ಉಡುಪಿ ಗ್ರಾಪಂ ಚುನಾವಣೆ: ಜಯಭೇರಿ ಬಾರಿಸಿದ ಬಿಜೆಪಿ ಬೆಂಬಲಿತರು

Update: 2020-12-31 15:29 GMT

ಉಡುಪಿ, ಡಿ.31: ಡಿ.22 ಮತ್ತು 27ರಂದು ಮತದಾನ ನಡೆದು 30ರ ತಡರಾತ್ರಿ ಮತ ಎಣಿಕೆ ಪೂರ್ಣಗೊಂಡ ಉಡುಪಿ ಜಿಲ್ಲೆಯ 153 ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಬೆಂಬಲಿತರು ಜಯಭೇರಿ ಬಾರಿಸಿದ್ದು, ಜಿಲ್ಲೆಯ 115 ಗ್ರಾಪಂಗಳಲ್ಲಿ ಸ್ಪಷ್ಟ ಬಹುಮತ ಪಡೆದಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಜಿಲ್ಲೆಯ ಒಟ್ಟು 153 ಗ್ರಾಪಂಗಳ 2365 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಇವುಗಳಲ್ಲಿ ಕೋಡಿ ಗ್ರಾಪಂನ 12 ಸ್ಥಾನಗಳಿಗೆ ಮತದಾನ ನಡೆದಿರಲಿಲ್ಲ. ಹೀಗಾಗಿ 2353 ಸ್ಥಾನಗಳಿಗೆ ಮಾತ್ರ ಮತದಾನ ನಡೆದಿದ್ದು, 128 ಸ್ಥಾನಗಳಿಗೆ ಅಭ್ಯರ್ಥಿಳು ಅವಿರೋಧವಾಗಿ ಆಯ್ಕೆಯಾಗಿದ್ದರು.

ಮತದಾನಕ್ಕೆ ಮತಪತ್ರಗಳನ್ನು ಬಳಸಿದ್ದರಿಂದ ಅವುಗಳ ಎಣಿಕೆ ತೀರಾ ನಿಧಾನಗತಿಯಲ್ಲಿ ಸಾಗಿ ಮಧ್ಯರಾತ್ರಿ ಕಳೆದ ಬಳಿಕಷ್ಟೇ ಪೂರ್ಣ ಫಲಿತಾಂಶ ಬರಲು ಸಾಧ್ಯವಾಗಿತ್ತು. ಇಂದು ಬೆಳಗ್ಗೆಯಷ್ಟೇ ಅಧಿಕೃತವಾಗಿ ಫಲಿತಾಂಶ ಪ್ರಕಟ ಗೊಂಡಿತ್ತು.

ಗ್ರಾಪಂ ಚುನಾವಣೆ ಪಕ್ಷ ರಹಿತವಾಗಿ ನಡೆಯುವುದರಿಂದ ಇದೀಗ ಪಕ್ಷಗಳ ನಡುವೆ ವಿಜಯಿ ಅಭ್ಯರ್ಥಿಗಳ ಮೂಲ ಪಕ್ಷಗಳ ಲೆಕ್ಕಾಚಾರ ಬಿರುಸಿನಿಂದ ನಡೆಯುತ್ತಿದೆ. ನಿರೀಕ್ಷೆಯಂತೆ ಬಿಜೆಪಿ ಜಿಲ್ಲೆಯಲ್ಲಿ ಅತ್ಯಧಿಕ ಸ್ಥಾನಗಳನ್ನು ಪಡೆಯುವ ಮೂಲಕ 100ಕ್ಕೂ ಅಧಿಕ ಗ್ರಾಪಂಗಳಲ್ಲಿ ಸ್ಪಷ್ಟ ಬಹುಮತವನ್ನು ಸಂಪಾದಿಸಿದೆ.

ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಸುರೇಶ್ ನಾಯಕ್ ಅವರು ಅಧಿಕೃತವಾಗಿ ಪತ್ರಿಕೆಗಳಿಗೆ ಬಿಡುಗಡೆಗೊಳಿಸಿದ ಪಕ್ಷದ ಬಲಾಬಲದಂತೆ ಜಿಲ್ಲೆಯ 153 ಗ್ರಾಪಂಗಳಲ್ಲಿ ಮತಎಣಿಕೆ ನಡೆದಿರುವ 2351 ಸ್ಥಾನಗಳಲ್ಲಿ 1485 ಸ್ಥಾನಗಳನ್ನು ಬಿಜೆಪಿ ಬೆಂಬಲಿತರೇ ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ 115 ಗ್ರಾಪಂಗಳಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಆಡಳಿತ ಡೆಸಲಿದೆ ಎಂದೂ ಅವರು ತಿಳಿಸಿದ್ದಾರೆ.

ಕಾಂಗ್ರೆಸ್‌ನ 800 ಮಂದಿಗೆ ಗೆಲುವು: ಮತ್ತೊಂದು ಕಡೆ ಕಾಂಗ್ರೆಸ್ ಪಕ್ಷವೂ ತನ್ನ ಬೆಂಬಲಿತ 800ಕ್ಕೂ ಅಧಿಕ ಅಭ್ಯರ್ಥಿಗಳು ಗೆಲುವನ್ನು ಪಡೆದಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕಕುವಾರ್ ಕೊಡವೂರು ಹೇಳಿಕೊಂಡಿದ್ದಾರೆ.
ಪಕ್ಷದಿಂದ ಬಂಡಾಯವೆದ್ದು ನಿಂತ, ಹೊಂದಾಣಿಕೆಯೊಂದಿಗೆ ಸ್ಪರ್ಧಿಸಿದ ಮಿತ್ರ ಪಕ್ಷ (ಸಿಪಿಎಂ ಇತ್ಯಾದಿ)ಗಳ ಅಭ್ಯರ್ಥಿಗಳ ಗೆಲುವನ್ನು ಲೆಕ್ಕಕ್ಕೆ ತೆಗೆದುಕೊಂಡರೆ 820ರಿಂದ 830 ಮಂದಿ ಗೆಲುವು ಸಾಧಿಸಿದ್ದಾರೆ ಎಂದವರು ನುಡಿದರು. ಕಾಂಗ್ರೆಸ್ ಪಕ್ಷ 55 ಗ್ರಾಪಂಗಳಲ್ಲಿ ಸ್ಪಷ್ಟ ಬಹುಮತ ಹೊಂದಿದೆ ಎಂದೂ ಅವರು ತಿಳಿಸಿದರು.

ಸುರೇಶ್ ನಾಯಕ್ ಅವರು ನೀಡಿದ ಪಟ್ಟಿಯಂತೆ ಬಿಜೆಪಿ ಬೈಂದೂರು ಮಂಡಲ ವ್ಯಾಪ್ತಿಯಲ್ಲಿರುವ 38 ಗ್ರಾಪಂನ 552 ಸ್ಥಾನಗಳಲ್ಲಿ 325ನ್ನು ಗೆದ್ದು 26 ಗ್ರಾಪಂಗಳಲ್ಲಿ ಬಹುಮತ ಪಡೆದಿದೆ. ಕುಂದಾಪುರ ಮಂಡಲದ 36 ಗ್ರಾಪಂಗಳಲ್ಲಿರುವ 480 ಸದಸ್ಯ ಸ್ಥಾನಗಳಲ್ಲಿ 307ನ್ನು ಗೆದ್ದು 27 ಗ್ರಾಪಂಗಳನ್ನು ಕೈವಶ ಮಾಡಿಕೊಂಡಿದೆ.

ಉಡುಪಿ ಗ್ರಾಮಾಂತರ (ಬ್ರಹ್ಮಾವರ)ದಲ್ಲಿರುವ 15 ಗ್ರಾಪಂಗಳ 250 ಸದಸ್ಯ ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು 170ರಲ್ಲಿ ಗೆಲುವು ಸಾಧಿಸಿದ್ದು, 12ಗ್ರಾಪಂಗಳಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲಿದೆ. ಉಡುಪಿ ನಗರದ ನಾಲ್ಕು ಗ್ರಾಪಂಗಳ ಪೈಕಿ ಮೂರು ಬಿಜೆಪಿ ವಶವಾಗಿದ್ದು ಇಲ್ಲಿನ 77 ಸ್ಥಾನಗಳಲ್ಲಿ 47 ಬಿಜೆಪಿ ಪಕ್ಷದ ಪರವಾಗಿವೆ.

ಇನ್ನು ಕಾಪು ಮಂಡಲ ವ್ಯಾಪ್ತಿಯ 26 ಗ್ರಾಪಂಗಳಲ್ಲಿರುವ 500 ಸದಸ್ಯ ಸ್ಥಾನಗಳಲ್ಲಿ 274ರಲ್ಲಿ ಬಿಜೆಪಿ ಬೆಂಬಲಿತರೇ ಜಯಗಳಿಸಿದ್ದಾರೆ. ಇಲ್ಲೂ 17 ಗ್ರಾಪಂಗಳು ಬಿಜೆಪಿ ಕೈವಶವಾಗಿವೆ. ಕೊನೆಯದಾಗಿ ಕಾರ್ಕಳ ಮಂಡಲ ವ್ಯಾಪ್ತಿಯಲ್ಲಿ 34 ಗ್ರಾಪಂಗಳು ಇದ್ದು, ಇವುಗಳಲ್ಲಿ 30 ಗ್ರಾಪಂಗಳಲ್ಲಿ ಪಕ್ಷದ ಬೆಂಬಲಿಗರೇ ಬಹುಮತದೊಂದಿಗೆ ಮೇಲುಗೈ ಸಾಧಿಸಿದ್ದಾರೆ. ಇಲ್ಲಿನ 492 ಸ್ಥಾನಗಳ ಪೈಕಿ 362ರಲ್ಲಿ ಬಿಜೆಪಿ ಬೆಂಬಲಿಗರು ಗೆದ್ದುಬಂದಿದ್ದಾರೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News