×
Ad

ಪತ್ರಕರ್ತ ರಾಮ್ ಚಂದರ್ ಛತ್ರಪತಿ ಕೊಲೆ ಪ್ರಕರಣದಲ್ಲಿ ಡೇರಾ ಮುಖ್ಯಸ್ಥ‌ ಗುರ್ಮೀತ್ ಸಿಂಗ್ ಖುಲಾಸೆ; 'ಪೂರಾ ಸಚ್' ಪತ್ರಿಕೆಯ ಛತ್ರಪತಿ ಕೊಲೆಯಾಗಿದ್ದೇಕೆ?

ಗುರ್ಮೀತ್‌ ಸಿಂಗ್‌ ನ ಮುಖವಾಡ ಕಳಚಿದ್ದ ʼಪೂರಾ ಸಚ್ʼ

Update: 2026-03-07 17:38 IST

 ಗುರ್ಮೀತ್ ಸಿಂಗ್| Photo Credit : PTI

2002 ರ ಅಕ್ಟೋಬರ್‌ನಲ್ಲಿ ನಡೆದ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಹತ್ಯೆ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ (DSS) ಮುಖ್ಯಸ್ಥ ಗುರ್ಮೀತ್ ಸಿಂಗ್ ನನ್ನು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಶನಿವಾರ ಖುಲಾಸೆಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು ಮತ್ತು ನ್ಯಾಯಮೂರ್ತಿ ವಿಕ್ರಮ್ ಅಗರ್ವಾಲ್ ಅವರಿದ್ದ ಪೀಠ ಈ ತೀರ್ಪು ಪ್ರಕಟಿಸಿದೆ. ಆದಾಗ್ಯೂ ಈ ತೀರ್ಪನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಛತ್ರಪತಿ ಅವರ ಪುತ್ರ ಅನ್ಶುಲ್ ತಿಳಿಸಿದ್ದಾರೆ.

ಈ ಹಿಂದೆ ಪಂಚಕುಲದ ವಿಶೇಷ ಸಿಬಿಐ ನ್ಯಾಯಾಲಯವು ಡೇರಾ ಮುಖ್ಯಸ್ಥ ಮತ್ತು ಇತರ ಮೂವರನ್ನು 2019 ಜನವರಿ 17ರಂದು ದೋಷಿಗಳೆಂದು ಘೋಷಿಸಿತು. ವಿಚಾರಣಾ ನ್ಯಾಯಾಲಯವು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ರೂ 50,000 ದಂಡ ವಿಧಿಸಿತ್ತು.

►2002ರ ಕೊಲೆ ಪ್ರಕರಣ

ಅ. 24, 2002 ರಂದು ಛತ್ರಪತಿ ಅವರಿಗೆ ಮನೆ ಮುಂದೆಯೇ ಅತ್ಯಂತ ಹತ್ತಿರದಿಂದ ಗುಂಡು ಹಾರಿಸಲಾಗಿತ್ತು. ಡೇರಾದಲ್ಲಿ ಸಾಧ್ವಿಗಳಾಗಿ ಸೇರಿದ ಮಹಿಳೆಯರ ಮೇಲೆ ಡೇರಾ ಮುಖ್ಯಸ್ಥರು ಹೇಗೆ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಎಸಗಿದರು ಎಂಬುದನ್ನು ವಿವರಿಸುವ ಅನಾಮಧೇಯ ಪತ್ರವನ್ನು ಛತ್ರಪತಿ ಅವರ 'ಪೂರಾ ಸಚ್' ಪತ್ರಿಕೆ ಪ್ರಕಟಿಸಿದ ತಿಂಗಳುಗಳ ನಂತರ ಈ ಹತ್ಯೆ ನಡೆದಿದೆ.

2019 ಜನವರಿ 17ರಂದು, ಪಂಚಕುಲದ ವಿಶೇಷ ಸಿಬಿಐ ನ್ಯಾಯಾಲಯವು ಗುರ್ಮೀತ್ ಸಿಂಗ್ ಮತ್ತು ಇತರ ಮೂವರಿಗೆ ಜೀವಾವಧಿ ಶಿಕ್ಷೆ ಮತ್ತು ರೂ50,000 ದಂಡ ವಿಧಿಸಿತು. ಡೇರಾ ಮುಖ್ಯಸ್ಥ ಮತ್ತು ಇತರ ಆರೋಪಿಗಳು 2019 ರಲ್ಲಿ ಆದೇಶವನ್ನು ಪ್ರಶ್ನಿಸಿದ್ದರು.

ಗುರ್ಮೀತ್ ಸಿಂಗ್ 2017 ರಿಂದ ಎರಡು ಅತ್ಯಾಚಾರ ಪ್ರಕರಣಗಳಲ್ಲಿ 20 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದು ಹ‌ರ್ಯಾಣದ ರೋಹ್ಟಕ್‌ನ ಸುನಾರಿಯಾ ಜೈಲಿನಲ್ಲಿದ್ದಾನೆ. 2017 ಆಗಸ್ಟ್ 25ರಂದು ಅತ್ಯಾಚಾರ ಪ್ರಕರಣದಲ್ಲಿ ಗುರ್ಮೀತ್ ಸಿಂಗ್ ತಪ್ಪಿತಸ್ಥ ಎಂದು ನ್ಯಾಯಾಲಯ ತೀರ್ಪು ಪ್ರಕಟಿಸಿದಾಗ, ಪಂಚಕುಲ ಮತ್ತು ಹರ್ಯಾಣದ ಇತರ ಪಟ್ಟಣಗಳಲ್ಲಿ ಆತನ ಅನುಯಾಯಿಗಳು ದಾಂಧಲೆ ನಡೆಸಿದ್ದರು. ಈ ಹಿಂಸಾಚಾರದಲ್ಲಿ 40 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದು ಹಲವಾರು ಮಂದಿಗೆ ಗಾಯಗಳಾಗಿತ್ತು .

2022ರಲ್ಲಿ ನಡೆದ ಡೇರಾ ವ್ಯವಸ್ಥಾಪಕ ರಂಜಿತ್ ಸಿಂಗ್ ಅವರ ಕೊಲೆ ಪ್ರಕರಣದಲ್ಲಿ 2024 ಮೇ 28ರಂದು ಹೈಕೋರ್ಟ್ ಗುರ್ಮೀತ್‌ ಸಿಂಗ್‌ ನನ್ನು ಖುಲಾಸೆಗೊಳಿಸಿತು. 2015ರಲ್ಲಿ ಧರ್ಮಗ್ರಂಥಕ್ಕೆ ಅಪಚಾರ ಮಾಡಿದ ಪ್ರಕರಣ ಸಂಬಂಧಿಸಿದ ಹಲವಾರು ಎಫ್‌ಐಆರ್‌ಗಳಲ್ಲಿಯೂ ಗುರ್ಮೀತ್‌ ಸಿಂ ಹೆಸರಿದೆ. ಈ ವರ್ಷದ ಜನವರಿಯಲ್ಲಿ ಗುರ್ಮೀತ್‌ ಸಿಂ 40 ದಿನಗಳ ಪೆರೋಲ್ ನಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ.

►ಪತ್ರಕರ್ತನಿಗೆ ಗುಂಡೇಟು

ಪತ್ರಕರ್ತ ರಾಮ್ ಚಂದರ್ ಛತ್ರಪತಿ ಅವರ ಮಗ ಅನ್ಶುಲ್ ಪ್ರಕಾರ, ಒಂದು ರಾತ್ರಿ ಕುಟುಂಬವು ಊಟಕ್ಕೆ ಸಿದ್ಧತೆ ಮಾಡುತ್ತಿದ್ದಾಗ ಯಾರೋ ತಂದೆಯನ್ನು ಕರೆದರು. ಯಾರು ಎಂದು ನೋಡಲು ಅಪ್ಪ ಹೊರಗೆ ಹೋದರು. ನಾನು ಅಪ್ಪನನ್ನು ಹಿಂಬಾಲಿಸಿದೆ. ಸ್ಕೂಟರ್‌ನಲ್ಲಿ ಇಬ್ಬರು ವ್ಯಕ್ತಿಗಳು ನಿಂತಿರುವುದು ಕಂಡಿತು, ಇಬ್ಬರೂ ರಿವಾಲ್ವರ್‌ಗಳನ್ನು ಹಿಡಿದಿದ್ದರು. ನಾವು ಪ್ರತಿಕ್ರಿಯಿಸುವ ಮೊದಲು, ಅವರಲ್ಲಿ ಒಬ್ಬರು ಗುಂಡು ಹಾರಿಸಿದ. ಅಪ್ಪನಿಗೆ ಐದು ಗುಂಡುಗಳು ತಗುಲಿತು .

ಗುಂಡು ಹಾರಿಸಿದವರು ಸ್ಕೂಟರ್ ಅನ್ನು ಬಿಟ್ಟು ಅಲ್ಲಿಂದ ಓಡಿಹೋದರು. ಅವರಲ್ಲಿ ಒಬ್ಬನನ್ನು ಸ್ಥಳದಲ್ಲಿ ಬಂಧಿಸಲಾಯಿತು.

ನಾನು ನನ್ನ ಅಪ್ಪನೊಂದಿಗೆ ಆಸ್ಪತ್ರೆಯಲ್ಲಿದ್ದ ಕಾರಣ ನನ್ನ ಕಿರಿಯ ಸಹೋದರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದರು. ನಂತರ, ಪೊಲೀಸರು ಎರಡನೇ ಕೊಲೆಗಾರನನ್ನು ಬಂಧಿಸಿದರು. ಕೊಲೆಗೆ ಬಳಸಲಾದ ರಿವಾಲ್ವರ್ ಇಬ್ಬರಿಂದಲೂ ವಶಪಡಿಸಿಕೊಳ್ಳಲಾಯಿತು. ತನಿಖೆಯ ಸಮಯದಲ್ಲಿ, ಎರಡನೇ ಕೊಲೆಗಾರ ಹೊಂದಿದ್ದ ರಿವಾಲ್ವರ್ ನಕಲಿ ಎಂದು ಪೊಲೀಸರು ಕಂಡುಕೊಂಡರು. ಕೊಲೆಗೆ ಬಳಸಲಾದ ರಿವಾಲ್ವರ್‌ನ ಪರವಾನಗಿ ಡೇರಾದ ಮುಖ್ಯಸ್ಥ ಕಿಶನ್‌ಲಾಲ್ ಹೆಸರಿನಲ್ಲಿತ್ತು. ಕಿಶನ್‌ಲಾಲ್ ಕೆಲವೇ ದಿನಗಳಲ್ಲಿ ಪೊಲೀಸರಿಗೆ ಶರಣಾದರು.

ತಂದೆಗೆ ಪ್ರಜ್ಞೆ ಬಂದಾಗ, ಅವರು ತಮ್ಮ ಹೇಳಿಕೆಯನ್ನು ನೀಡಿದರು. ಹೇಳಿಕೆಯಲ್ಲಿ ಗುರ್ಮೀತ್ ಸಿಂಗ್ ಹೆಸರಿತ್ತು. ಆದರೆ, ಪೊಲೀಸರು ಆ ಹೇಳಿಕೆಯನ್ನು ಬದಲಾಯಿಸಿದರು. ಪೊಲೀಸರು ಡೇರಾದ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ, ಆದ್ದರಿಂದ ಅವರು ತನಿಖೆ ಮೂರು ಜನರನ್ನು (ಕಿಶನ್‌ಲಾಲ್ ಮತ್ತು ಇಬ್ಬರು ಹಂತಕರು) ಮೀರಿ ಮುಂದುವರಿಯಲು ಬಿಡಲಿಲ್ಲ ಎಂದಿದ್ದಾರೆ ಅನ್ಶುಲ್ .

ಪೊಲೀಸರ ಕ್ರಮದಿಂದ ಅತೃಪ್ತರಾದ ಕುಟುಂಬ ಸಿಬಿಐ ತನಿಖೆಗಾಗಿ ಪಂಜಾಬ್ ಮತ್ತು ಹ‌ರ್ಯಾಣ ಹೈಕೋರ್ಟ್‌ನ ಮೊರೆ ಹೋದರು. ತನಿಖೆಯನ್ನು 2003 ರಲ್ಲಿ ಸಿಬಿಐಗೆ ಹಸ್ತಾಂತರಿಸಲಾಯಿತು.

► ಗುರ್ಮೀತ್‌ ಸಿಂಗ್‌ ನ ಮುಖವಾಡ ಕಳಚಿದ ʼಪೂರಾ ಸಚ್ʼ

58 ವರ್ಷದ ಗುರ್ಮೀತ್ ಸಿಂಗ್ ಹಿಂದಿನಿಂದಲೂ ತನ್ನನ್ನು ತಾನು ಓರ್ವ ಧಾರ್ಮಿಕ ಆಧ್ಯಾತ್ಮಿಕ ನಾಯಕ ಎಂದು ಬಣ್ಣಿಸಿಕೊಂಡಿದ್ದ. ಪ್ರಪಂಚದಾದ್ಯಂತದ ಅನುಯಾಯಿಗಳು ಇಂದ್ರಿಯನಿಗ್ರಹ ಮತ್ತು ಬ್ರಹ್ಮಚರ್ಯದ ಪ್ರತಿಜ್ಞೆ ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸುತ್ತಿದ್ದ. ಆದರೆ 2002 ರಲ್ಲಿ ಸ್ಥಳೀಯ ಪತ್ರಿಕೆಯೊಂದರಲ್ಲಿ ಅನಾಮಧೇಯ ಪತ್ರವೊಂದು ಪ್ರಕಟವಾದಾಗ ಆತನ ಕಪಟ ಮುಖ ಜಗತ್ತಿಗೆ ತಿಳಿಯಿತು. ಆ ಪತ್ರವನ್ನು ಗುರ್ಮೀತ್ ಸಿಂಗ್‌ ನ ಅನಾಮಧೇಯ ಅನುಯಾಯಿಯೊಬ್ಬರು ಬರೆದಿದ್ದು ಪತ್ರಕರ್ತ ಛತ್ರಪತಿ ಅವರು ಅದನ್ನು ತಮ್ಮ ಹಿಂದಿ ಭಾಷೆಯ ಪತ್ರಿಕೆ 'ಪೂರಾ ಸಚ್' ನಲ್ಲಿ ಪ್ರಕಟಿಸಿದ್ದರು.

ಆ ಪತ್ರದಲ್ಲಿ ಡೇರಾ ಸಚ್ಚಾ ಸೌದಾದಲ್ಲಿ ನಡೆಯುವ ಲೈಂಗಿಕ ದೌರ್ಜನ್ಯದ ಪ್ರಕರಣಗಳನ್ನು ವಿವರಿಸಲಾಗಿತ್ತು. ಆ ಪತ್ರವನ್ನು ಪ್ರಕಟಿಸುವ ನಿರ್ಧಾರ ಕೈಗೊಂಡಾಗ ಯಾರಾದರೂ ಒಂದು ದಿನ ನಿಮಗೆ ಗುಂಡು ಹಾರಿಸುತ್ತಾರೆ ಎಂದು ಅಪ್ಪನಿಗೆ ಅವರ ಸಹೋದ್ಯೋಗಿಗಳು ಎಚ್ಚರಿಸಿದ್ದರು. ಆಗ ಅಪ್ಪ, ನಿಜವಾದ ಪತ್ರಕರ್ತ ಚಪ್ಪಲಿಯೇಟು ಅಲ್ಲ ಗುಂಡೇಟನ್ನು ಎದುರಿಸುತ್ತಾನೆ ಎಂದಿದ್ದರು ಎಂದು 'ದಿ ಪ್ರಿಂಟ್' ಜತೆ ಮಾತಾಡಿದ ಅನ್ಶುಲ್ ಹೇಳಿದ್ದಾರೆ.

ಪತ್ರವನ್ನು ಪ್ರಕಟಿಸಿದ ಐದು ದಿನಗಳ ನಂತರ 2002 ಅಕ್ಟೋಬರ್ 24ರಂದು, ಡೇರಾ ಸಚ್ಚಾ ಸೌದಾ ಅನುಯಾಯಿಗಳು ಛತ್ರಪತಿ ಮೇಲೆ ಅವರ ಮನೆಯ ಹೊರಗೆ ಗುಂಡು ಹಾರಿಸಿದರು. ಗಂಭೀರ ಗಾಯಗೊಂಡ ಛತ್ರಪತಿ ಒಂದು ತಿಂಗಳಲ್ಲಿ ಕೊನೆಯುಸಿರೆಳೆದರು. ಪೂರಾ ಸಚ್‌ನಲ್ಲಿ ಪ್ರಕಟವಾದ ಪತ್ರವು ಡೇರಾದಲ್ಲಿ ನಡೆದ ದೌರ್ಜನ್ಯದ ಬಗ್ಗೆ ಪ್ರಮುಖ ತನಿಖೆಯನ್ನು ಹುಟ್ಟುಹಾಕಿತ್ತು.

► ಸ್ವಘೋಷಿತ ದೇವಮಾನವನ ವಿರುದ್ಧ ನಿಂತಿದ್ದ ಸಣ್ಣ ಪತ್ರಿಕೆಗಳು

2017ರಲ್ಲಿ ನ್ಯೂಸ್ ಲಾಂಡ್ರಿಯಲ್ಲಿ ಪ್ರಕಟವಾದ ವರದಿ ಪ್ರಕಾರ ಸಾಧ್ವಿ ಪ್ರಕರಣದಲ್ಲಿ ಅನಾಮಧೇಯ ಪತ್ರವನ್ನು ಪ್ರಕಟಿಸಲು ಎಲ್ಲಾ ಕಾರ್ಪೊರೇಟ್ ಮಾಧ್ಯಮ ಸಂಸ್ಥೆಗಳು ನಿರಾಕರಿಸಿದಾಗ, ರಾಮಚಂದರ್ ಛತ್ರಪತಿ ಡೇರಾದ 'ಪೂರಾ ಸಚ್' ಅನ್ನು ಎಲ್ಲರ ಮುಂದೆ ತಂದಿದ್ದರು. ಸಿರ್ಸಾದಿಂದ ಪ್ರಕಟವಾಗುವ ಪೂರಾ ಸಚ್ ಪತ್ರಿಕೆಯಲ್ಲಿ ಅನಾಮಧೇಯ ಪತ್ರ ಮೊದಲು ಪ್ರಕಟವಾದಾಗ, ರಾಮ್ ಚಂದರ್ ಅವರನ್ನು ಕೊಲೆ ಮಾಡಲಾಯಿತು. ಈ ಸುದ್ದಿ ರಾಷ್ಟ್ರೀಯ ಸುದ್ದಿಗಳಲ್ಲಿ ವರದಿಯಾಗಿತ್ತು. ಆದರೆ ಫತೇಹಾಬಾದ್‌ನ ಸಣ್ಣ ಸಂಜೆ ಪತ್ರಿಕೆ ಲೇಖಾ-ಜೋಖಾ ಬಗ್ಗೆ ಯಾರೂ ಮಾತನಾಡಲಿಲ್ಲ. ಲೇಖಾ-ಜೋಖಾ ಅದೇ ಪತ್ರವನ್ನು ಪ್ರಕಟಿಸಿದ್ದಕ್ಕಾಗಿ ಡೇರಾ ಭಕ್ತರು ಅದರ ಕಚೇರಿ ಮತ್ತು ಮುದ್ರಣಾಲಯವನ್ನು ಸುಟ್ಟುಹಾಕಿದರು. ಪತ್ರಿಕೆಗಳ ಪತ್ರಕರ್ತರು ಡೇರಾ ವಿರುದ್ಧ ಎಫ್‌ಐಆರ್ ದಾಖಲಿಸಿದರು. ಗುರ್ಮೀತ್‌ ಸಿಂಗ್‌ ನ ಸುಮಾರು 50,000 ಬೆಂಬಲಿಗರು ಡೇರಾ ವಿರುದ್ಧ ಯಾವುದೇ ಕ್ರಮ ಕೈಗೊಂಡರೆ ರಸ್ತೆಗಳನ್ನು ತಡೆದು ಪ್ರತಿಭಟನೆ ನಡೆಸುವುದಾಗಿ ಫತೇಹಾಬಾದ್ ಅಧಿಕಾರಿಗಳಿಗೆ ಬೆದರಿಕೆ ಹಾಕಿದರು.

ಈ ಘಟನೆಯನ್ನು ಕಣ್ಣಾರೆ ಕಂಡ ಸಾಮಾಜಿಕ ಕಾರ್ಯಕರ್ತೆ ಸುದೇಶ್ ಕುಮಾರಿ, ಸಾಧ್ವಿಯ ಪರವಾಗಿ ಧ್ವನಿ ಎತ್ತಿದ್ದಕ್ಕಾಗಿ ಒಂದೂವರೆ ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದರು. 2003 ಫೆಬ್ರವರಿ 5ರಂದು ಬಾಬಾ ವಿರುದ್ಧ ಫತೇಹಾಬಾದ್‌ನಲ್ಲಿ ಹರ್ಯಾಣದ ಜನ ಸಂಘರ್ಷ ಮಂಚ್ ಆಯೋಜಿಸಿದ್ದ ಪ್ರತಿಭಟನಾ ಅಭಿಯಾನದ ಮೇಲೆ ದಾಳಿ ನಡೆಸಲಾಯಿತು. ಲೇಖಾ-ಜೋಖಾ ಕಚೇರಿಯನ್ನು ಮೊದಲೇ ಸುಟ್ಟುಹಾಕಲಾಗಿತ್ತು. ಪತ್ರಕರ್ತರು ಡೇರಾ ವಿರುದ್ಧ ಲೂಟಿ, ಬೆಂಕಿ ಹಚ್ಚುವಿಕೆ ಮತ್ತು ಆಸ್ತಿಪಾಸ್ತಿ ಹಾನಿಯ ಪ್ರಕರಣವನ್ನು ದಾಖಲಿಸಿದರು. ಆದರೆ ಬಾಬಾನ ಅನುಯಾಯಿಗಳ ಬೆದರಿಕೆ ಎಷ್ಟಿತ್ತೆಂದರೆ ಪತ್ರಕರ್ತರು ಎಫ್‌ಐಆರ್ ಅನ್ನು ಹಿಂಪಡೆಯಬೇಕಾಯಿತು. ಅಧಿಕಾರಿಗಳು ಮತ್ತು ಸರ್ಕಾರ ಕೂಡ ಡೇರಾದ ಪರವಾಗಿ ನಿಂತಿದ್ದರು. ಪತ್ರಕರ್ತರು ತುಂಬಾ ಧೈರ್ಯಶಾಲಿಗಳಾಗಿದ್ದರು. ಆದರೆ ಯಾರೂ ಡೇರಾದ ಮುಂದೆ ನಿಲ್ಲಲು ಸಾಧ್ಯವಾಗಲಿಲ್ಲ ಎಂದು ಸುದೇಶ್ ಕುಮಾರಿ ಹೇಳಿದ್ದಾರೆ.

ಪೂರಾ ಸಚ್ ಮತ್ತು ಲೇಖಾ-ಜೋಖಾ ಜೊತೆಗೆ, ಹರ್ಯಾಣ ಜನದೇಶ ಟೈಮ್ಸ್ ಎಂಬ ಪತ್ರಿಕೆ ಕೂಡ ಸಾಧ್ವಿ ಅತ್ಯಾಚಾರ ಪ್ರಕರಣದಲ್ಲಿ ಪ್ರತಿಭಟನಾಕಾರರ ಬೆಂಬಲಕ್ಕೆ ನಿಂತಿತು. 2003 ಫೆಬ್ರವರಿ 5ರಂದು, ಸುದೇಶ್ ಕುಮಾರಿ ನೇತೃತ್ವದ ಜನರ ಗುಂಪೊಂದು ಪ್ರತಿಭಟನೆ ನಡೆಸಿತು. ಈ ವೇಳೆ ಮಹಿಳಾ ಪ್ರತಿಭಟನಾಕಾರರ ಬಟ್ಟೆಗಳನ್ನು ಹರಿದು ಹಾಕಲಾಯಿತು, ಪುರುಷರಿಗೆ ಥಳಿಸಲಾಯಿತು. ವಿಷಯಗಳನ್ನು ಇನ್ನಷ್ಟು ಹದಗೆಡಿಸಲು, ಕೊಲೆ ಯತ್ನಕ್ಕಾಗಿ ಅವರ ಮೇಲೆ "ನಕಲಿ" ಪ್ರಕರಣವನ್ನು ದಾಖಲಿಸಲಾಯಿತು. "ಕೊಲೆ ಪ್ರಯತ್ನ" ಐಪಿಸಿಯ ಸೆಕ್ಷನ್ 307ರ ಅಡಿಯಲ್ಲಿ ಸುಲಭ ಜಾಮೀನು ಪಡೆಯಲು ಅವಕಾಶ ನೀಡದ ಗಂಭೀರ ಆರೋಪವಾಗಿರುವುದರಿಂದ, 24 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಸುಮಾರು ಆರು ವಾರಗಳ ಕಾಲ ಜೈಲಿನಲ್ಲಿ ಇರಿಸಲಾಯಿತು. ನಂತರ ಪ್ರಕರಣವು ಅಂತಿಮವಾಗಿ ಇತ್ಯರ್ಥವಾಗುವ ಮೊದಲು ಅವರು ಮುಂದಿನ ಆರು ವರ್ಷ ನ್ಯಾಯಾಲಯದಲ್ಲಿ ಹೋರಾಡಬೇಕಾಯಿತು.

ಹರಿಯಾಣದಿಂದ ಪ್ರಕಟವಾಗುವ ಮತ್ತೊಂದು ಪತ್ರಿಕೆ ಹರಿಭೂಮಿ ಕೂಡ ಡೇರಾ ಮುಖ್ಯಸ್ಥನ ವಿರುದ್ಧ ಹೋರಾಡಿತ್ತು. ಆ ಸಮಯದಲ್ಲಿ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಟ್ರಿಬ್ಯೂನ್ ಮತ್ತು ಹಿಂದಿಯಲ್ಲಿ ಅಮರ್ ಉಜಾಲಾ ನಿಯಮಿತವಾಗಿ ರಾಮ್ ರಹೀಮ್ ವಿರುದ್ಧದ ಸುದ್ದಿಗಳನ್ನು ಪ್ರಕಟಿಸುತ್ತಿದ್ದು ಇಡೀ ಹರಿಯಾಣದಲ್ಲಿ ಸಾಧ್ವಿಯ ಪರವಾಗಿ ನಡೆದ ಪ್ರತಿಭಟನೆಗಳನ್ನು ವರದಿ ಮಾಡುತ್ತಿದ್ದವು.

ಹರ್ಯಾಣದಲ್ಲಿ ಅತ್ಯಾಚಾರಿ ಬಾಬಾ ವಿರುದ್ಧದ ಪ್ರತಿಭಟನಾ ಅಭಿಯಾನದ ಮುಂಚೂಣಿಯಲ್ಲಿರುವ ಮತ್ತು ಜನ ಸಂಘರ್ಷ ಮಂಚ್‌ನ ಪ್ರಧಾನ ಕಾರ್ಯದರ್ಶಿ, ಸಂಚಾಲಕಿ ಸುದೇಶ್ ಕುಮಾರಿ ಹೇಳುವಂತೆ, ಡೇರಾ ಬೆಂಬಲಿಗರು ಒಡ್ಡಿದ ಬೆದರಿಕೆ ಎಷ್ಟಿತ್ತೆಂದರೆ, ಗುರ್ಮೀತ್‌ ಸಿಂಗ್ ವಿರುದ್ಧ ಜನರಿಗೆ ತಿಳಿಸುವುದು ಬಿಟ್ಟು ಬೇರೆ ದಾರಿ ಇರಲಿಲ್ಲ. ಸಿಬಿಐ ತನಿಖೆಗಾಗಿ ನಾವು ಲಕ್ಷಾಂತರ ಸಹಿಗಳನ್ನು ಸಂಗ್ರಹಿಸಿದರೆ, ಪತ್ರಿಕೆಗಳು ನಮ್ಮ ಪರವಾಗಿ ಸುದ್ದಿಯನ್ನು ಪ್ರಕಟಿಸಿ, ಏನೋ ತಪ್ಪು ಸಂಭವಿಸಿದೆ ಅದನ್ನು ವಿಚಾರಣೆ ಮಾಡಬೇಕು ಎಂದು ಜನರಿಗೆ ತಿಳಿಸಿದವು.

ರಾಮ್ ಚಂದರ್ ಛತ್ರಪತಿಯವರ ಹತ್ಯೆಯ ನಂತರ, ಹರ್ಯಾಣ ಪತ್ರಿಕಾ ಸಂಘವು 2003 ಫೆಬ್ರವರಿಯಲ್ಲಿ ಸಭೆಯೊಂದನ್ನು ಆಯೋಜಿಸಿತು. ಅಂದಿನ ಸಂಘದ ಅಧ್ಯಕ್ಷ ಕೆ.ಬಿ. ಪಂಡಿತ್, ಛತ್ರಪತಿಯವರ ಕುಟುಂಬ ಸದಸ್ಯರಿಗೆ ವಿಮಾ ಯೋಜನೆಯಡಿಯಲ್ಲಿ 5 ಲಕ್ಷ ರೂ. ಪರಿಹಾರವನ್ನು ನೀಡುವುದಾಗಿ ಘೋಷಿಸಿದರು. ಅಲ್ಲದೆ, ಛತ್ರಪತಿಯವರ ಮಗ ಅನ್ಶುಲ್ ಅವರನ್ನು ಸಿರ್ಸಾದಲ್ಲಿ ರಾಷ್ಟ್ರೀಯ ದಿನಪತ್ರಿಕೆಗಳಲ್ಲಿ ಒಂದರಲ್ಲಿ ವರದಿಗಾರರನ್ನಾಗಿ ನೇಮಿಸಲಾಯಿತು . ಛತ್ರಪತಿಯವರ ಗೌರವಾರ್ಥವಾಗಿ ರಾಜ್ಯಮಟ್ಟದ ಪತ್ರಿಕೋದ್ಯಮ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಈ ಸುದ್ದಿ ಫೆಬ್ರವರಿ 10 ರಂದು ಹರಿಭೂಮಿಯ ಹಿಸಾರ್ ಆವೃತ್ತಿಯಲ್ಲಿ ಪ್ರಕಟವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಶ್ಮಿ ಕಾಸರಗೋಡು

contributor

Similar News