ಉಡುಪಿ: 17 ವರ್ಷ ಪ್ರಾಯದ ಬಾಲಕಿಯ ವಿವಾಹವನ್ನು ತಡೆದ ಅಧಿಕಾರಿಗಳು
ಉಡುಪಿ, ಡಿ.31: 17ರ ಹರೆಯ ಬಾಲಕಿಗೆ 28 ವರ್ಷ ಪ್ರಾಯದ ಹುಡುಗನೊಂದಿಗೆ ನಡೆಯಲು ಸಿದ್ಧವಾಗಿದ್ದ ವಿವಾಹವನ್ನು ಸರಕಾರಿ ಅಧಿಕಾರಿಗಳ ಸಕಾಲಿಕ ಮಧ್ಯಪ್ರವೇಶದಿಂದ ಅಂತಿಮಕ್ಷಣದಲ್ಲಿ ನಿಂತ ಘಟನೆಯೊಂದು ಇಂದು ಕುಂದಾಪುರ ತಾಲೂಕು ತಲ್ಲೂರು ಗುಡ್ಡೆಯಂಗಡಿಯಿಂದ ವರದಿಯಾಗಿದೆ.
ತಲ್ಲೂರು ಗುಡ್ಡೆಯಂಗಡಿಯ ತ್ರಾಸಿ ಮಹಾಗಣಪತಿ ಸಭಾಭವನದಲ್ಲಿ ಈ ಮದುವೆಗೆ ಎಲ್ಲಾ ಸಿದ್ಧತೆಗಳು ನಡೆದಿದ್ದವು. ಮದುವೆ ಹಾಲ್‌ನಲ್ಲಿ 200ಕ್ಕೂ ಅಧಿಕ ಮಂದಿ ಮಧುಮಕ್ಕಳನ್ನು ಹರಸಲು ಸೇರಿದ್ದರು.
ಕಾನೂನಿನ ಮೂಲಕ ನಿಷೇಧಿತ ಬಾಲ್ಯವಿವಾಹ ನಡೆಯುವ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು, ಗಂಗೊಳ್ಳಿ ಪೊಲೀಸರು ಹಾಗೂ ತ್ರಾಸಿ ಗ್ರಾಪಂನ ಅದಿಕಾರಿಗಳೊಂದಿಗೆ ತಕ್ಷಣ ತ್ರಾಸಿ ಮಹಾಗಣಪತಿ ಸಭಾಭವನಕ್ಕೆ ಧಾವಿಸಿಬಂದು ಸಂಭವನೀಯ ಬಾಲ್ಯವಿವಾಹವನ್ನು ತಡೆಯುವಲ್ಲಿ ಯಶಸ್ವಿಯಾದರು.
ವಧುವರರ ಎರಡೂ ಕಡೆಯವರಿಗೆ ಬಾಲ್ಯವಿವಾಹ ನಿಷೇಧ ಮತ್ತು ತಡೆಗಟ್ಟುವ ಕಾಯ್ದೆಯ ಕುರಿತು ಅರಿವು ಮೂಡಿಸಿ, ಉಲ್ಲಂಘಿಸಿದರೆ ಇರುವ ಶಿಕ್ಷೆಯ ಕುರಿತು ಮನವರಿಕೆ ಮಾಡಿಕೊಟ್ಟರು.
ಗಂಡು ಮತ್ತು ಹೆಣ್ಣಿನ ಕುಟುಂಬಿಕರಿಂದ, ಮದುವೆ ಹಾಲ್‌ನ ಮಾಲಕರು ಮತ್ತು ಪುರೋಹಿತರಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಯಿತು. ಅದಾಗಲೇ ಮದುವೆಗೆ ಬಂದು ಸೇರಿದವರೆನ್ನೆಲ್ಲಾ ವಾಪಸು ಮನೆಗೆ ಕಳುಹಿಸಿ ಕೊಡಲಾಯಿತು.
ಕಾರ್ಯಾಚರಣೆಯಲ್ಲಿ ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಾಕಿರಿ ಪ್ರಭಾಕರ ಆಚಾರ್ಯ, ಕುಂದಾಪುರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೋಭಾ ಶೆಟ್ಟಿ, ಕುಂದಾಪುರದ ಅಂಗನವಾಡಿ ಮೇಲ್ವಿಚಾರಕಿ ಪ್ರಭಾವತಿ, ಸುರಕ್ಷಾ ಸಮಾಜ ಕಾರ್ಯಕರ್ತೆ, ರಕ್ಷಣಾಧಿಕಾರಿ ಕಪಿಲ,ಸಹಾಯಕ ಉಪನಿರೀಕ್ಷಕ ರಘುರಾಮ, ಗಂಗೊಳ್ಳಿ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಮೋಹನ್ ಪೂಜಾರಿ, ಮಹಿಳಾ ಪೊಲೀಸ್ ರೂಪ, ಎಸ್‌ಪಿಡಿಓ ಶೋಭಾ, ತ್ರಾಸಿ ಗ್ರಾಪಂನ ಶಿವಾನಂದ, ಸಂದೀಪ್, ಅಂಗನವಾಡಿ ಕಾರ್ಯಕರ್ತೆ ಜಯಮಾಲಾ ಗುಡ್ಡೆಯಂಗಡಿ ಭಾಗವಹಿಸಿದ್ದರು.