ 12 ಗಂಟೆಯವರೆಗೂ ಮುಂದುವರಿಯಿತು. ಒಟ್ಟಾರೆ ಜಿಲ್ಲೆಯಾದ್ಯಂತ ಮತ ಎಣಿಕೆ ಕಾರ್ಯವು ಸಂಪೂರ್ಣ ಗೊಳ್ಳುವಾಗ ತಡರಾತ್ರಿಯಾಗಿದೆ.

ಈ ಬಾರಿಯ ಚುನಾವಣೆಯು ಬ್ಯಾಲೆಟ್ ಪೇಪರ್ (ಮತಪತ್ರ)ನಲ್ಲಿ ನಡೆದಿದ್ದು, ಒಂದೊಂದೇ ಮತಗಳ ಎಣಿಕೆ ಮಾಡಲಾಗುತ್ತಿದ್ದ ಕಾರಣ ಮತ್ತು ಕೆಲವು ಕಡೆ ಮರು ಎಣಿಕೆ ಮಾಡುವ ಪ್ರಮೇಯ ಬಂದ ಕಾರಣ ಎಣಿಕೆ ಕಾರ್ಯವು ರಾತ್ರಿಯವರೆಗೂ ನಡೆಯುವಂತಾಗಿದೆ.

ಮತ ಎಣಿಕಾ ಕೇಂದ್ರದ ಸುತ್ತಮುತ್ತ ಸೆ.144ರ ಅನ್ವಯ ಮಂಗಳೂರು ನಗರ ಪೊಲೀಸ್ ಆಯುಕ್ತರು ಮತ್ತು ಜಿಲ್ಲಾಧಿಕಾರಿಯು ಪ್ರತ್ಯೇಕವಾಗಿ ನಿಷೇಧಾಜ್ಞೆ ಜಾರಿಗೊಳಿಸಿದ್ದರೂ ಕೂಡ ವಿಜೇತ ಅಭ್ಯರ್ಥಿಗಳು, ಬೆಂಬಲಿತರು ಮತ್ತು ಕಾರ್ಯಕರ್ತರ ವಿಜಯೋತ್ಸವವು ಮುಗಿಲು ಮುಟ್ಟುವಂತಿತ್ತು.

ಬುಧವಾರ ರಾತ್ರಿ ಪ್ರಕಟವಾದ ಫಲಿತಾಂಶದಂತೆ ಬಂಟ್ವಾಳ ಕ್ಷೇತ್ರ: ಸಂಗಬೆಟ್ಟು, ಪಿಲಾತಬೆಟ್ಟು, ರಾಯಿ, ಕಾವಳ ಮೂಡೂರು, ಅನಂತಾಡಿ, ಅಮ್ಮುಂಜೆ ಗ್ರಾಮಗಳಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರಕ್ಕೆ ಬಂದಿದ್ದಾರೆ. ನಾವೂರು, ಮಾಣಿ, ಕರೊಪಾಡಿ, ಕರಿಯಂಗಳ ಗ್ರಾಮಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕಾರ ಹಿಡಿಯಲಿದ್ದಾರೆ. ಪೆರಾಜೆಯಲ್ಲಿ ಸಮಬಲವಿದೆ. ಮಂಗಳೂರು ಕ್ಷೇತ್ರದ ಮೇರಮಜಲು-ಕೊಡ್ಮಾಣ್‌ನಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರ ಹಿಡಿಯಲಿದ್ದಾರೆ.

ಬೆಳ್ತಂಗಡಿ ಕ್ಷೇತ್ರದ ಅಂಡಿಂಜೆ, ಪಟ್ರಮೆಯಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರಕ್ಕೇರಿದ್ದಾರೆ. ಪುತ್ತೂರು ಕ್ಷೇತ್ರದ ವಿಟ್ಲ ಮೂಡ್ನೂರು, ಕೆದಂಬಾಡಿ ಯಲ್ಲಿ ಬಿಜೆಪಿ ಬೆಂಬಲಿತರು ಮತ್ತು ಮಾಣಿಲದಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕಾರ ಹಿಡಿಯಲಿದ್ದಾರೆ. ಸುಳ್ಯ ಕ್ಷೇತ್ರದ ಸುಬ್ರಹ್ಮಣ್ಯದಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರ ಹಿಡಿಯಲಿದ್ದಾರೆ. ಮೂಡುಬಿದಿರೆ ಕ್ಷೇತ್ರದ ಬಳ್ಕುಂಜೆ, ದರೆಗುಡ್ಡೆಯಲ್ಲಿ ಬಿಜೆಪಿ ಬೆಂಬಲಿತರು ಮತ್ತು ಪಡು ಮಾರ್ನಾಡು, ನೆಲ್ಲಿಕಾರು ಗ್ರಾಪಂನಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News