ತೆರೆಮರೆಯ ಒಂದಷ್ಟು ಇತಿಹಾಸ ಮತ್ತು ವರ್ತಮಾನ

Update: 2023-10-30 15:55 GMT

ಭಾಗ - 1

ಮಳೆ, ಗಾಳಿ, ಶೀತ, ಜ್ವರ ಇತ್ಯಾದಿ ಎಲ್ಲದರ ಹಿಂದೆ ರಾಜಕೀಯಕ್ಕೆ ಏನಾದರೊಂದು ಪಾತ್ರ ಇದ್ದೇ ಇರುತ್ತದೆ. ಮಿಲಿಟರಿ ಕಾರ್ಯಾಚರಣೆಗಳ ಹಿಂದಂತೂ ಅಂತರ್‌ರಾಷ್ಟ್ರೀಯ ಭದ್ರತಾ ಸನ್ನಿವೇಶಗಳಿಗಿಂತ ಆಂತರಿಕ ರಾಜಕೀಯ ಸನ್ನಿವೇಶಗಳಿಗೆ ಹೆಚ್ಚಿನ ಪಾತ್ರ ಇರುತ್ತದೆ. ಈ ಹಿನ್ನೆಲೆಯಲ್ಲಿ ನಾವು ಫೆಲೆಸ್ತೀನ್ ಮತ್ತು ಇಸ್ರೇಲ್‌ಗಳ ನಡುವೆ ಸದ್ಯ ಏರ್ಪಟ್ಟಿರುವ ಘರ್ಷಣೆಯನ್ನು ಚರ್ಚಿಸುವ ಮುನ್ನ ಇಸ್ರೇಲ್‌ನ ವರ್ತಮಾನ ರಾಜಕೀಯ ಸನ್ನಿವೇಶದ ಮೇಲೊಮ್ಮೆ ಕಣ್ಣೋಡಿಸುವುದು ಉಚಿತವೆನಿಸುತ್ತದೆ. ಇಸ್ರೇಲ್ ಸರಕಾರ ಬಹುಕಾಲದಿಂದ ಆಂತರಿಕವಾಗಿ ತೀವ್ರ ಸ್ವರೂಪದ ರಾಜಕೀಯದ ಅಸ್ಥಿರತೆ ಮತ್ತು ಬಿಕ್ಕಟ್ಟನ್ನು ಎದುರಿಸುತ್ತಿದೆ. ನಮ್ಮ ಬೆಂಗಳೂರು ಮಹಾನಗರದ ಜನಸಂಖ್ಯೆ 1.27 ಕೋಟಿಯಷ್ಟಿದ್ದರೆ ಇಸ್ರೇಲ್ ದೇಶದ ಒಟ್ಟು ಜನಸಂಖ್ಯೆ 90.5 ಲಕ್ಷ ಮಾತ್ರ! ತನ್ನನ್ನು ಯಹೂದಿ ಪ್ರಜಾಸತ್ತಾತ್ಮಕ ದೇಶ ಎಂದು ಕರೆದುಕೊಳ್ಳುವ ಈ ದೇಶದ ಮತದಾರರು ರಾಜಕೀಯವಾಗಿ ಪ್ರಬುದ್ಧರಾಗಿದ್ದರೂ ತುಂಬಾ ವಿಚ್ಛಿದ್ರರಾಗಿದ್ದಾರೆ. ಅಲ್ಲಿ 2019 ಎಪ್ರಿಲ್, 2019 ಸೆಪ್ಟಂಬರ್, 2020 ಮಾರ್ಚ್ ಮತ್ತು 2021 ಮಾರ್ಚ್ - ಹೀಗೆ ಕಳೆದ ಎರಡೇ ವರ್ಷಗಳಲ್ಲಿ ನಾಲ್ಕು ಮಹಾ ಚುನಾವಣೆಗಳು ನಡೆದಿದ್ದು, ಮೂರು ಬಾರಿ ಸಂಸತ್ತು ವಿಸರ್ಜಿತವಾಗಿದೆ. ಒಂದು ಸ್ಥಿರ ಸರಕಾರವನ್ನು ರಚಿಸಲು ಅಲ್ಲಿ ಯಾರಿಗೂ ಸಾಧ್ಯವಾಗಿಲ್ಲ. 120 ಸದಸ್ಯರಿರುವ ಅಲ್ಲಿನ ಸಂಸತ್ತು ನೆಸ್ಸೆಟ್ (Knesset) ಗೆ ಈ ವರ್ಷ ಮಾರ್ಚ್ ತಿಂಗಳಲ್ಲಷ್ಟೇ ಮಹಾ ಚುನಾವಣೆ ನಡೆದಿತ್ತು. ಆದರೆ ಓಟುಗಳು 13 ವಿಭಿನ್ನ ಪಕ್ಷಗಳ ನಡುವೆ ಹಂಚಿಹೋಗಿದ್ದರಿಂದ ಯಾರಿಗೂ ಸ್ಪಷ್ಟ ಬಹುಮತ ಸಿಗಲಿಲ್ಲ. ಇಸ್ರೇಲ್ ನಲ್ಲಿ ಸದ್ಯ ಇರುವ ನಾಯಕರ ಪೈಕಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅತ್ಯಂತ ಬಲಿಷ್ಠರೆನ್ನಬಹುದು. ಆದರೆ ಕಳೆದ ಚುನಾವಣೆಯಲ್ಲಿಅವರ ಶಕ್ತಿಶಾಲಿ ಲಿಕುಡ್ ಪಕ್ಷಕ್ಕೆ ಕೇವಲ 24ಶೇ. ಮತಗಳು ಮತ್ತು 25ಶೇ. ಸೀಟುಗಳು ಮಾತ್ರ ದೊರೆತವು. ಅವರಿಗೆ ಮಿತ್ರಪಕ್ಷಗಳ ಜೊತೆ ಸೇರಿ ಬಹುಮತ ಸಾಬೀತು ಪಡಿಸಲು ನೀಡಲಾಗಿದ್ದ 28 ದಿನಗಳ ವಿಶೇಷ ಗಡುವು ಈಗಾಗಲೇ ಮುಗಿದಿದ್ದು, ಅವರೀಗ ಮತ್ತೆ ಕಾಲಾವಕಾಶಕ್ಕಾಗಿ ಅಂಗಲಾಚುತ್ತಿದ್ದಾರೆ. ಒಂದು ಕಾಲದಲ್ಲಿ ಜನಪ್ರಿಯರಾಗಿದ್ದ ನೆತನ್ಯಾಹು ಅವರ ಮೇಲೆ ಗಂಭೀರವಾದ ಭ್ರಷ್ಟಾಚಾರ ಹಗರಣಗಳ ಆರೋಪಗಳಿದ್ದು, ಅವರನ್ನು ವಿರೋಧಿಸಿ ಇಸ್ರೇಲ್‌ನ ಬೀದಿಗಳಲ್ಲಿ ತಿಂಗಳುಗಟ್ಟಲೆ ಉಗ್ರ ಮತಪ್ರದರ್ಶನಗಳು ನಡೆದಿವೆ. ಇಸ್ರೇಲ್‌ನ ವರ್ತಮಾನ ರಾಜಕೀಯ ಅಸ್ಥಿರತೆಯ ದುಸ್ಥಿತಿ ನೋಡಿದರೆ ಅಲ್ಲಿ ಶೀಘ್ರವೇ ಐದನೇ ಮಹಾಚುನಾವಣೆ ಅನಿವಾರ್ಯವಾಗಿ ಬಿಡುತ್ತದೆಂಬುದು ಬಹುತೇಕ ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ, ಕಳೆದ ಕೆಲವು ದಿನಗಳಲ್ಲಿ ಅಲ್ಲಿನ ಸರಕಾರವು ಬಡ ಫೆಲೆಸ್ತೀನಿಗಳ ಮೇಲೆ ಬಾಂಬ್‌ಗಳ ಮಳೆ ಸುರಿಸುವ ಮೂಲಕ ಮೊೆಯುತ್ತಿರುವ ಸಾಹಸವೆಲ್ಲ ಕೇವಲ ನಮ್ಮ ಸರ್ಜಿಕಲ್ ಸ್ಟ್ರೈಕ್ ಥರದ, ಜನಮರುಳು ಕವಾಯತ್ತಾಗಿರಬಹುದೇ ಎಂದು ಹಲವು ವೀಕ್ಷಕರು ದಟ್ಟ ಸಂಶಯ ಪ್ರಕಟಿಸಿದ್ದಾರೆ.

► ಝಿಯೋನಿಸ್ಟ್ ಆಂದೋಲನ ಮತ್ತು ಪ್ರತ್ಯೇಕ ಯಹೂದಿ ದೇಶದ ಕನಸು

ಇಸ್ರೇಲ್ ಎಂಬ ‘ಯಹೂದಿಗಳದ್ದೇ ದೇಶ’ದ ಕಲ್ಪನೆಗೆ ಜನ್ಮ ನೀಡಿದ್ದು 19ನೇ ಶತಮಾನದ ಉತ್ತರಾರ್ಧದಲ್ಲಿ ಪೂರ್ವ ಯುರೋಪಿನಲ್ಲಿ ತಲೆ ಎತ್ತಿದ ‘ಝಿಯೋನಿಸ್ಟ್’ ಆಂದೋಲನ. ‘ಝಿಯೋನ್’ ಎಂಬುದು ಪ್ರಾಚೀನ ಜೆರುಸಲೇಮ್ ಅಥವಾ ಎರುಶಲೇಮ್ ನಗರದಲ್ಲಿದ್ದ ಒಂದು ಬೆಟ್ಟದ ಹೆಸರು. ನಿಜವಾಗಿ ಈ ಆಂದೋಲನವು ಆ ಕಾಲದ ಯುರೋಪಿಯನ್ ದೇಶಗಳಲ್ಲಿ ಮತ್ತು ಅದರಲ್ಲೂ ವಿಶೇಷವಾಗಿ ಮಧ್ಯ ಹಾಗೂ ಪೂರ್ವ ಯೂರೋಪಿನ ದೇಶಗಳಲ್ಲಿ ಯಹೂದಿಗಳ ವಿರುದ್ಧ ವ್ಯಾಪಕ ಪ್ರಮಾಣದಲ್ಲಿ ಕಂಡು ಬಂದಿದ್ದ ತಾತ್ಸಾರ, ಸಂಶಯ, ಹಿಂಸೆ ಮತ್ತು ಹತ್ಯಾಕಾಂಡಗಳಿಗೆ ಪ್ರತಿಕ್ರಿಯೆಯಾಗಿ ಹುಟ್ಟಿಕೊಂಡಿತ್ತು. ಮೊದಲು ಯಹೂದಿಗಳು ಇದ್ದಲ್ಲೆಲ್ಲಾ ಹಲವು ಸಣ್ಣ ಪ್ರತಿರೋಧಕ ಗುಂಪುಗಳ ರೂಪದಲ್ಲಿ ತಲೆ ಎತ್ತಿದ ಈ ಪ್ರಕ್ರಿಯೆ ಕ್ರಮೇಣ ಇಂತಹ ಗುಂಪುಗಳ ವಿಲೀನದೊಂದಿಗೆ ಒಂದು ಬಲಿಷ್ಠ ಆಂದೋಲನ ರೂಪ ಪಡೆದುಕೊಂಡಿತು. ಹಲವು ಯಹೂದಿ ಮೇಧಾವಿಗಳು ಈ ಆಂದೋಲನಕ್ಕೆ ತಮ್ಮದೇ ಆದ ವೈಚಾರಿಕ ಕೊಡುಗೆಗಳನ್ನು ನೀಡಿದ್ದರು. ಜಾಗತಿಕ ಯಹೂದಿ ಸಮುದಾಯದಲ್ಲಿ ಜಾಗೃತಿ, ಆತ್ಮವಿಶ್ವಾಸ ಮತ್ತು ಹೊಸ ಚೈತನ್ಯವನ್ನು ಬೆಳೆಸಬೇಕೆಂಬುದು ಅದರ ಘೋಷಿತ ಧ್ಯೇಯವಾಗಿತ್ತು. ಅದರ ಭಾಗವಾಗಿ ಯಹೂದಿ ಇತಿಹಾಸದ ವೈಭವವನ್ನು ನೆನಪಿಸುವ, ಹಿಬ್ರೂ ಭಾಷೆ ಮತ್ತು ಸಾಹಿತ್ಯಕ್ಕೆ ಪುನಶ್ಚೇತನ ನೀಡುವ ಹಾಗೂ ಕಲೆ, ಸಾಹಿತ್ಯ, ಶಿಕ್ಷಣ, ಕೃಷಿ, ವ್ಯವಸಾಯ, ಕಾರ್ಮಿಕ ರಂಗ ಇತ್ಯಾದಿ ವಿಭಿನ್ನ ಕ್ಷೇತ್ರಗಳಲ್ಲಿ ಯಹೂದಿಗಳನ್ನು ಸಂಘಟಿಸಿ ಸಕ್ರಿಯಗೊಳಿಸುವ ಚಟುವಟಿಕೆಗಳು ಆರಂಭವಾದವು. ಜೊತೆಗೇ ‘ಯಹೂದಿಗಳದ್ದೇ ದೇಶ’ ಎಂಬ ಕನಸಿನ ಮಾರಾಟವೂ ಆರಂಭವಾಯಿತು.

ಪ್ರಸ್ತುತ ಝಿಯೋನಿಸ್ಟ್ ಆಂದೋಲನದ ವೈಚಾರಿಕ ಶಿಲ್ಪಿಗಳಲ್ಲೊಬ್ಬರಾಗಿದ್ದ ಹಂಗೇರಿ ಮೂಲದ ಥಿಯೋಡರ್ ಹೆರ್ಝೆಲ್ (Theodor Herzl) 1896ರಲ್ಲಿ ‘ಡೆರ್ ಜೂಡೆನ್ ಸ್ಟಾಟ್’ (ಯಹೂದಿ ದೇಶ) ಎಂಬೊಂದು ಕಿರುಹೊತ್ತಗೆಯನ್ನು ಪ್ರಕಟಿಸಿದರು. ಅದರಲ್ಲಿ ಅವರು ಹೀಗೆ ಬರೆದಿದ್ದರು:

ಯಹೂದಿಗಳು ಗಣ್ಯ ಸಂಖ್ಯೆಯಲ್ಲಿ ಇರುವಲ್ಲೆಲ್ಲಾ ಯಹೂದಿ ಕೇಂದ್ರಿತ ಬಿಕ್ಕಟ್ಟಿದೆ. ಅದು ಇಲ್ಲದಲ್ಲಿ, ಯಹೂದಿ ವಲಸಿಗರ ಆಗಮನದೊಂದಿಗೆ ಅದು ಬಂದು ಬಿಡುತ್ತದೆ. ಸ್ವಾಭಾವಿಕವಾಗಿಯೇ ನಾವು ನಮ್ಮ ದಮನ ನಡೆಯದ ಸ್ಥಳಗಳ ಕಡೆಗೆ ಆಕರ್ಷಿತರಾಗಿ ಅಲ್ಲಿಗೆ ಹೋಗಿ ಬಿಡುತ್ತೇವೆ. ಆದರೆ ಅಲ್ಲಿ ನಾವು ಕಂಡು ಬಂದೊಡನೆ ನಮ್ಮ ದಮನ ಆರಂಭವಾಗಿ ಬಿಡುತ್ತದೆ. ಅತ್ಯಂತ ನಾಗರಿಕ ನಾಡುಗಳೂ ಸೇರಿದಂತೆ ಎಲ್ಲ ಕಡೆಯೂ ಈಗ ಇದೇ ಪರಿಸ್ಥಿತಿ ಇದೆ. ಉದಾಹರಣೆಗೆ ಫ್ರಾನ್ಸ್ ಅನ್ನೇ ನೋಡಿ. ಯಹೂದಿ ಕೇಂದ್ರಿತ ಬಿಕ್ಕಟ್ಟಿಗೆ ಒಂದು ರಾಜಕೀಯ ಪರಿಹಾರ ಕಂಡುಕೊಳ್ಳುವ ತನಕ ಇದೇ ಪರಿಸ್ಥಿತಿ ಮುಂದುವರಿಯಲಿದೆ. .... ... ತಮ್ಮದೇ ಆದ ಒಂದು ದೇಶಕ್ಕಾಗಿ ಹಾತೊರೆಯುವ ಯಹೂದಿಗಳು ಖಂಡಿತ ಅದನ್ನು ಪಡೆಯುವರು. ಕೊನೆಗೂ ನಮಗೆ ನಮ್ಮದೇ ನೆಲದಲ್ಲಿ, ನಮ್ಮದೇ ಮನೆಗಳಲ್ಲಿ ಸ್ವತಂತ್ರ ಪುರುಷರಾಗಿ ನೆಮ್ಮದಿಯಿಂದ ಸಾಯಲು ಸಾಧ್ಯವಾಗುವುದು.

ಝಿಯೋನಿಸ್ಟ್ ಆಂದೋಲನದ ಧ್ಯೇಯೋದ್ದೇಶಗಳ ಬಗ್ಗೆ ಎಲ್ಲ ಯಹೂದಿಗಳಿಗೆ ಸಹಮತ ಇರಲಿಲ್ಲವಾದರೂ ಅವರ ಒಂದು ಗಣ್ಯ, ಶಕ್ತಿಶಾಲಿ ವರ್ಗವು ತನ್ನನ್ನು ಈ ಆಂದೋಲನದ ಜೊತೆ ಗುರುತಿಸಿಕೊಂಡಿತು. ಜಗತ್ತಿನ ಶ್ರೀಮಂತರು ಮತ್ತು ಅಧಿಕಾರಸ್ಥ ವ್ಯಕ್ತಿಗಳು ಮತ್ತು ಸಂಸ್ಥೆಗಳ ಮೇಲೆ ಪ್ರಭಾವ ಬೀರಿ ಅವರ ಮನವೊಲಿಸಲು ಸಾಧ್ಯವಾದರೆ ನಮ್ಮ ಗುರಿಸಾಧನೆ ಸುಲಭವಾಗುತ್ತದೆ ಎಂದು ನಂಬಿದ್ದ ಝಿಯೋನಿಸ್ಟ್ ನಾಯಕರು ಆ ನಿಟ್ಟಿನಲ್ಲಿ ಅವಿರತ ಶ್ರಮ ಆರಂಭಿಸಿದರು. ತಮ್ಮ ಸಮಾಜದ ಅಭಿವೃದ್ಧಿ ಮತ್ತು ತಮ್ಮ ಜನಾಂಗದ ದೀರ್ಘಕಾಲೀನ ಹಿತಾಸಕ್ತಿಗಳ ರಕ್ಷಣೆಗಾಗಿ ದೂರಗಾಮಿ ಯೋಜನೆಗಳನ್ನು ರೂಪಿಸಿದರು. ಅವರ ವ್ಯೆಹ ರಚನೆ ಮತ್ತು ಕಾರ್ಯಯೋಜನೆಗಳೆಲ್ಲಾ ಬಹಳ ಪರಿಣಾಮಕಾರಿಯಾಗಿದ್ದವೆಂಬುದು ಮುಂದಿನ ದಿನಗಳಲ್ಲಿ ಸಾಬೀತಾಯಿತು. ಝಿಯೋನಿಸ್ಟ್ ಆಂದೋಲನ ಅಸ್ತಿತ್ವಕ್ಕೆ ಬಂದ ಕೆಲವೇ ದಶಕಗಳ ಒಳಗೆ ಯಹೂದಿ ರಾಷ್ಟ್ರ ಸ್ಥಾಪನೆಯ ನಿಟ್ಟಿನಲ್ಲಿ ಒಂದು ದೊಡ್ಡ ಮುನ್ನಡೆಯನ್ನು ಸಾಧಿಸಲಾಯಿತು. ಬ್ರಿಟಿಷ್ ಸರಕಾರಕ್ಕೆ ನಿಕಟರಾಗಿದ್ದು ಯಹೂದಿ ದೇಶದ ಸ್ಥಾಪನೆಗಾಗಿ ಬ್ರಿಟನ್‌ನ ಸಹಾಯ ಯಾಚಿಸುತ್ತಾ ಇದ್ದ ಬ್ರಿಟನ್‌ನ ಓರ್ವ ಯಹೂದಿ ನಾಯಕನಿಗೆ ಶೀಘ್ರವೇ ಒಂದು ಐತಿಹಾಸಿಕ ಶುಭವಾರ್ತೆ ಸಿಕ್ಕಿ ಬಿಟ್ಟಿತು.

► ‘ಯಹೂದಿ ದೇಶ’ದ ಸ್ಥಾಪನೆಯ ನಿಟ್ಟಿನಲ್ಲಿ ಮೊದಲ ದೊಡ್ಡ ಹೆಜ್ಜೆ.

ಇಪ್ಪತ್ತನೇ ಶತಮಾನದ ಆದಿಯಲ್ಲಿ ಫೆಲೆಸ್ತೀನ್ ಎಂಬ ಅರಬ್ ನಾಡು ಖಿಲಾಫತ್ ಉಸ್ಮಾನಿಯಾ ಎಂಬ ಬೃಹತ್ ಮುಸ್ಲಿಮ್ ಸಾಮ್ರಾಜ್ಯದ ಅಧೀನದಲ್ಲಿತ್ತು. ಅಲ್ಲಿ ಯಹೂದಿ ದೇಶವೊಂದರ ಸ್ಥಾಪನೆಯ ನಿಟ್ಟಿನಲ್ಲಿ ಪ್ರಥಮ ಅಧಿಕೃತ ಹೆಜ್ಜೆ ಇಟ್ಟದ್ದು ಬ್ರಿಟಿಷ್ ಸರಕಾರ. ಪ್ರಥಮ ಜಾಗತಿಕ ಯುದ್ಧದ ನಡುವೆ 1917ರಲ್ಲಿ ಬಲಿಷ್ಠ ವಸಾಹತುಶಾಹಿ ಬ್ರಿಟಿಷ್ ಸಾಮ್ರಾಜ್ಯವು ಉಸ್ಮಾನಿಯಾ (Ottoman) ಸಾಮ್ರಾಟರನ್ನು ಸೋಲಿಸಿ ಫೆಲೆಸ್ತೀನ್ ಅನ್ನು ಅವರಿಂದ ಕಿತ್ತುಕೊಂಡಿತು. ಆ ವರ್ಷ ನವೆಂಬರ್ 2 ರಂದು ಘೋಷಿಸಲಾದ ‘ಬಾಲ್ ಫೋರ್ ಪ್ರಕಟಣೆ’ಯಲ್ಲಿ ಫೆಲೆಸ್ತೀನ್‌ನಲ್ಲಿ ಯಹೂದಿ ಜನಾಂಗಕ್ಕಾಗಿ ಒಂದು ರಾಷ್ಟ್ರವನ್ನು ಸ್ಥಾಪಿಸುವ ಸಂಕಲ್ಪವನ್ನು ಪ್ರಕಟಿಸಲಾಯಿತು.

ಇಲ್ಲಿ ಬಹಳ ಗಮನಾರ್ಹವಾದ ಒಂದು ಅಂಶವೇನೆಂದರೆ ‘ಬಾಲ್ ಫೋರ್ ಪ್ರಕಟಣೆ’ ಎಂಬುದು ಒಂದು ಒಪ್ಪಂದ ಅಥವಾ ಗೊತ್ತುವಳಿಯ ರೂಪದಲ್ಲಿರಲಿಲ್ಲ. ಅದು ಬ್ರಿಟನ್ ಸಾಮ್ರಾಜ್ಯದ ವಿದೇಶ ಕಾರ್ಯದರ್ಶಿ ಆರ್ಥರ್ ಬಾಲ್ ಫೋರ್ (Arthur Balfour) ಅವರು, ಬ್ರಿಟನ್ ನ ಯಹೂದಿ ಸಮುದಾಯದ ಪ್ರಭಾವಿ, ಶ್ರೀಮಂತ ನಾಯಕ ಹಾಗೂ ಝಿಯೋನಿಸ್ಟ್ ಆಂದೋಲನದ ಪ್ರತಿನಿಧಿ ಲಾರ್ಡ್ ರಾತ್ಸ್ ಚೈಲ್ಡ್ (Lord Rothschild) ಅವರಿಗೆ ಬರೆದ ಒಂದು ಬಹಿರಂಗ ಪತ್ರದ ರೂಪದಲ್ಲಿತ್ತು. ಪ್ರಸ್ತುತ ಪತ್ರದಲ್ಲಿ ಫೆಲೆಸ್ತೀನ್‌ನಲ್ಲಿ ಯಹೂದಿಗಳದ್ದೇ ಆದ ದೇಶವೊಂದನ್ನು ನಿರ್ಮಿಸುವ ನಿಟ್ಟಿನಲ್ಲಿ ಬ್ರಿಟಿಷ್ ಸರಕಾರವು ತನ್ನ ಕೈಲಾದ ಗರಿಷ್ಠ ಶ್ರಮ ನಡೆಸುವುದು ಎಂಬ ಸ್ಪಷ್ಟ ಆಶ್ವಾಸನೆ ನೀಡಲಾಗಿತ್ತು. ಸಾಲದ್ದಕ್ಕೆ ಈ ವಿಷಯವನ್ನು ‘ಝಿಯೋನಿಸ್ಟ್ ಫೆಡರೇಷನ್’ನ ಗಮನಕ್ಕೆ ತರಬೇಕೆಂದು ಮನವಿಯನ್ನೂ ಮಾಡಲಾಗಿತ್ತು. 1917 ನವೆಂಬರ್ 9 ರಂದು ಈ ಪತ್ರವನ್ನು ಮಾಧ್ಯಮಗಳಲ್ಲಿ ಪ್ರಕಟಿಸಲಾಯಿತು. ಇದು ಇಸ್ರೇಲ್ ದೇಶದ ಸ್ಥಾಪನೆಯ ನಿಟ್ಟಿನಲ್ಲಿ ಮೊದಲ ದೊಡ್ಡ ಹೆಜ್ಜೆಯಾಗಿತ್ತು.

► ಎರಡನೆಯ ನಿರ್ಣಾಯಕ ಹೆಜ್ಜೆ

1922 ರಲ್ಲಿ ವಿಶ್ವ ಸಂಸ್ಥೆಯ ಆಗಿನ ಪೂರ್ವಾವತಾರವಾಗಿದ್ದ ಲೀಗ್ ಆಫ್ ನೇಶನ್ಸ್ ಸಂಸ್ಥೆಯು ಅಂದು ಜೋರ್ಡನ್ ಮತ್ತು ಫೆಲೆಸ್ತೀನ್ ಪ್ರದೇಶಗಳನ್ನು ಉಸ್ಮಾನಿಯಾ ಆಡಳಿತಗಾರರ ಕೈಯಿಂದ ಕಿತ್ತುಕೊಂಡು ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದ ಬ್ರಿಟಿಷ್ ಸರಕಾರಕ್ಕೆ, ಫೆಲೆಸ್ತೀನ್‌ನಲ್ಲಿ ಯಹೂದಿ ರಾಷ್ಟ್ರವೊಂದನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕೆಂಬ ಅಧಿಕೃತ ಆದೇಶವೊಂದನ್ನು ಹೊರಡಿಸಿತು. ಜಗತ್ತಿನಾದ್ಯಂತ ಭಾರೀ ಭಾವನಾತ್ಮಕ ಚರ್ಚೆಗೊಳಗಾದ ಈ ಆದೇಶವು ಇಸ್ರೇಲ್ ದೇಶದ ನಿರ್ಮಾಣದ ಹಾದಿಯಲ್ಲಿ ಎರಡನೆಯ ನಿರ್ಣಾಯಕ ಹೆಜ್ಜೆಯಾಗಿತ್ತು.

► ಮೂರನೆಯ ಮಹಾ ಹೆಜ್ಜೆ

ಯೂರೋಪಿನ ಯಹೂದಿಗಳು ಫೆಲೆಸ್ತೀನ್ ನಾಡಿಗೆ ವಲಸೆ ಹೋಗುವ ಪ್ರಕ್ರಿಯೆ 20ನೇ ಶತಮಾನದ ಆರಂಭದಲ್ಲಿ ತುಂಬಾ ವ್ಯಾಪಕವಾಗಿ ಬಿಟ್ಟಿತು. ಯುರೋಪಿನಲ್ಲಿ ಕ್ರೈಸ್ತ ಮತ್ತು ಬಿಳಿಯ ಜನಾಂಗವಾದಿಗಳ ಕೈಯಲ್ಲಿ ಲಕ್ಷಾಂತರ ಯಹೂದಿಗಳ ಸಾಮೂಹಿಕ ಹತ್ಯಾಕಾಂಡಗಳು ನಡೆಯಲಾರಂಭಿಸಿದ ಬಳಿಕ ಅಂದರೆ ನಲ್ವತ್ತರ ದಶಕದಲ್ಲಿ ಈ ಪ್ರಕ್ರಿಯೆ ಮಹಾವಲಸೆಯ ರೂಪ ತಾಳಿಕೊಂಡಿತು. ಅತ್ತ ಅರಬ್ ಜನತೆಯಲ್ಲಿ ಈ ಪ್ರಕ್ರಿಯೆಯ ವಿರುದ್ಧ ಇದ್ದ ಅಸಮಾಧಾನವು ಧಾರ್ಮಿಕ ಹಾಗೂ ರಾಷ್ಟ್ರೀಯವಾದಿ ಆಯಾಮಗಳನ್ನು ಪಡೆದುಕೊಂಡು ಕುದಿಯತೊಡಗಿತು. ಅಲ್ಲಲ್ಲಿ ವಲಸಿಗರ ಮತ್ತು ಅವರ ರಕ್ಷಣೆಗೆ ಬದ್ಧರಾಗಿದ್ದ ಬ್ರಿಟಿಷ್ ವಸಾಹತುಶಾಹಿಗಳ ವಿರುದ್ಧ ಪ್ರತಿಭಟನೆಗಳು ಆರಂಭವಾದವು. 1935 ರಲ್ಲಿ ಬ್ರಿಟನ್ ಏಜಂಟರು ಬ್ರಿಟಿಷ್ ವಿರೋಧಿ ಅರಬ್ ನಾಯಕ ಇಝ್‌ಉದ್ದೀನ್ ಅಲ್ ಖಸ್ಸಾಮ್‌ರಹತ್ಯೆ ನಡೆಸಿದರು. ಅದರ ಬೆನ್ನಿಗೆ, ವಿವಿಧ ಅರಬ್ ಘಟನೆಗಳು ಜೆರುಸಲೇಮ್‌ನ ಮುಸ್ಲಿಮ್ ವಿದ್ವಾಂಸ ಮುಫ್ತಿ ಅಮೀನ್ ಅಲ್ ಹುಸೈನಿ ಅವರ ನೇತೃತ್ವದಲ್ಲಿ ಒಂದು ಅರಬ್ ಒಕ್ಕೂಟವನ್ನು ರಚಿಸಿಕೊಂಡರು. ಪ್ರಸ್ತುತ ಒಕ್ಕೂಟವು ಸಾಮೂಹಿಕ ಮುಷ್ಕರಕ್ಕೆ ಕರೆನೀಡಿದ್ದಲ್ಲದೆ, ಫೆಲೆಸ್ತೀನ್‌ಗೆ ಸ್ವತಂತ್ರ ದೇಶದ ಸ್ಥಾನಮಾನ ನೀಡಬೇಕು, ಯಹೂದಿಗಳ ವಲಸೆಯನ್ನು ತಡೆಯಬೇಕು, ವಲಸಿಗರಿಗೆ ಜಮೀನು ಮಾರಾಟ ಮಾಡುವುದನ್ನು ನಿಷೇಧಿಸಬೇಕು ಮುಂತಾದ ಬೇಡಿಕೆಗಳನ್ನು ಮಂಡಿಸಿತು. ತೆರಿಗೆ ನಿರಾಕರಣೆ ಮತ್ತು ಸರಕಾರೀ ಪೌರ ಸಂಸ್ಥೆಗಳ ಬಹಿಷ್ಕಾರ ಕೂಡಾ ಈ ಚಳವಳಿಯ ಭಾಗವಾಗಿತ್ತು. ಫೆಲೆಸ್ತೀನ್ ನ ಉತ್ತರ ಭಾಗದಲ್ಲಿ ಸ್ಥಳೀಯ ಮತ್ತು ನೆರೆಹೊರೆಯ ಕೆಲವು ಸಶಸ್ತ್ರ ಯುವ ಗುಂಪುಗಳು ಕೆಲವು ಆಯಕಟ್ಟಿನ ಸ್ಥಳಗಳನ್ನು ವಶಪಡಿಸಿಕೊಂಡು ಬ್ರಿಟಿಷ್ ಚೆಕ್ ಪೋಸ್ಟ್‌ಗಳ ಮೇಲೆ, ಅವರ ಯೋಧರು ಹಾಗೂ ಸರಕಾರೀ ಸೊತ್ತುಗಳ ಮೇಲೆ ಮತ್ತು ವಲಸಿಗರ ಬಡಾವಣೆಗಳ ಮೇಲೆ ದಾಳಿಗಳನ್ನು ನಡೆಸಲಾರಂಭಿಸಿದರು. ಹೀಗೆ ವ್ಯಾಪಕ ಬಂಡಾಯದ ಸನ್ನಿವೇಶವೊಂದು ತಲೆದೋರಿತು.

ಸಾಮಾನ್ಯ ಮಟ್ಟದ ವಿರೋಧವನ್ನು ಮಾತ್ರ ನಿರೀಕ್ಷಿಸಿದ್ದ ಬ್ರಿಟಿಷ್ ಆಡಳಿತವು ಪ್ರಸ್ತುತ ಬಂಡಾಯದ ಆಳ ಹಾಗೂ ವ್ಯಾಪಕ ಸ್ವರೂಪವನ್ನು ನೋಡಿ ಬೆಚ್ಚಿಬಿತ್ತು. ಈ ವಿರೋಧವನ್ನು ಹತ್ತಿಕ್ಕಲು 1937 ರಲ್ಲಿ ಬ್ರಿಟಿಷ್ ಆಡಳಿತವು ಒಟ್ಟು ದೇಶದಲ್ಲಿ ಕಟ್ಟುನಿಟ್ಟಿನ ಕರ್ಫ್ಯೂ ಹೇರಿತು. ಬ್ರಿಟನ್ ನಿಂದ 20,000 ಸಶಸ್ತ್ರ ಯೋಧರ ವಿಶೇಷ ಪಡೆಯೊಂದನ್ನು ಫೆಲೆಸ್ತೀನ್‌ಗೆ ತರಿಸಿಕೊಂಡಿತು. ಜೊತೆಗೇ ತಾವು ಈಗಾಗಲೇ ತರಬೇತಿಗೊಳಿಸಿದ್ದ 15,000 ವಲಸಿಗ ಯಹೂದಿ ಯೋಧರಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸಿತು. ಹೀಗೆ ಬಲಪ್ರಯೋಗಿಸಿ ಅರಬ್ ಬಂಡಾಯವನ್ನು ಹತ್ತಿಕ್ಕಲಾಯಿತು. ಈ ದಮನ ಕಾರ್ಯಾಚರಣೆಯಲ್ಲಿ 5,000 ಅರಬ್ ಪ್ರಜೆಗಳು ಹತರಾದರು. 15,000 ಮಂದಿ ಗಾಯಗೊಂಡರು. 5,600 ಮಂದಿಯನ್ನು ಜೈಲಿಗೆ ತಳ್ಳಲಾಯಿತು. ಕೊಲ್ಲುವಾಗ ಚಳವಳಿಯ ನಾಯಕರ ಜೀವಗಳಿಗೆ ವಿಶೇಷ ಪ್ರಾಶಸ್ತ್ಯ ನೀಡಲಾಗಿತ್ತು. ಸರಕಾರ ವಿರೋಧಿ ಅರಬ್ ಹೋರಾಟಗಾರರು ಸಮರ್ಥ ನಾಯಕರ ಅನುಪಸ್ಥಿತಿಯಲ್ಲಿ ಪಕ್ಷ, ಪಂಥಗಳ ಹೆಸರಲ್ಲಿ ವಿಭಜಿತರಾಗಿದ್ದರು. ಅವರಿಗೆ ತಮ್ಮ ಚಳವಳಿಯ ಕಾವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅತ್ತ ತೀವ್ರ ಅಭದ್ರತೆಯ ಕರಿನೆರಳಲ್ಲಿ, ಸಮಾನ ದಮನಿತ ಪ್ರಜ್ಞೆಯಿಂದ ನರಳುತ್ತಿದ್ದ ವಲಸಿಗ ಯಹೂದಿಗಳು ಒಗ್ಗಟ್ಟಾಗಿದ್ದರು. ಬ್ರಿಟಿಷ್ ಸರಕಾರದ ಸಂಪೂರ್ಣ ರಕ್ಷಣೆ ಮತ್ತು ಪೋಷಣೆಯೂ ಅವರಿಗೆ ಪ್ರಾಪ್ತವಿತ್ತು. ಅವರು ತಮ್ಮ ಗುರಿಯೆಡೆಗೆ ಮುನ್ನಡೆಯುತ್ತಲೇ ಇದ್ದರು. ಆದರೆ 1939 ರಲ್ಲಿ ಎರಡನೆಯ ಜಾಗತಿಕ ಯುದ್ಧವು ಆರಂಭವಾಯಿತು. ಈ ಸಂದರ್ಭದಲ್ಲಿ ಬ್ರಿಟಿಷ್ ಸರಕಾರಕ್ಕೆ ಎಲ್ಲ ಅರಬ್ ದೇಶಗಳ ಸಹಕಾರದ ಅಗತ್ಯವಿತ್ತು. ಆದ್ದರಿಂದ ಅದು ಫೆಲೆಸ್ತೀನ್‌ನಲ್ಲಿ ಅರಬ್ ಬಂಡಾಯವನ್ನು ಹತ್ತಿಕ್ಕಿದೊಡನೆ ಪೂರ್ಣಪ್ರಮಾಣದ ಯಹೂದಿ ರಾಷ್ಟ್ರವನ್ನು ಸ್ಥಾಪಿಸುವ ತನ್ನ ಯೋಜನೆಯನ್ನು ಅನುಷ್ಠಾನಿಸುವುದಕ್ಕೆ ಆತುರ ಪಡಲಿಲ್ಲ. ಅದು ತನ್ನ ಯೋಜನೆಯನ್ನು ಕೆಲವು ಹಂತಗಳಲ್ಲಿ ಅನುಷ್ಠಾನಿಸುವ ಕಾರ್ಯತಂತ್ರ ರೂಪಿಸಿತು. 1939ರಲ್ಲಿ ಬ್ರಿಟಿಷ್ ಸರಕಾರವು ಒಂದು ಶ್ವೇತ ಪತ್ರವನ್ನು ಹೊರಡಿಸಿ ಅದರಲ್ಲಿ ಈ ಕೆಳಗಿನ ಪ್ರಸ್ತಾವಗಳನ್ನು ಮುಂದಿಟ್ಟಿತು:

  • ಫೆಲೆಸ್ತೀನ್ ನಾಡಿನಲ್ಲಿ ಯಹೂದಿಗಳಿಗಾಗಿ ಒಂದು ಸ್ವತಂತ್ರ ರಾಷ್ಟ್ರವನ್ನು ಸ್ಥಾಪಿಸುವುದು.
  • 10 ವರ್ಷಗಳ ಬಳಿಕ ಒಂದು ಸ್ವತಂತ್ರ ಫೆಲೆಸ್ತೀನ್ ದೇಶದ ಸ್ಥಾಪನೆಯ ಸಾಧ್ಯತೆಯನ್ನು ಪರಿಗಣಿಸುವುದು.
  • ಮುಂದಿನ ಐದು ವರ್ಷಗಳಲ್ಲಿ 75,000 ಯಹೂದಿಗಳಿಗೆ ಫೆಲೆಸ್ತೀನ್ ನೊಳಗೆ ಪ್ರವೇಶಿಸಲು ಅನುಮತಿಸುವುದು. ಆ ಬಳಿಕ ಅವರ ಪ್ರವೇಶದ ವಿಷಯವನ್ನು ಅರಬ್ ಆಡಳಿತದ ತೀರ್ಮಾನಕ್ಕೆ ಬಿಟ್ಟು ಬಿಡಲಾಗುವುದು.
  •  ದೇಶದ ಕೆಲವು ನಿರ್ದಿಷ್ಟ ಭಾಗಗಳಲ್ಲಿ ಮಾತ್ರ ವಲಸಿಗ ಯಹೂದಿಗಳಿಗೆ ಜಮೀನು ಖರೀದಿಸುವ ಹಕ್ಕನ್ನು ನೀಡಲಾಗುವುದು.

ಈ ಪ್ರಸ್ತಾವಗಳು ಝಿಯೋನಿಸ್ಟ್ ಆಂದೋಲನದ ನಿರೀಕ್ಷೆಯ ಮಟ್ಟಕ್ಕಿಂತ ತುಂಬಾ ಕೆಳಗೆ ಇದ್ದುದರಿಂದ ಅವರು ಈ ಶ್ವೇತ ಪತ್ರವನ್ನು ತಿರಸ್ಕರಿಸಿದರು. ಅತ್ತ ಅರಬ್ ನಾಗರಿಕರಿಗೆ ಬ್ರಿಟಿಷರ ಯಾವುದೇ ಹೆಜ್ಜೆಯ ಬಗ್ಗೆ ನಂಬಿಕೆ ಇರಲಿಲ್ಲವಾದ್ದರಿಂದ ಅವರೂ ಅದನ್ನು ತಿರಸ್ಕರಿಸಿದರು. ಆದರೆ ಶ್ವೇತ ಸರಕಾರ ಹೊರಡಿಸಿದ ಪ್ರಸ್ತುತ ತಿರಸ್ಕೃತ ಶ್ವೇತಪತ್ರವೇ ಯಹೂದಿ ರಾಷ್ಟ್ರ ನಿರ್ಮಾಣದ ಪಯಣದಲ್ಲಿ ಒಂದು ಮಹಾ ಹೆಜ್ಜೆ ಎನಿಸಿತು.

► ವಲಸೆಯ ಪರ್ವ

ಯಹೂದಿಗಳೆಲ್ಲ ತಮ್ಮ ಇತಿಹಾಸದುದ್ದಕ್ಕೂ ಇಂದಿನ ಇಸ್ರೇಲ್ ಅಥವಾ ಫೆಲೆಸ್ತೀನ್‌ನಲ್ಲೇ ಇದ್ದವರೇನಲ್ಲ. ಫೆಲೆಸ್ತೀನ್‌ನಲ್ಲಿ ಯಹೂದಿಗಳ ಸಂಖ್ಯೆ ಕ್ರಮೇಣ ಹೆಚ್ಚುತ್ತಾ ಅಲ್ಲಿನ ಜನಸಂಖ್ಯೆಯ ಅನುಪಾತ ಬದಲಾಗುತ್ತಾ ಹೋದ ಇತಿಹಾಸ ತುಂಬಾ ಸ್ವಾರಸ್ಯಕರವಾಗಿದೆ.

 ಕ್ರಿ.ಶ. 1800 ರಲ್ಲಿ ಅಂದರೆ 19ನೇ ಶತಮಾನದ ಆರಂಭದ ವೇಳೆ ಫೆಲೆಸ್ತೀನ್ ನ ಒಟ್ಟು ಜನಸಂಖ್ಯೆ 2.75 ಲಕ್ಷವಿತ್ತು. ಆಗ ಅಲ್ಲಿ 2.46 ಲಕ್ಷ ಮುಸ್ಲಿಮರು, 22 ಸಾವಿರ ಕ್ರೈಸ್ತರು ಮತ್ತು ಕೇವಲ 7 ಸಾವಿರ ಯಹೂದಿಗಳಿದ್ದರು. ಆ ಶತಮಾನದ ಉತ್ತರಾರ್ಧದಲ್ಲಿ ಒಟ್ಟು ಜಾಗತಿಕ ಯಹೂದಿ ಜನಸಂಖ್ಯೆಯ ಬಹುತೇಕ 90ಶೇ. ಭಾಗವು ವಿವಿಧ ಯುರೋಪಿಯನ್ ನಾಡುಗಳಲ್ಲಿ ಚದರಿಕೊಂಡಿತ್ತು. ಯುರೋಪಿನ ವಿವಿಧ ದೇಶಗಳಲ್ಲಿ ಮತ್ತು ವಿಶೇಷವಾಗಿ ರಶ್ಯದ ಝಾರ್ ಗಳ ಅಧೀನವಿದ್ದ ಪ್ರದೇಶಗಳಲ್ಲಿ ಯಹೂದಿಗಳ ವಿರುದ್ಧ ತಾರತಮ್ಯ, ಅಸಹಿಷ್ಣುತೆ ಮತ್ತು ಹಿಂಸೆ ಹೆಚ್ಚುತ್ತಾ ಹೋದಂತೆ ಅಲ್ಲಿನ ಯಹೂದಿಗಳು ಧಾರ್ಮಿಕ ಹಾಗೂ ಐತಿಹಾಸಿಕವಾಗಿ ತಮಗೆ ಆಪ್ತವಾಗಿದ್ದ ಫೆಲೆಸ್ತೀನ್ ಮತ್ತದರ ಅಕ್ಕಪಕ್ಕದ ನಾಡುಗಳಿಗೆ ವಲಸೆ ಹೋಗಲಾರಂಭಿಸಿದರು. ಸಹಸ್ರಾರು ಸಂಖ್ಯೆಯಲ್ಲಿ ಯಹೂದಿಗಳು ವಲಸೆ ಬಂದು ಈ ಪ್ರದೇಶಗಳಲ್ಲಿ ಜಮೀನುಗಳನ್ನು ಖರೀದಿಸಿ ಕೃಷಿ, ವ್ಯವಸಾಯ ಮತ್ತು ವ್ಯಾಪಾರಗಳಲ್ಲಿ ತೊಡಗಿಕೊಂಡರು. 1890ರಲ್ಲಿ ಫೆಲೆಸ್ತೀನ್ ಮತ್ತದರ ಸುತ್ತಮುತ್ತ, ಯಹೂದಿಗಳ ಜನಸಂಖ್ಯೆ 43 ಸಾವಿರಕ್ಕೇರಿತು. ಮೊದಲ ಹಂತದಲ್ಲಿ ಈ ವಲಸೆಯ ವಿರುದ್ಧ ಪ್ರತಿರೋಧ ಕ್ಷೀಣವಾಗಿತ್ತು.

1896ರಲ್ಲಿ ಥಿಯೋಡರ್ ಹೆರ್ಝೆಲ್ (Theodor Herzl) ಅವರ ‘ಡೆರ್ ಜೂಡೆನ್ ಸ್ಟಾಟ್’ (ಯಹೂದಿ ದೇಶ) ಎಂಬ ಕಿರುಪುಸ್ತಕ ಪ್ರಕಟವಾಗಿ ಯಹೂದಿಗಳ ಕನಸಿನ ದೇಶದ ಕುರಿತಾದ ಚರ್ಚೆ ಹೆಚ್ಚಿದಂತೆ, ವಲಸಿಗರ ಸಂಖ್ಯೆಯೂ ಹೆಚ್ಚತೊಡಗಿತು. 1914ರಲ್ಲಿ ಫೆಲೆಸ್ತೀನ್‌ನ ಒಟ್ಟು ಜನಸಂಖ್ಯೆ 7 ಲಕ್ಷದ ಆಸುಪಾಸಿನಲ್ಲಿದ್ದು, ಅಲ್ಲಿ ಕ್ರಮವಾಗಿ 5.25 ಲಕ್ಷ ಮುಸ್ಲಿಮರು ಮತ್ತು 70 ಸಾವಿರ ಕ್ರೈಸ್ತರಿದ್ದಾಗ ಯಹೂದಿಗಳ ಸಂಖ್ಯೆ 94 ಸಾವಿರದಷ್ಟಿತ್ತು. 1931 ರಹೊತ್ತಿಗೆ ಯಹೂದಿಗಳ ಸಂಖ್ಯೆ ದುಪ್ಪಟ್ಟಿಗಿಂತಲೂ ಅಧಿಕವಾಗಿ 1.75 ಲಕ್ಷದಷ್ಟಾಯಿತು. ಅಂದರೆ 13 ದಶಕಗಳ ಅವಧಿಯಲ್ಲಿ ಫೆಲೆಸ್ತೀನ್‌ನ ಮುಸ್ಲಿಮರ ಸಂಖ್ಯೆಯಲ್ಲಿ ಕೇವಲ 3 ಪಟ್ಟು ಹಾಗೂ ಕ್ರೈಸ್ತರ ಸಂಖ್ಯೆಯಲ್ಲಿ 4 ಪಟ್ಟು ವೃದ್ಧಿಯಾಗಿದ್ದರೆ ಯಹೂದಿಗಳ ಸಂಖ್ಯೆಯಲ್ಲಿ 25 ಪಟ್ಟು ವೃದ್ಧಿಯಾಗಿತ್ತು.

ಈ ರೀತಿ ಯಹೂದಿ ಜನಸಂಖ್ಯೆಯಲ್ಲಿ ಅಸಾಮಾನ್ಯ ಹೆಚ್ಚಳವಾದಂತೆ ಈ ಪ್ರದೇಶದಲ್ಲಿ ಜನಸಂಖ್ಯಾ ಅನುಪಾತದ ಜೊತೆ ಸಾಮಾಜಿಕ ಸಮತೋಲನದಲ್ಲೂ ವ್ಯತ್ಯಯ ಉಂಟಾಗತೊಡಗಿತು. ‘ರ್ಮ, ಭಾಷೆ, ಸಂಸ್ಕೃತಿ ಮತ್ತು ಪ್ರವೃತ್ತಿಗಳಲ್ಲಿ ಇದ್ದ ವ್ಯತ್ಯಾಸಗಳು ಸ್ಥಳೀಯ ಅರಬ್ ಕ್ರೈಸ್ತರು ಮತ್ತು ಮುಸ್ಲಿಮರು ವಲಸಿಗ ಯಹೂದಿಗಳನ್ನು ಪ್ರತಿಕೂಲವಾಗಿ ನೋಡುವಂತೆ ಮಾಡಿತ್ತು. ವಿಶೇಷವಾಗಿ ಬಾಲ್ ಪೋರ್ ಪ್ರಕಟಣೆಯ ಹಿನ್ನೆಲೆಯಲ್ಲಿ, ಯಹೂದಿ ವಲಸಿಗರು ಕ್ರಮೇಣ ಫೆಲೆಸ್ತೀನ್ ಮತ್ತದರ ಆಸುಪಾಸಿನ ಪ್ರದೇಶವನ್ನು ಸಂಪೂರ್ಣವಾಗಿ ತಮ್ಮದಾಗಿಸಿಕೊಂಡು ಪರಂಪರಾಗತವಾಗಿ ಅಲ್ಲಿ ವಾಸಿಸುತ್ತಾ ಬಂದಿದ್ದ ಕ್ರೆ‘ಸ್ತರು ಮತ್ತು ಮುಸ್ಲಿಮರನ್ನು ಅಲ್ಲಿಂದ ಹೊರದಬ್ಬಲಿದ್ದಾರೆ ಎಂಬ ಆಶಂಕೆ ವ್ಯಾಪಕವಾಯಿತು. ಈ ಅಶಂಕೆ ವಲಸಿಗ ಯಹೂದಿಗಳ ವಿರುದ್ಧ ಅಸಾಮಾಧಾನವು ಹೆಚ್ಚುತ್ತಾ ಕೊನೆಗೆ 1936ರಲ್ಲಿ ಹಿಂಸೆಯ ರೂಪದಲ್ಲಿ ಸ್ಫೋಟವಾಗಲು ಮುಖ್ಯ ಕಾರಣವಾಯಿತು. ಬ್ರಿಟಿಷ್ ಪಡೆಗಳು ಮತ್ತು ಸಶಸ್ತ್ರ ಯಹೂದಿ ವಲಸಿಗ ಮಿಲೀಷಿಯಗಳು ಬಲಪ್ರಯೋಗಿಸಿ ಅರಬ್ ಬಂಡಾಯವನ್ನು ಹೊಸಕಿ ಹಾಕಿದವು.

ಯಹೂದಿ ವಲಸಿಗರ ಒಂದು ವರ್ಗವು ನಗರಗಳಲ್ಲಿ ಇತರ ಸಮುದಾಯಗಳ ನಡುವೆ ಬದುಕುತ್ತಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಝಿಯೋನಿಸ್ಟ್ ಗುಂಪುಗಳು ದೊಡ್ಡ ಜಮೀನುಗಳನ್ನು ಖರೀದಿಸಿ ಯಹೂದಿಗಳಿಗೆ ಮಾತ್ರ ಮೀಸಲಾದ ಕಾಲನಿಗಳನ್ನು ಕಟ್ಟಲಾರಂಭಿಸಿದ್ದರು. ನಲ್ವತ್ತರ ದಶಕದ ಕೊನೆಯ ವೇಳೆಗೆ ಅಂತಹ 200 ಕ್ಕೂ ಹೆಚ್ಚಿನ ಕಾಲನಿಗಳು ನಿರ್ಮಾಣವಾಗಿದ್ದವು. ಫೆಲೆಸ್ತೀನ್ನ ಬಹುತೇಕ 15 ಶೇ. ವ್ಯವಸಾಯ ಯೋಗ್ಯ ಜಮೀನು ಯಹೂದಿಗಳ ಮಾಲಕತ್ವಕ್ಕೆ ಬಂತು. ಜನಸಂಖ್ಯೆಯಲ್ಲಿ ವಲಸಿಗರ ಪ್ರಮಾಣ 30 ಶೇ. ವನ್ನು ದಾಟಿತು. ಈ ಒಟ್ಟು ಪ್ರಕ್ರಿಯೆ ಮೌನವಾಗಿ, ಆದರೆ ಬಹಳ ವ್ಯವಸ್ಥಿತವಾಗಿ ನಡೆಯಿತು.

Writer - ಎ.ಎಸ್. ಪುತ್ತಿಗೆ

contributor

Editor - ಎ.ಎಸ್. ಪುತ್ತಿಗೆ

contributor

Byline - ಎ.ಎಸ್. ಪುತ್ತಿಗೆ

contributor

Similar News