ಗ್ರಾಹಕರಿಗೆ ಸಿಹಿಸುದ್ದಿ ನೀಡಿದ ಜಿಯೋ

Update: 2020-12-31 14:38 GMT

ಹೊಸದಿಲ್ಲಿ,ಡಿ.31: ತನ್ನ ನೆಟ್‌ವರ್ಕ್‌ನಿಂದ ಇತರ ನೆಟ್‌ವರ್ಕ್ ಗಳಿಗೆ ಉಚಿತ ಕರೆಗಳ ಸೌಲಭ್ಯ ಜ.1ರಿಂದ ಪುನರಾರಂಭಗೊಳ್ಳಲಿದೆ ಎಂದು ರಿಲಯನ್ಸ್ ಜಿಯೊ ಗುರುವಾರ ಪ್ರಕಟಿಸಿದೆ.

ಜಿಯೊ ಕಳೆದ ವರ್ಷದಿಂದ ಇತರ ನೆಟ್‌ವರ್ಕ್‌ಗಳಿಗೆ ಧ್ವನಿಕರೆಗಳಿಗೆ ತನ್ನ ಚಂದಾದಾರರಿಗೆ ಪ್ರತಿ ನಿಮಿಷಕ್ಕೆ ಆರು ಪೈಸೆ ಶುಲ್ಕ ವಿಧಿಸಲು ಆರಂಭಿಸಿತ್ತು. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್)ವು ಜ.1ರಿಂದ ದೇಶಾದ್ಯಂತ ‘ಬಿಲ್ ಆ್ಯಂಡ್ ಕೀಪ್’ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದ್ದು,ಇದು ಎಲ್ಲ ದೇಶಿಯ ಧ್ವನಿಕರೆಗಳಿಗೆ ಅಂತರ್‌ಸಂಪರ್ಕ ಬಳಕೆ ಶುಲ್ಕ (ಐಯುಸಿ) ವಿಧಿಸುವಿಕೆಯನ್ನು ಅಂತ್ಯಗೊಳಿಸಲಿದೆ. ಈ ಹಿನ್ನೆಲೆಯಲ್ಲಿ ಜಿಯೋದ ಈ ನಿರ್ಧಾರ ಹೊರಬಿದ್ದಿದೆ.

ಇದರೊಂದಿಗೆ ಇತರ ದೂರಸಂಪರ್ಕ ಕಂಪನಿಗಳ ಚಂದಾದಾರರಂತೆ ಜಿಯೊ ಚಂದಾದಾರರೂ ದೇಶಾದ್ಯಂತ ಯಾವುದೇ ನೆಟ್‌ವರ್ಕ್‌ಗೆ ಉಚಿತ ಕರೆಗಳನ್ನು ಮಾಡಬಹುದಾಗಿದೆ. ಜಿಯೊ ಸ್ಪರ್ಧಾತ್ಮಕ ರೀಚಾರ್ಜ್ ಪ್ಲಾನ್‌ಗಳನ್ನು ತನ್ನ ಚಂದಾದಾರರಿಗೆ ನೀಡಲು ಸಮರ್ಥವಾಗಿರುವುದರಿಂದ ಅದರ ಈ ಉಚಿತ ಕರೆಗಳ ನಿರ್ಧಾರವು ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಸೇರಿದಂತೆ ಇತರ ಮೊಬೈಲ್ ನೆಟ್‌ವರ್ಕ್ ಕಂಪನಿಗಳಿಗೆ ಕಠಿಣ ಪೈಪೋಟಿಯನ್ನು ಒಡ್ಡಲಿದೆ. ಇತರ ನೆಟ್‌ವರ್ಕ್‌ಗಳಿಗೆ ಐಯುಸಿ ರೂಪದಲ್ಲಿ ಜಿಯೊ ಪಾವತಿಸುತ್ತಿದ್ದ ಹಣವೂ ಇನ್ನು ಮುಂದೆ ದೊರೆಯುವುದಿಲ್ಲ. ಕಳೆದ ಮೂರು ವರ್ಷಗಳಲ್ಲಿ ತಾನು 13,000 ಕೋ.ರೂ.ಗಳನ್ನು ಐಯುಸಿ ರೂಪದಲ್ಲಿ ಇತರ ಕಂಪನಿಗಳಿಗೆ ಪಾವತಿಸಿರುವುದಾಗಿ ಜಿಯೊ ತಿಳಿಸಿದೆ.

2019 ಸೆಪ್ಟೆಂಬರ್‌ನಲ್ಲಿ ಟ್ರಾಯ್ ‘ಬಿಲ್ ಆ್ಯಂಡ್ ಕೀಪ್’ವ್ಯವಸ್ಥೆಯನ್ನು ಜಾರಿಗೊಳಿಸುವ ಗಡುವನ್ನು 2020,ಜ.1ರಾಚೆಗೆ ಮುಂದೂಡಿತ್ತು. ಈ ವಿಸ್ತರಣೆಯು ಜಿಯೊ ಕಳೆದ ವರ್ಷದ ಅಕ್ಟೋಬರ್‌ನಿಂದ ತನ್ನ ನೆಟ್‌ವರ್ಕ್‌ನಿಂದ ಇತರ ನೆಟ್‌ವರ್ಕ್‌ಗಳಿಗೆ ಕರೆಗಳ ಮೇಲೆ ಶುಲ್ಕ ವಿಧಿಸಲು ಅವಕಾಶ ಕಲ್ಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News