×
Ad

ಬ್ಯಾರಿ ಭವನಕ್ಕೆ ವಿರೋಧ ಬೇಡ: ಪ್ರಮುಖರ ಮನವಿ

Update: 2020-12-31 17:51 IST

ಮಂಗಳೂರು, ಡಿ.31: ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ತೊಕ್ಕೊಟ್ಟು ಸಮೀಪ ನಿರ್ಮಾಣವಾಗಲಿರುವ ಬ್ಯಾರಿ ಭವನಕ್ಕೆ ಯಾವುದೇ ಬಲವಾದ ಕಾರಣಗಳಿಲ್ಲದೆ ಬರೇ ಗೊಂದಲ ಸೃಷ್ಟಿಸುವ ದುರುದ್ದೇಶದಿಂದ ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಬ್ಯಾರಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಕರಂಬಾರ್ ಮುಹಮ್ಮದ್, ಮಾಜಿ ಸದಸ್ಯರಾದ ಬಶೀರ್ ಬೈಕಂಪಾಡಿ, ಹುಸೈನ್ ಕಾಟಿಪಳ್ಳ ತಿಳಿಸಿದ್ದಾರೆ.

ಅಬ್ಬಕ್ಕ ಭವನದ ಜಾಗಕ್ಕೂ, ಬ್ಯಾರಿ ಭವನದ ಜಾಗಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅಬ್ಬಕ್ಕ ಉತ್ಸವ ಸಮಿತಿಯವರ ಹೇಳಿಕೆಯಿಂದಲೇ ಸ್ಪಷ್ಟವಾಗುತ್ತದೆ. ಅಕ್ಕಪಕ್ಕದಲ್ಲಿ ಎರಡು ಭವನಗಳು ಬೇಡ ಎಂಬುದು ಬಾಲಿಶ ಹೇಳಿಕೆಯಾಗಿದೆ. ಅಬ್ಬಕ್ಕ ಭವನ ಹಾಗೂ ಬ್ಯಾರಿ ಭವನ ಅಕ್ಕಪಕ್ಕದಲ್ಲಿ ನಿರ್ಮಾಣವಾದರೆ ತೊಕ್ಕೊಟ್ಟು ಪ್ರದೇಶದ ವೈಭವವೂ ಹೆಚ್ಚುತ್ತದೆ. ಮಾತ್ರವಲ್ಲ ಅದೊಂದು ಸೌಹಾರ್ದತೆಯ ಕೇಂದ್ರವಾಗಿ ಪ್ರಸಿದ್ದಿಯನ್ನು ಪಡೆಯುತ್ತದೆ. ಅಬ್ಬಕ್ಕ ರಾಣಿ ಸರ್ವಧರ್ಮ ಪ್ರೇಮಿಯಾಗಿದ್ದರು. ಅವರ ಸೈನ್ಯದಲ್ಲಿ ಅನೇಕ ಬ್ಯಾರಿಗಳಿದ್ದರು ಎಂಬುದನ್ನು ಇತಿಹಾಸ ಹೇಳುತ್ತದೆ. ಹೀಗಿರುವಾಗ ಅಬ್ಬಕ್ಕ ರಾಣಿಯ ಹೆಸರಿನಲ್ಲಿ ಒಂದು ಒಳ್ಳೆಯ ಕೆಲಸವನ್ನು ವಿರೋಧಿಸುವುದು ಅಬ್ಬಕ್ಕ ರಾಣಿಯ ಹೆಸರಿಗೆ ಮಾಡುವ ಅಪಚಾರವಾಗಿದೆ. ಅದೂ ಅಲ್ಲದೆ ಬ್ಯಾರಿ ಭವನ ಬ್ಯಾರಿ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿವೃದ್ಧಿಗಾಗಿ ಕೆಲಸ ಮಾಡುವ ಉದ್ದೇಶದಿಂದ ಸರಕಾರದ ವತಿಯಿಂದ ಸ್ಥಾಪಿಸಲಾಗುವ ಭವನವಾಗಿದೆ. ಬ್ಯಾರಿ ಸಾಹಿತ್ಯ ಅಕಾಡಮಿಯಲ್ಲಿ ಸಹೋದರ ಸಮುದಾಯದ ಸದಸ್ಯರು ಕೂಡಾ ಸೇವೆ ಸಲ್ಲಿಸುತ್ತಿದ್ದಾರೆ. ಹಾಗಾಗಿ ಬ್ಯಾರಿ ಭವನ ನಿರ್ಮಾಣ ಕಾರ್ಯದಲ್ಲಿ ರಾಜಕೀಯ ಸಲ್ಲದು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News