×
Ad

​ಬ್ಯಾರಿ ಅಕಾಡಮಿಯ 2021ರ ಕ್ಯಾಲೆಂಡರ್ ಬಿಡುಗಡೆ

Update: 2020-12-31 17:50 IST

ಮಂಗಳೂರು, ಡಿ.31: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಇತ್ತೀಚೆಗೆ ಅನಾವರಣಗೊಳಿಸಿರುವ ನೂತನ ಬ್ಯಾರಿ ಲಿಪಿ ಹಾಗೂ ಸಂಖ್ಯೆಯನ್ನು ಬಳಸಿಕೊಂಡು 2021ರ ಹೊಸ ವರ್ಷದ ಕ್ಯಾಲೆಂಡರನ್ನು (ಬ್ಯಾರಿ ನಾಲ್ ಕನಕ್ಕ್) ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಗುರುವಾರ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು ಪ್ರತಿಯೊಂದು ಬ್ಯಾರಿ ಭಾಷಿಕರು ಸುಲಭವಾಗಿ ನೂತನ ಬ್ಯಾರಿ ಲಿಪಿಯನ್ನು ಕಲಿಯಲು ಹಾಗೂ ನೆನಪಿನಲ್ಲಿ ಉಳಿಯಲು ಈ ಬ್ಯಾರಿ ಕ್ಯಾಲೆಂಡರ್ ಸಹಾಯವಾಗಲಿದೆ. ಈ ಐತಿಹಾಸಿಕ ಹೆಜ್ಜೆಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಬ್ಯಾರಿ ಅಧ್ಯಯನ ಪೀಠದ ಮುಖ್ಯಸ್ಥ ಡಾ.ಅಬೂಬಕರ್ ಸಿದ್ದೀಕ್ ಪ್ರಾದೇಶಿಕ ಭಾಷೆಗಳನ್ನು ಸರಕಾರ ಬೆಳೆಸಿ ಪೋಷಿಸುವುದು ಶ್ಲಾಘನೀಯ. ಬ್ಯಾರಿ ಭಾಷೆಯ ಬೆಳವಣಿಗೆಗೆ ಮತ್ತಷ್ಟು ಪ್ರೋತ್ಸಾಹದ ಅಗತ್ಯವಿದೆ ಎಂದರು.

ಬ್ಯಾರಿ ಭಾಷಾ ಲಿಪಿ ರಚನಾ, ಸಂಶೋಧನೆ ಮತ್ತು ಅನುಷ್ಠಾನ ಸಮಿತಿಯ ಸದಸ್ಯ ಅಬ್ದುಲ್ ರಹ್ಮಾನ್ ಕುತ್ತೆತ್ತೂರು ಮಾತನಾಡಿ, ಬ್ಯಾರಿ ಭಾಷೆಯ ನೂತನ ಲಿಪಿಯನ್ನು ಜನಮನಕ್ಕೆ ಪರಿಚಯಿಸುವ ಹೊಸ ಪ್ರಯತ್ನ ಇದಾಗಿದೆ. ಕಲಿಕಾ ಮತ್ತು ಭೋದನಾ ಕ್ರಮಗಳನ್ನು ಬಿಡುಗಡೆ ಮಾಡಲಾಗುವುದು ಎಂದರು.

ಲಿಪಿ ಸಂಶೋಧನಾ ಸಮಿತಿ ಸದಸ್ಯ, ಸಹಾಯಕ ಪ್ರಾಧ್ಯಾಪಕ ಹೈದರ್ ಆಲಿ ಮಾತನಾಡಿ ಪ್ರತಿಯೊಬ್ಬರೂ ಸುಲಭವಾಗಿ ಬರೆಯಲು, ಓದಲು ಸಹಾಯಕವಾಗುವ ರೀತಿಯಲ್ಲಿ ಲಿಪಿಯನ್ನು ಸಂಶೋಧಿಸಲಾಗಿದ್ದು, ಈ ಕ್ಯಾಲೆಂಡರ್ ಬಿಡುಗಡೆಯು ಮೊದಲ ಕಲಿಕಾ ವಿಧಾನಕ್ಕೆ ಸಹಕಾರಿಯಾಗುತ್ತದೆ ಎಂದರು.

ಅಕಾಡಮಿಯ ಸದಸ್ಯರಾದ ಶಂಶೀರ್ ಬುಡೋಳಿ, ರೂಪಾಶ್ರೀ ವರ್ಕಾಡಿ ಸಾಮಾಜಿಕ ಕಾರ್ಯಕರ್ತ ಬಶೀರ್ ತಂಡೆಲ್ ಉಪಸ್ಥಿತರಿದ್ದರು.

ಅಕಾಡಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಮಾಜಿ ಸದಸ್ಯ ಹುಸೈನ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News