×
Ad

ನಾಳೆಯಿಂದ ಶಾಲಾ-ಕಾಲೇಜುಗಳಲ್ಲಿ ಮತ್ತೆ ವಿದ್ಯಾರ್ಥಿಗಳ ಕಲರವ

Update: 2020-12-31 18:02 IST

ಉಡುಪಿ, ಡಿ.31:ಕೊರೋನ ಹರಡುವ ಭೀತಿಯೊಂದಿಗೆ ದೇಶಾದ್ಯಂತ ಹೇರಲಾದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಾಗಿಲು ಮುಚ್ಚಿದ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳು ನಾಳೆಯಿಂದ ಮತ್ತೆ ಬಾಗಿಲು ತೆರೆಯಲಿವೆ. ಮಕ್ಕಳ ಹೆಜ್ಜೆಯ ಸದ್ದು, ಕೇಕೆ, ಕಲರವ ಮತ್ತೆ ಕೇಳಿಬರಲಿದೆ.

ಸುಮಾರು 10 ತಿಂಗಳ ಬಳಿಕ ರಾಜ್ಯ ಸರಕಾರ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತರಗತಿಗಳಿಗೆ ಮರಳಿ ಹಾಜರಾಗಲು ಹಾಗೂ 6ರಿಂದ 9ರವರೆಗಿನ ಮಕ್ಕಳು ‘ವಿದ್ಯಾಗಮ-2’ ಕಾರ್ಯಕ್ರಮಕ್ಕೆ ನಾಳೆಯಿಂದ ಶಾಲೆಗಳಲ್ಲಿ ಹಾಜರಾಗಲು ತನ್ನ ಅನುಮತಿಯನ್ನು ನೀಡಿದೆ.

ಇದಕ್ಕಾಗಿ ಜಿಲ್ಲಾಡಳಿತ ಸಾಕಷ್ಟು ಮುಂಜಾಗ್ರತಾ ಕ್ರಮಗಳು, ನಿರ್ಬಂಧಗಳನ್ನು ವಿಧಿಸಿದ್ದು, ಎಲ್ಲವನ್ನೂ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆಗಳನ್ನು ನೀಡಿದೆ. ಇವುಗಳಲ್ಲಿ ತರಗತಿಗಳಿಗೆ ಹಾಗೂ ವಿದ್ಯಾಗಮಕ್ಕೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳು ಪಾಲಕರ ಅನುಮತಿ ಪತ್ರಗಳನ್ನು ಕಡ್ಡಾಯವಾಗಿ ತರಬೇಕು ಹಾಗೂ ಎಲ್ಲಾ ಶಿಕ್ಷಕರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೊಳಗಾಗಿ ನೆಗೆಟಿವ್ ವರದಿಯನ್ನು ಪಡೆದಿರಬೇಕೆಂಬುದು ಮುಖ್ಯವಾಗಿದೆ.

ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಶಾಲಾ ಕೊಠಡಿಗಳು, ಶಾಲಾ ಆವರಮ ಹಾಗೂ ಶೌಚಾಲಯಗಳ ಸ್ವಚ್ಚತೆಗೆ ಗರಿಷ್ಠ ಆದ್ಯತೆಯನ್ನು ನೀಡಲಾಗಿದೆ. ಮೊದಲ ದಿನವಾದ ನಾಳೆ ಎಲ್ಲರಿಗೂ ಕೋವಿಡ್ ಕುರಿತಂತೆ ಸಂಪೂರ್ಣ ಮಾಹಿತಿ, ಅವುಗಳನ್ನು ತಡೆಗಟ್ಟಲು ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿಗಳನ್ನು ನೀಡಲಾಗುತ್ತದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

6 ಮತ್ತು 7ನೇ ತರಗತಿ ಮಕ್ಕಳಿಗೆ ವಿದ್ಯಾಗಮ ತರಗತಿಗಳು ಪ್ರತಿದಿನ ಬೆಳಗ್ಗೆ 10ರಿಂದ 12:30-1:00ರವರೆಗೆ ನಡೆಯಲಿದೆ. 8 ಮತ್ತು 9ನೇ ತರಗತಿ ಮಕ್ಕಳಿಗೆ ವಿದ್ಯಾಗಮ ಅಪರಾಹ್ನ 2:00ರಿಂದ 4:30ರವರೆಗೆ ಶಾಲಾ ಆವರಣದಲ್ಲಿ ನಡೆಯಲಿದೆ. ಎಸೆಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ತರಗತಿಗಳು ಪ್ರತಿದಿನ 10:00ರಿಂದ 1:00ರವರೆಗೆ ಇರುತ್ತದೆ.

14,791 ದ್ವಿ.ಪಿಯುಸಿ ವಿದ್ಯಾರ್ಥಿಗಳು: ಜಿಲ್ಲೆಯಲ್ಲಿ ಒಟ್ಟು 103 ಪದವಿ ಪೂರ್ವ ಕಾಲೇಜುಗಳಿದ್ದು, ಇವುಗಳಲ್ಲಿ ಒಟ್ಟು 14,799 ವಿದ್ಯಾರ್ಥಿಗಳು ಕಲಿಯುತಿದ್ದಾರೆ. ಇವುಗಳಲ್ಲಿ ಕಲಾ ವಿಭಾಗದಲ್ಲಿ 1,592 ಮಂದಿ, ವಾಣಿಜ್ಯ ವಿಭಾಗದಲ್ಲಿ 7,843 ಮಂದಿ ಹಾಗೂ ವಿಜ್ಞಾನ ವಿಭಾಗದಲ್ಲಿ 5364 ಮಂದಿ ಕಲಿಯುತಿದ್ದಾರೆ. ಜಿಲ್ಲೆಯಲ್ಲಿ 42 ಸರಕಾರಿ, 18 ಅನುದಾನಿತ ಹಾಗೂ 43 ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಿವೆ.
ಎಸೆಸೆಲ್ಸಿ 1056 ತಂಡಗಳಲ್ಲಿ ಕಲಿಕೆ: ಉಡುಪಿ ಜಿಲ್ಲೆಯಲ್ಲಿ ಒಟ್ಟು 290 ಪ್ರೌಢ ಶಾಲೆಗಳಿದ್ದು, ಇಲ್ಲಿ ಒಟ್ಟು 15,829 ಮಂದಿ ವಿದ್ಯಾರ್ಥಿಗಳು 10ನೇ ತರಗತಿಗಳಲ್ಲಿ ಕಲಿಯುತಿದ್ದಾರೆ. ಇವರನ್ನು ಒಟ್ಟು 1056 ತಂಡಗಳನ್ನಾಗಿ (ತಲಾ 10ರಿಂದ 15) ಮಾಡಿ 3054 ಶಿಕ್ಷಕರ ಮೂಲಕ ತರಗತಿಗಳನ್ನು ನಡೆಸಲಾಗುತ್ತದೆ.

ಜಿಲ್ಲೆಯ 106 ಸರಕಾರಿ ಪ್ರೌಢ ಶಾಲೆಗಳಲ್ಲಿ 5948 ವಿದ್ಯಾರ್ಥಿಗಳಿದ್ದು, 956 ಶಿಕ್ಷಕರು 397 ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸಲಿದ್ದಾರೆ. ಜಿಲ್ಲೆಯಲ್ಲಿ 70 ಅನುದಾನಿತ ಪ್ರೌಢ ಶಾಲೆಗಳಿದ್ದು 3242 ವಿದ್ಯಾರ್ಥಿಗಳು ಕಲಿಯುತಿದ್ದಾರೆ. ಇವರನ್ನು 448 ಶಿಕ್ಷಕರು 216 ತಂಡಗಳಲ್ಲಿ ಪಾಠ ಮಾಡಲಿದ್ದಾರೆ. ಅದೇ ರೀತಿ ಇರುವ 114 ಅನುದಾನ ರಹಿತ ಪ್ರೌಢ ಶಾಲೆಗಳಲ್ಲಿ 6639 ವಿದ್ಯಾರ್ಥಿಗಳು ಕಲಿಯುತಿದ್ದು, ಇವರಿಗೆ 1650 ಶಿಕ್ಷಕರು 443 ತಂಡಗಳನ್ನಾಗಿ ಮಾಡಿ ಕಲಿಸಲಿದ್ದಾರೆ.

ಬ್ರಹ್ಮಾವರ ವಲಯದ 63 ಶಾಲೆಗಳಲ್ಲಿ 3624 ವಿದ್ಯಾರ್ಥಿಗಳು 242 ತಂಡಗಳಲ್ಲಿ, ಬೈಂದೂರು ವಲಯದ 37 ಶಾಲೆಗಳ 2424 ವಿದ್ಯಾರ್ಥಿಗಳು 162 ತಂಡಗಳಲ್ಲಿ, ಕಾರ್ಕಳ ವಲಯದ 62 ಶಾಲೆಗಳ 2988 ವಿದ್ಯಾರ್ಥಿಗಳು 199 ತಂಡಗಳಲ್ಲಿ, ಕುಂದಾಪುರ ವಲಯದ 44 ಶಾಲೆಗಳ 2758 ವಿದ್ಯಾರ್ಥಿ ಗಳು 184 ತಂಡಗಳಲ್ಲಿ ಹಾಗೂ ಉಡುಪಿ ವಲಯದ 84 ಶಾಲೆಗಳಲ್ಲಿ ಕಲಿಯು ತ್ತಿರುವ 4035 ವಿದ್ಯಾರ್ಥಿಗಳು 269 ತಂಡಗಳಲ್ಲಿ ಜ.1ರಿಂದ ತರಗತಿಗಳಿಗೆ ಹಾಜರಾಗಲಿದ್ದಾರೆ.

ಒಟ್ಟಾರೆಯಾಗಿ ಜಿಲ್ಲೆಯ ಒಟ್ಟು 290 ಪ್ರೌಢ ಶಾಲೆಗಳಲ್ಲಿ 10ನೇ ತರಗತಿ ಯಲ್ಲಿ ಕಲಿಯುತ್ತಿರುವ 15,829 ಮಕ್ಕಳು ಒಟ್ಟು 1056 ತಂಡಗಳಲ್ಲಿ 3054 ಶಿಕ್ಷಕರ ಮೂಲಕ ಪಾಠಗಳನ್ನು ಕಲಿಯಲಿದ್ದಾರೆ.

ವಿದ್ಯಾಗಮ-2ಕ್ಕೆ 63,805 ಮಕ್ಕಳು
ಜಿಲ್ಲೆಯಲ್ಲಿ ಒಟ್ಟು 870 ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ 6ರಿಂದ 9ನೇ ತರಗತಿಗಳಲ್ಲಿ ಕಲಿಯುತ್ತಿರುವ ಒಟ್ಟು 63,805 ವಿದ್ಯಾರ್ಥಿಗಳು ನಾಳೆಯಿಂದ ಪ್ರಾರಂಭಗೊಳ್ಳುವ ವಿದ್ಯಾಗಮ-2ರಲ್ಲಿ ಭಾಗವಹಿಸುವ ಅರ್ಹತೆ ಪಡೆದಿದ್ದಾರೆ. ಇವರಿಗೆ ಜಿಲ್ಲೆಯ ಒಟ್ಟು 6057 ಶಿಕ್ಷಕರು 4254 ತಂಡಗಳಲ್ಲಿ ತರಗತಿಗಳನ್ನು ನಡೆಸಿಕೊಡಲಿದ್ದಾರೆ. ಇಲ್ಲಿ ಮಕ್ಕಳು ಭಾಗವಹಿಸುವುದು ಕಡ್ಡಾಯವಲ್ಲ, ಐಚ್ಛಿಕ.

ಜಿಲ್ಲೆಯಲ್ಲಿರುವ 467 ಸರಕಾರಿ ಶಾಲೆಗಳಲ್ಲಿ ಒಟ್ಟು 23,901 ವಿದ್ಯಾರ್ಥಿ ಗಳಿದ್ದು, ಇವರಿಗೆ 2589 ಮಂದಿ ಶಿಕ್ಷಕರು 1593 ತಂಡಗಳಲ್ಲಿ ಕಲಿಸಲಿದ್ದಾರೆ. 228 ಅನುದಾನಿತ ಶಾಲೆಗಳಲ್ಲಿ 11,200 ಮಕ್ಕಳಿದ್ದು, ಇವರಿಗೆ 783 ಶಿಕ್ಷಕರು 747 ತಂಡಗಳಲ್ಲಿ ವಿದ್ಯಾಗಮ ತರಗತಿ ನಡೆಸಲಿದ್ದಾರೆ. ಅದೇ ರೀತಿ ಜಿಲ್ಲೆಯ 175 ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ 6ರಿಂದ 9ನೇ ತರಗತಿಗಳಲ್ಲಿ ಒಟ್ಟು 28,704 ವಿದ್ಯಾರ್ಥಿಗಳಿದ್ದು, ಇವರಿಗೆ 2685 ಶಿಕ್ಷಕರು ಇವರಿಗೆ 1914 ತಂಡಗಳಲ್ಲಿ ಪ್ರತಿದಿನದ ತರಗತಿಗಳನ್ನು ನಡೆಸಲಿದ್ದಾರೆ ಎಂದು ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಮಾಹಿತಿಯನ್ನು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News